ಸಾರಾಂಶ
ಹಳೇ ದ್ವೇಷದ ಹಿನ್ನೆಲೆಯಲ್ಲಿ ಯುವಕನ ಮೇಲೆ ಮತ್ತೋರ್ವ ಯುವಕ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿರುವ ಘಟನೆ ತೊಪ್ಪನಹಳ್ಳಿಯಲ್ಲಿ ಈಚೆಗೆ ಶುಕ್ರವಾರ ಜರುಗಿದೆ.
ಮದ್ದೂರು : ಹಳೇ ದ್ವೇಷದ ಹಿನ್ನೆಲೆಯಲ್ಲಿ ಯುವಕನ ಮೇಲೆ ಮತ್ತೋರ್ವ ಯುವಕ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ತೊಪ್ಪನಹಳ್ಳಿಯಲ್ಲಿ ಈಚೆಗೆ ಶುಕ್ರವಾರ ಜರುಗಿದೆ.
ಗ್ರಾಮದ ಟಿ.ಎಚ್.ಪವನ್ ಕುಮಾರ್ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡು ಮದ್ದೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನೆ ಸಂಬಂಧ ಮದ್ದೂರು ಠಾಣೆ ಪಿಎಸ್ಐ ಮಂಜುನಾಥ್ ಅವರು ತೋಪ್ಪನಹಳ್ಳಿಯ ರಾಮಲಿಂಗಯ್ಯನ ಪುತ್ರ ಪ್ರತಾಪ್ ವಿರುದ್ಧ ಭಾರತೀಯ ದಂಡ ಸಂಹಿತೆ ನೂತನ ಕಾಯ್ದೆ ಅನ್ವಯ ಪ್ರಕರಣ ದಾಖಲ ಮಾಡಿಕೊಂಡು ತಲೆಮರೆಸಿಕೊಂಡಿರುವ ಆರೋಪಿ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.
ಹಲ್ಲೆಗೊಳಗಾಗಿರುವ ಪವನ್ ಕುಮಾರ್ ಅನಾರೋಗ್ಯದಿಂದ ಮೃತಪಟ್ಟಿದ್ದ ತಮ್ಮ ಹಸುವನ್ನು ಗ್ರಾಮ ಸಮೀಪದ ಕೆರೆ ಅಂಗಳದಲ್ಲಿ ಅಂತ್ಯಕ್ರಿಯೆ ಮಾಡಲು ಟ್ರ್ಯಾಕ್ಟರ್‌ನಲ್ಲಿ ಕಳೇ ಬರವನ್ನು ಸಾಗಿಸುತ್ತಿದ್ದರು.
ಇದೇ ವೇಳೆ ತಮ್ಮ ಗೂಡ್ಸ್ ವಾಹನದಲ್ಲಿ ಎಳನೀರು ತುಂಬಿಕೊಂಡು ಬಂದ ಪ್ರತಾಪ್ ಹಳೇದ್ವೇಷದ ಹಿನ್ನೆಲೆಯಲ್ಲಿ ಪವನ್ ಕುಮಾರ್ ನನ್ನು ಅಡ್ಡಗಟ್ಟಿ ಜಗಳ ಮಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದ ಪರಿಣಾಮ ಪ್ರತಾಪ್ ತಮ್ಮ ವಾಹನದಲ್ಲಿದ್ದ ಕಬ್ಬಿಣದ ರಾಡ್‌ನಿಂದ ಪವನ್ ಮೇಲೆ ಹಲ್ಲೇ ನಡೆಸಿ ಆತನ ಎಡಗೈ ಹಾಗೂ ಹೊಟ್ಟೆ ಭಾಗಕ್ಕೆ ಹೊಡೆದು ತೀವ್ರವಾಗಿ ಗಾಯಗೊಳಿಸಿದ್ದಾನೆ. ನಂತರ ಸ್ಥಳಕ್ಕೆ ಧಾವಿಸಿದ ತೊಪ್ಪನಹಳ್ಳಿಯ ಪುನೀತ್, ಅಭಿ ಮತ್ತು ಗೋಪಾಲ್ ಎಂಬುವವರು ಜಗಳ ಬಿಡಿಸಿ ಪವನ್ ನನ್ನು ರಕ್ಷಣೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಮದಲ್ಲಿ ಪೊಲೀಸರಿಂದ ಶಾಂತಿ ಸಭೆ:
ತೊಪ್ಪನಹಳ್ಳಿಯಲ್ಲಿ ಶುಕ್ರವಾರ ಇಬ್ಬರು ಯುವಕರ ನಡುವೆ ನಡೆದ ಘರ್ಷಣೆ ಹಿನ್ನೆಲೆಯಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಶಿವಕುಮಾರ್ ಗ್ರಾಮದಲ್ಲಿ ಶಾಂತಿ ಸಮಿತಿ ಸಭೆ ನಡೆಸಿದರು.
