ನಕಲಿ ಅಧಿಕಾರ ಪತ್ರ (ಪವರ್ ಆಫ್ ಅಟಾರ್ನಿ) ಸೃಷ್ಟಿಸಿಕೊಂಡು ಕೋಟ್ಯಂತರ ರು. ಮೌಲ್ಯದ ಸರ್ಕಾರಿ ಆಸ್ತಿಯನ್ನು ಕಬಳಿಸಲು ಸಂಚು ರೂಪಿಸಿದ ಆರೋಪದ ಮೇರೆಗೆ ಪಿ.ಸಿ.ಕೃಷ್ಣೇಗೌಡ ಎಂಬುವರ ವಿರುದ್ಧ ಮದ್ದೂರು ಪಟ್ಟಣ ಪೊಲೀಸರು ಎಫ್ಐಆರ್ ದಾಖಲಾಗಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ನಕಲಿ ಅಧಿಕಾರ ಪತ್ರ (ಪವರ್ ಆಫ್ ಅಟಾರ್ನಿ) ಸೃಷ್ಟಿಸಿಕೊಂಡು ಕೋಟ್ಯಂತರ ರು. ಮೌಲ್ಯದ ಸರ್ಕಾರಿ ಆಸ್ತಿಯನ್ನು ಕಬಳಿಸಲು ಸಂಚು ರೂಪಿಸಿದ ಆರೋಪದ ಮೇರೆಗೆ ಪಿ.ಸಿ.ಕೃಷ್ಣೇಗೌಡ ಎಂಬುವರ ವಿರುದ್ಧ ಮದ್ದೂರು ಪಟ್ಟಣ ಪೊಲೀಸರು ಎಫ್ಐಆರ್ ದಾಖಲಾಗಿದೆ.ಮದ್ದೂರು ತಾಲೂಕು ಮದ್ದೂರು ಗ್ರಾಮದ ಸರ್ವೇ ನಂ.೮೦೯/೨ರಲ್ಲಿ ೭೦ ಗುಂಟೆ ಹಾಗೆ ಸರ್ವೇ ನಂ.೮೦೮/೨ರಲ್ಲಿ ೬೧ ಗುಂಟೆ ಸರ್ಕಾರಿ ಜಮೀನುಗಳನ್ನು ಮೃತ ಕಾಡೇಗೌಡ ಅಲಿಯಾಸ್ ಕಾಡಯ್ಯ ಹೆಸರಿನಲ್ಲಿ ಮದ್ದೂರು ತಾಲೂಕು ಯಡವನಹಳ್ಳಿ ಗ್ರಾಮದ ಪಿ.ಸಿ.ಕೃಷ್ಣೇಗೌಡ ಅವರು ಕಾನೂನುಬಾಹಿರವಾಗಿ ನಕಲಿ ಅಧಿಕಾರ ಪತ್ರ ಸೃಷ್ಟಿಸಿಕೊಂಡು ಸರ್ಕಾರಿ ಆಸ್ತಿ ಕಬಳಿಕೆಗೆ ಸಂಚು ರೂಪಿಸಿರುವ ಕುರಿತು ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದರು.
ಈ ಸಂಬಂಧ ಉಪವಿಭಾಗಾಧಿಕಾರಿಗಳ ಮೂಲಕ ಪೂರಕ ದಾಖಲಾತಿಗಳನ್ನು ಪರಿಶೀಲಿಸಿ ವರದಿಯನ್ನು ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದರು. ವರದಿಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಜಮೀನಿನ ಆರ್ಟಿಸಿಯಲ್ಲಿ ತಾಲೂಕು ಪಂಚಾಯ್ತಿ ಮದ್ದೂರು ಎಂದು ದಾಖಲಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದರು.ನಡೆದಿದ್ದೇನು?
