ಸರಿಯಾಗಿ ಪೆಟ್ರೋಲ್‌ ಹಾಕದ್ದನ್ನು ಪ್ರಶ್ನಿಸಿದ ಸವಾರನ ಮೇಲೆ ಹಲ್ಲೆ; ಬಂಕ್‌ ವ್ಯವಸ್ಥಾಪಕ, ಸಿಬ್ಬಂದಿ ಬಂಧನ

| Published : Mar 26 2024, 06:13 PM IST

ಸರಿಯಾಗಿ ಪೆಟ್ರೋಲ್‌ ಹಾಕದ್ದನ್ನು ಪ್ರಶ್ನಿಸಿದ ಸವಾರನ ಮೇಲೆ ಹಲ್ಲೆ; ಬಂಕ್‌ ವ್ಯವಸ್ಥಾಪಕ, ಸಿಬ್ಬಂದಿ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಹಣ ಪಡೆದು ಸರಿಯಾಗಿ ಪೆಟ್ರೋಲ್‌ ಹಾಕದಿರುವುದನ್ನು ಪ್ರಶ್ನಿಸಿದ ಯುವಕನ ಮೇಲೆ ಹಲ್ಲೆ ಮಾಡಿದ ಆರೋಪದಡಿ ಪೆಟ್ರೋಲ್‌ ಬಂಕ್‌ನ ಇಬ್ಬರು ಸಿಬ್ಬಂದಿಯನ್ನು ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹಣ ಪಡೆದು ಸರಿಯಾಗಿ ಪೆಟ್ರೋಲ್‌ ಹಾಕದಿರುವುದನ್ನು ಪ್ರಶ್ನಿಸಿದ ಯುವಕನ ಮೇಲೆ ಹಲ್ಲೆ ಮಾಡಿದ ಆರೋಪದಡಿ ಪೆಟ್ರೋಲ್‌ ಬಂಕ್‌ನ ಇಬ್ಬರು ಸಿಬ್ಬಂದಿಯನ್ನು ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪೀಣ್ಯ 2ನೇ ಹಂತದ ಬಿಆರ್‌ಎಸ್‌(ಎಚ್‌ಪಿ) ಪೆಟ್ರೋಲ್‌ ಬಂಕ್‌ನ ವ್ಯವಸ್ಥಾಪಕ ಸುರೇಶ್‌ ಮತ್ತು ಸಿಬ್ಬಂದಿ ದೇವರಾಜ್‌ ಬಂಧಿತರು. ಸುಂಕದಕಟ್ಟೆ ಮದ್ದೂರಮ್ಮ ಲೇಔಟ್‌ ನಿವಾಸಿ ಅಬೂಬಕ್ಕರ್‌ (32) ಹಲ್ಲೆಗೆ ಒಳಗಾಗದವರು. ಇವರ ಸಹೋದರ ಮಹಮದ್‌ ನೀಡಿದ ದೂರಿನ ಮೇರೆಗೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಪೆಟ್ರೋಲ್‌ ಬಂಕ್‌ ಮಾಲೀಕ ರಂಗಸ್ವಾಮಿ ಸೇರಿದಂತೆ ಕೆಲವರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ವಿವರ: ಗುರುವಾರ ಬೆಳಗ್ಗೆ ಅಬೂಬಕ್ಕರ್‌ ಪೆಟ್ರೋಲ್‌ ಬಂಕ್‌ಗೆ ಬಂದು ದ್ವಿಚಕ್ರ ವಾಹನಕ್ಕೆ ₹480ಕ್ಕೆ ಪೆಟ್ರೋಲ್‌ ಹಾಕಲು ಹೇಳಿದ್ದಾರೆ. ಈ ವೇಳೆ ಸಿಬ್ಬಂದಿ ಪೆಟ್ರೋಲ್‌ ಹಾಕಿದ ಬಳಿಕ ದರ ಸಂಖ್ಯೆಗಳು ಅಸ್ಪಷ್ಟವಾಗಿ ಕಾಣಿಸಿದೆ. ಆಗ ಸರಿಯಾದ ಬಿಲ್‌ ಕೊಡುವಂತೆ ಅಬೂಬಕ್ಕರ್‌ ಕೇಳಿದ್ದಾರೆ. ಅದಕ್ಕೆ ಪೆಟ್ರೋಲ್‌ ಬಂಕ್‌ ಸಿಬ್ಬಂದಿ ಬೇರೊಂದು ಬಿಲ್‌ ಕೊಡಲು ಮುಂದಾಗಿದ್ದಾನೆ.

ಈ ವೇಳೆ ಅಬೂಬಕ್ಕರ್‌, ನೀವು ಸರಿಯಾಗಿ ಪೆಟ್ರೋಲ್‌ ಹಾಕಿಲ್ಲ. ಬಿಲ್‌ ಸಹ ಸರಿಯಾಗಿ ಕೊಡುತ್ತಿಲ್ಲ ಏಕೆ ಎಂದು ಪ್ರಶ್ನಿಸಿದ್ದಾನೆ. ಇದರಿಂದ ಕೋಪಗೊಂಡ ಸಿಬ್ಬಂದಿ ಸುರೇಶ್‌ ಹಾಗೂ ಇತರರು ಅಬೂಬಕ್ಕರ್‌ ಜತೆಗೆ ಜಗಳ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ಅಬೂಬಕ್ಕರ್‌ ಮೇಲೆ ಹಲ್ಲೆ ಮಾಡಿದ್ದಾರೆ. ಪೆಟ್ರೋಲ್‌ ಬಂಕ್‌ ಮಾಲೀಕ ರಂಗಸ್ವಾಮಿ ಸಹ ಅವಾಚ್ಯ ಶಬ್ಧಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಸಂಬಂಧ ಅಬೂಬಕರ್‌ ಸಹೋದರ ಮಹಮದ್‌ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಲಾಗಿದೆ. ಉಳಿದವರ ಬಂಧನಕ್ಕೆ ಶೋಧ ಕಾರ್ಯ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.