ಯುವಕರಿಬ್ಬರ ಘರ್ಷಣೆ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂಬ ಉದ್ದೇಶದಿಂದ ಪೊಲೀಸರು ಶಾಂತಿ ಸಮಿತಿ ಸಭೆ ನಡೆಸಿದರು. ಇಬ್ಬರು ಯುವಕರ ಜಗಳದಿಂದ ಗ್ರಾಮಸ್ಥರು ಯಾವುದೇ ಪ್ರಚೋದನೆಗೆ ಒಳಗಾಗದೆ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ಮನವಿ ಮಾಡಿದರು. ತೊಪ್ಪನಹಳ್ಳಿಯಲ್ಲಿ 2016 ಮತ್ತು 18ನೇ ಸಾಲಿನಲ್ಲಿ ರಾಜಕೀಯ ವೈಷಮ್ಯದಿಂದ ಪರಸ್ಪರ ಗಲಾಟೆ ನಡೆದು ಸಾವು ನೋವು ಉಂಟಾಗಿದೆ. ಹಲವು ವರ್ಷಗಳಿಂದ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತು ವ್ಯವಸ್ಥೆ ಮುಂದುವರೆದಿದೆ. ಈ ಪ್ರಕರಣ ನ್ಯಾಯಾಲಯದ ವಿಚಾರಣೆ ಹಂತದಲ್ಲಿದ್ದು. ತಪ್ಪಿತಸ್ಥರಿಗೆ ಶಿಕ್ಷೆ ಯಾಗಲಿದೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟರು.
ಶುಕ್ರವಾರ ಗ್ರಾಮದಲ್ಲಿ ಎರಡು ಯುವಕರ ನಡುವೆ ನಡೆದ ಗಲಾಟೆ ಯಿಂದ ಗ್ರಾಮಸ್ಥರು ಯಾವುದೇ ಪ್ರಚೋದನೆಗೆ ಒಳಗಾಗದೆ ಎರಡು ಗುಂಪುಗಳ ಜನರು ಶಾಂತಿ ಸೌಹಾರ್ತೆಯಿಂದ ಜೀವನ ನಡೆಸಬೇಕು. ವಿವಾದಗಳು ಇದ್ದಲ್ಲಿ ನೇರವಾಗಿ ಠಾಣೆಗೆ ಬಂದು ಅಹವಾಲು ಸಲ್ಲಿಸುವಂತೆ ಸರ್ಕಲ್ ಇನ್ಸ್ ಪೆಕ್ಟರ್ ಶಿವಕುಮಾರ್ ಗ್ರಾಮ ಮುಖಂಡರಿಗೆ ಕಿವಿಮಾತು ಹೇಳಿದರು. ಶಾಂತಿ ಸಭೆಯಲ್ಲಿ ಪಿಎಸ್ಐ ಮಂಜುನಾಥ್, ಅಪರಾಧ ವಿಭಾಗದ ಪಿಎಸ್ಐ ರವಿ, ಗ್ರಾಮದ ಮುಖಂಡರಾದ ಚೆನ್ನೇಗೌಡ, ಶಿವಣ್ಣ, ಪ್ರಸನ್ನ, ಮುತ್ತುರಾಜ್ ಮತ್ತಿತರರು ಪಾಲ್ಗೊಂಡಿದ್ದರು.
ಅಪರಿಚಿತ ವಾಹನ ಡಿಕ್ಕಿ: ಕೂಲಿ ಕಾರ್ಮಿಕ ಸಾವು
ಮದ್ದೂರು:ಅಪರಿಚಿತ ವಾಹನ ಡಿಕ್ಕಿಯಾಗಿ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಗೆಜ್ಜಲಗೆರೆ ಮನ್ಮುಲ್ ಬಳಿಯ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ರಾತ್ರಿ ಜರುಗಿದೆ. ಮಂಡ್ಯ ತಾಲೂಕು ಕನ್ನಲಿ ಗ್ರಾಮದ ರಾಜು 57 ಮೃತ ವ್ಯಕ್ತಿ. ಗೆಜ್ಜಲಗೆರೆ ಗ್ರಾಮದ ಆಸುಪಾಸಿನಲ್ಲಿರುವ ಇಟ್ಟಿಗೆ ಕಾರ್ಖಾನೆ, ಆಲೆಮನೆ ಮತ್ತಿತರ ಸ್ಥಳಗಳಲ್ಲಿ ಕೂಲಿ ಕೆಲಸ ಮಾಡಿಕೊಂಡು ವಾಸವಾಗಿದ್ದನು. ಶನಿವಾರ ರಾತ್ರಿ 7 ಗಂಟೆ ಸುಮಾರಿಗೆ ರಾಜು ಟೀ ಕುಡಿಯಲು ಹೆದ್ದಾರಿ ದಾಟುತ್ತಿದ್ದಾಗ ವೇಗವಾಗಿ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದೆ. ಅಪಘಾತದ ರಭಸಕ್ಕೆ ರಾಜು ದೇಹ ಚಿದ್ರವಾಗಿದೆ. ಈ ಸಂಬಂಧ ಮದ್ದೂರು ಸಂಚಾರಿ ಠಾಣೆ ಪಿಎಸ್ಐ ಕಮಲಾಕ್ಷಿ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.