ಮದ್ದೂರು ತಾಲೂಕು ಮದ್ದೂರು ಗ್ರಾಮದ ಸರ್ವೇ ನಂ. ೮೦೯/೨ರಲ್ಲಿ ೭೦ ಗುಂಟೆ ಹಾಗೆ ಸರ್ವೇ ನಂ.೮೦೮/೨ರಲ್ಲಿ ೬೧ ಗುಂಟೆ ಸರ್ಕಾರಿ ಜಮೀನುಗಳ ಪ್ರಕರಣಗಳಲ್ಲಿನ ದಾಖಲೆಗಳನ್ನು ಅವಲೋಕಿಸಿದಾಗ ಪಿ.ಸಿ.ಕೃಷ್ಣೇಗೌಡರು ಕಾಡೇಗೌಡರ ಕುಟುಂಬದ ವಾರಸುದಾರರೇ ಅಲ್ಲ. ಅವರು ಹಾಜರುಪಡಿಸಿರುವ ಪವರ್ ಆಫ್ ಅಟಾರ್ನಿ ಪತ್ರವು ೧೬.೬.೧೯೮೭ರಂದು ನಡೆದಿದೆ. ಸ್ವತಃ ಪಿ.ಸಿ.ಕೃಷ್ಣೇಗೌಡರು ಹಾಜರು ಪಡಿಸಿರುವ ಪ್ರಕಾರ ಅವರ ಜನ್ಮದಿನಾಂಕ ೨೦.೫.೧೯೭೩ ಆಗಿದೆ. ಅಧಿಕಾರ ಪತ್ರ ನಡೆದಿರುವ ಸಮಯದಲ್ಲಿ ಪಿ.ಸಿ.ಕೃಷ್ಣೇಗೌಡರಿಗೆ ಕೇವಲ ೧೪ ವರ್ಷಗಳಾಗಿದೆ. ಅಂದರೆ, ಪಿ.ಸಿ.ಕೃಷ್ಣೇಗೌಡರು ಇನ್ನೂ ಅಪ್ತಾಪ್ತ ವಯಸ್ಸಿನವರಾಗಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಅಪ್ತಾಪ್ತ ವ್ಯಕ್ತಿಗೆ ಜನರಲ್ ಪವರ್ ಆಫ್ ಅಟಾರ್ನಿ ಪತ್ರವನ್ನು ನೀಡಲು ಅವಕಾಶವಿರುವುದಿಲ್ಲ ಎಂದು ತಿಳಿಸಲಾಗಿತ್ತು.ಅದೂ ಅಲ್ಲದೇ, ಈ ಅಧಿಕಾರ ಪತ್ರವನ್ನು ಸರ್ಕಾರಿ ಕಚೇರಿಗಳಲ್ಲಿ (ಬಿಡಿಎ ಮತ್ತು ಬಿಡಿಒ, ಬಿಎಂಐಸಿ, ಎಪಿಎ ಕಾರ್ಪೋರೇಷನ್, ಕೆಇಬಿ, ತಾಲೂಕು ಕಚೇರಿಗಳಲ್ಲಿ ಸೇರಿದಂತೆ) ನನ್ನ ಪರವಾಗಿ ವ್ಯವಹರಿಸಲು ಅಧಿಕಾರ ಕೊಟ್ಟಿದ್ದೇನೆ ಎಂದು ಉಲ್ಲೇಖವಾಗಿರುತ್ತದೆ. ಆದರೆ, ಬಿಎಂಐಸಿ ೧೯೯೫ ರಲ್ಲಿ ಪ್ರಾರಂಭವಾಗಿದ್ದು, ಈ ಪತ ವ್ಯವಹಾರವು ೧೯೮೭ರಲ್ಲಿ ನಡೆದಿದೆ. ಹಾಗಾಗಿ ಈ ಜನರಲ್ ಪವರ್ ಆಫ್ ಅಟಾರ್ನಿ ಪತ್ರವು ನಕಲಿ ಎನ್ನುವುದು ಸ್ಪಷ್ಟವಾಗಿದೆ.
ಈ ಪ್ರಕರಣದಲ್ಲಿ ಹಾಜರುಪಡಿಸಿರುವ ಕಂದಾಯ ದಾಖಲೆಗಳಾದ ಕೈಬರವಣಿಗೆ ಆರ್ಟಿಸಿಯನ್ನು ಕೆಲವು ಕಡೆ ತಿದ್ದಿರುವುದು ಹಾಗೂ ಶಾಹಿಯಲ್ಲಿ ವ್ಯತ್ಯಾಸವಿರುವುದು ಕಂಡುಬಂದಿದೆ. ಮೂಲ ಕಂದಾಯ ದಾಖಲೆಗಳನ್ನು ತಿದ್ದಲಾಗಿದ್ದು, ನಕಲಿ ಹಾಗೂ ತಿದ್ದಿರುವ ದಾಖಲಾತಿಗಳನ್ನು ನ್ಯಾಯಾಲಯಕ್ಕೆ ನೀಡಿ ಸುಳ್ಳು ಪ್ರಕರಣವನ್ನು ದಾಖಲು ಮಾಡಲಾಗಿದೆ. ಸ್ವತ್ತಿನ ಮೇಲ್ಮನವಿದಾರರು ವ್ಯವಸಾಯ ಮಾಡಿಕೊಂಡು ಬಂದಿರುವುದಾಗಿ ತಿಳಿಸಿದ್ದು, ಈ ಸ್ವತ್ತಿನಲ್ಲಿ ಈಗಾಗಲೇ ಸರ್ಕಾರಿ ಕಟ್ಟಡ ನಿರ್ಮಾಣವಾಗಿರುವುದು ಕಂಡುಬಂದಿತ್ತು.ಎರಡೂ ಸರ್ವೇ ನಂಬರ್ಗಳ ಸರ್ಕಾರಿ ಜಮೀನಿನ ಮೂಲ ದಾಖಲೆಗಳಾದ ಕೈಬರವಣಿಗೆ ಆರ್ಟಿಸಿಗಳನ್ನು ಪರಿಶೀಲಿಸಿ ಪಿ.ಸಿ.ಕೃಷ್ಣೇಗೌಡರ ವಿರುದ್ಧ ಭಾರತೀಯ ಸುರಕ್ಷಾ ಸಂಹಿತೆ ೨೦೨೩, ಕರ್ನಾಟಕ ಭೂ ಕಂದಾಯ ಅಧಿನಿಯಮ ೧೯೬೪ರಡಿ ಪ್ರತ್ಯೇಕವಾಗಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಉಪವಿಭಾಗಾಧಿಕಾರಿಗಳು ಸೂಚಿಸಿದ್ದಾರೆ. ಅದರಂತೆ ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.