ವಕೀಲನು ತನ್ನ ಪತ್ನಿ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಕೋರ್ಟ್‌ ಆವರಣದಲ್ಲೇ ಬರ್ಬರ ಹತ್ಯೆ ಯತ್ನ

| Published : Nov 21 2024, 01:46 AM IST / Updated: Nov 21 2024, 04:18 AM IST

Crime News

ಸಾರಾಂಶ

ವಕೀಲನು ತನ್ನ ಪತ್ನಿ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಕ್ರುದ್ಧನಾದ ಕೋರ್ಟ್‌ ಸಹಾಯಕನೊಬ್ಬ, ಆ ವಕೀಲನನ್ನು ಬರ್ಬರವಾಗಿ ಕೊಲೆ ಮಾಡಲು ಯತ್ನಿಸಿದ ಘಟನೆ ಬುಧವಾರ ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ಹೊಸೂರಿನಲ್ಲಿ ನಡೆದಿದೆ.

ಹೊಸೂರು/ಆನೇಕಲ್‌:  ವಕೀಲನು ತನ್ನ ಪತ್ನಿ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಕ್ರುದ್ಧನಾದ ಕೋರ್ಟ್‌ ಸಹಾಯಕನೊಬ್ಬ, ಆ ವಕೀಲನನ್ನು ಬರ್ಬರವಾಗಿ ಕೊಲೆ ಮಾಡಲು ಯತ್ನಿಸಿದ ಘಟನೆ ಬುಧವಾರ ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ಹೊಸೂರಿನಲ್ಲಿ ನಡೆದಿದೆ.

ಮಾರಕಾಸ್ತ್ರದಿಂದ ಹಲ್ಲೆಗೆ ಒಳಗಾದ ವಕೀಲ ಕಣ್ಣನ್‌ (30) ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರೋಪಿ ಆನಂದ್‌ ಕುಮಾರ್‌ (39) ಕೋರ್ಟ್‌ನಲ್ಲಿ ಸಹಾಯಕನಾಗಿ ಕೆಲಸ ನಿರ್ವಹಿಸುತ್ತಿದ್ದ. ತನ್ನ ಪತ್ನಿ ಜೊತೆ ಕಿರಿಯ ವಕೀಲ ಕಣ್ಣನ್‌ ಅನೈತಿಕ ಸಂಬಂಧ ಹೊಂದಿದ್ದ ಎಂಬ ಕಾರಣಕ್ಕೆ ಮಚ್ಚಿನಿಂದ ಕೋರ್ಟ್‌ ಆವರಣದಲ್ಲಿಯೇ ಕೊಚ್ಚಿದ್ದಾನೆ. ಪರಿಣಾಮ ವಕೀಲ ಕಣ್ಣನ್‌ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ಅಲ್ಲಿನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಘಟನೆಯನ್ನು ಇತರರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ದೃಶ್ಯಗಳು ವೈರಲ್‌ ಆಗಿವೆ. ಬಳಿಕ ಆರೋಪಿ ಆನಂದ್‌ ಕುಮಾರ್‌ ಪೊಲೀಸರಿಗೆ ಶರಣಾಗಿದ್ದು, ಪೊಲೀಸರು ಆತನಿಂದ ಆಯುಧವನ್ನು ವಶಪಡಿಸಿಕೊಂಡಿದ್ದಾರೆ.

ವಕೀಲರ ಪ್ರತಿಭಟನೆ:ಹಾಡಹಗಲಿನಲ್ಲಿ ಕೋರ್ಟ್ ಆವರಣದಲ್ಲಿಯೇ ವಕೀಲನ ಹತ್ಯೆಯನ್ನು ಖಂಡಿಸಿ ಜಿಲ್ಲಾ ವಕೀಲರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ವಕೀಲರಿಗೆ ಸುರಕ್ಷತೆ ಇಲ್ಲ. ನ್ಯಾಯಪರ ಕೆಲಸ ಮಾಡುವವರಿಗೆ ಸರ್ಕಾರ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಅಣ್ಣಾಮಲೈ ಕಿಡಿ:ಹೊಸೂರಿನಲ್ಲಿ ವಕೀಲನ ಮೇಲಿನ ಬರ್ಬರ ಹಲ್ಲೆಗೆ ಸಂಬಂಧಿಸಿದಂತೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು, ‘ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ತಂಜಾವೂರಿನಲ್ಲಿ ತರಗತಿಯಲ್ಲಿಯೇ ಶಿಕ್ಷಕನ ಕೊಲೆಯಾಗಿದೆ. ಇಲ್ಲಿ ಕೋರ್ಟ್ ಆವರಣದಲ್ಲಿಯೇ ವಕೀಲನ ಕೊಲೆಗೆ ಯತ್ನ ನಡೆದಿದೆ. ಸ್ಟಾಲಿನ್‌ ತಮಿಳುನಾಡನ್ನು ಕಾನೂನು ಬಾಹಿರ ಕೃತ್ಯಗಳಿಗೆ ಕುಖ್ಯಾತವನ್ನಾಗಿ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.