ಚಿತ್ರನಟ ದರ್ಶನ್ ಪ್ರಮುಖ ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತಿಬ್ಬರು ಸಾಕ್ಷಿಗಳು (35ನೇ ಮತ್ತು 36ನೇ ಸಾಕ್ಷಿ) ಸೋಮವಾರ ಪ್ರತಿಕೂಲ ಸಾಕ್ಷ್ಯ ನುಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು:
ಚಿತ್ರನಟ ದರ್ಶನ್ ಪ್ರಮುಖ ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತಿಬ್ಬರು ಸಾಕ್ಷಿಗಳು (35ನೇ ಮತ್ತು 36ನೇ ಸಾಕ್ಷಿ) ಸೋಮವಾರ ಪ್ರತಿಕೂಲ ಸಾಕ್ಷ್ಯ ನುಡಿದ್ದಾರೆ.ಪ್ರಕರಣದ ವಿಚಾರಣೆಯನ್ನು ನಗರದ 59ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಸುಜಾತಾ ಎಂ.ಸಾಂಬ್ರಾಣಿ ಅವರು ಸೋಮವಾರ ಮುಂದುವರಿಸಿದರು.
ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನ ಕುಮಾರ್ (ಎಸ್‌ಪಿಪಿ) ಅವರ ಮನವಿ ಮೆರೆಗೆ ಆರ್.ಆರ್. ನಗರದ ಪಟ್ಟಣಗೆರೆ ಶೆಡ್ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ನರೇಂದ್ರ ಸಿಂಗ್ ಮತ್ತು ಶೆಡ್‌ನಲ್ಲಿ ಜಪ್ತಿ ಮಾಡಿದ ವಾಹನಗಳನ್ನು ನಿಲ್ಲಿಸುತ್ತಿದ್ದ ಕಂಪನಿಯೊಂದರ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಕಿರಣ್ ಅವರನ್ನು ಪ್ರಾಸಿಕ್ಯೂಷನ್ ಸಾಕ್ಷಿಯಾಗಿ ವಿಚಾರಣೆ ನಡೆಸಲಾಯಿತು.ಈ ವೇಳೆ ಸಾಕ್ಷಿ ಕಿರಣ್, 2024ರ ಜೂ.8ರಂದು (ರೇಣುಕಾಸ್ವಾಮಿ ಕೊಲೆ ನಡೆದ ದಿನ) ನಾನು ಕೆಲಸಕ್ಕಾಗಿ ಆರ್.ಆರ್.ನಗರದ ಪಟ್ಟಣಗೆರೆ ಶೆಡ್‌ಗೆ ಹೋಗಿದ್ದೆ. ಆ ದಿನ ಬೆಳಗ್ಗೆ 9.30 ಗಂಟೆಯಿಂದ ಸಂಜೆ 6.30ರವರೆಗೆ ಅಲ್ಲಿಯೇ ಕೆಲಸ ಮಾಡಿದ್ದೆ. ಆ ದಿನ ನಾನು ಕೆಲಸ ಮಾಡುವ ಸ್ಥಳದಲ್ಲಿ ಯಾವುದೇ ಘಟನೆ ನಡೆದಿರಲಿಲ್ಲ ಎಂದು ಹೇಳಿಕೆ ನೀಡಿದರು.
ನಂತರ ನ್ಯಾಯಾಲಯಕ್ಕೆ ಹಾಜರಾಗಿದ್ದ ಆರೋಪಿಗಳನ್ನು ತೋರಿಸಿ, ಇವರಲ್ಲಿ ಯಾರಾದರೂ ಗೊತ್ತೆ? ಎಂದು ಎಸ್‌ಪಿಪಿ ಕೇಳಿದಾಗ, ಅವರು ಯಾರು ಗೊತ್ತಿಲ್ಲ ಎಂದು ನುಡಿದರು. ಇನ್ನು ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿದ್ದ ಆರೋಪಿಗಳನ್ನು (ದರ್ಶನ್, ಪವಿತ್ರಾಗೌಡ ಸೇರಿ ಇನ್ನಿತರ ಆರೋಪಿಗಳು) ನೋಡಿದರೂ, ಅವರು ಯಾರೂ ನನಗೆ ಗೊತ್ತಿಲ್ಲ ಎಂದರು.ಪ್ರಕರಣ ದಾಖಲಾಗಿ 3-4 ದಿನಗಳ ನಂತರ ಪೊಲೀಸರು ನನ್ನನ್ನು ಕರೆದು ವಿಚಾರಣೆ ಮಾಡಿದ ವೇಳೆ ಅವರ ಮುಂದೆ ಏನು ಹೇಳಿದೆ ಎಂಬುದು ನನಗೆ ನೆನಪಿಗೆ ಬರುತ್ತಿಲ್ಲ. ಬಳಿಕ ನಾನು ಕೋರ್ಟ್‌ಗೆ ಹೋಗಿ ಹೇಳಿಕೆ ಕೊಟ್ಟಿರುತ್ತೇನೆ. ಅಂದು ಏನು ಹೇಳಿಕೆ ಕೊಟ್ಟೆ? ಅಲ್ಲಿ ಏನೇನು ನಡೆಯಿತು ಎಂಬುದು ನನಗೆ ಯೋಚನೆ ಮಾಡಿದರೂ ನೆನಪಿಗೆ ಬರುತ್ತಿಲ್ಲ ಎಂದು ಕಿರಣ್ ಹೇಳಿಕೆ ದಾಖಲಿಸಿದರು.
ಮತ್ತೊಬ್ಬ ಸಾಕ್ಷಿ ಸೆಕ್ಯೂರಿಟಿ ಗಾರ್ಡ್ ನರೇಂದ್ರ ಸಿಂಗ್, 10ನೇ ಆರೋಪಿ ಪವನ್ ಅನ್ನು ಗುರುತಿಸಿದರೂ, ಜೂ.8ರಂದು ಆತ ಶೆಡ್‌ಗೆ ಬಂದಿರುವುದನ್ನು ನಾನು ನೋಡಿಲ್ಲ. ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿದ್ದ ಆರೋಪಿಗಳು ನನಗೆ ಪರಿಚಯ ಇಲ್ಲ. ಜೂ.8ರಂದು ಶೆಡ್‌ನಲ್ಲಿ ನಡೆದ ಘಟನೆ ಬಗ್ಗೆ ನನಗೆ ಗೊತ್ತಿಲ್ಲ. ಅಲ್ಲಿ ಎಲ್ಲಾ ಸಾಮಾನ್ಯವಾಗಿತ್ತು. ಜೂ.13ರಂದು ಪೊಲೀಸರು ವಿಚಾರಣೆ ಮಾಡಿದ್ದರು. ಜೂ.14ರಂದು ನ್ಯಾಯಾಲಯಕ್ಕೆ ಪೊಲೀಸರು ನನ್ನನು ಕರೆದುಕೊಂಡು ಹೋಗಿದ್ದರು. ನ್ಯಾಯಾಧೀಶರ ಮುಂದೆ ಏನೂ ಆಗಿಲ್ಲ ಎಂದರೂ, ಆ ದಿನ ನ್ಯಾಯಾಲಯದ ಮುಂದೆ ನೀಡಿದ ಹೇಳಿಕೆಯ ಪುಟದಲ್ಲಿದ್ದ ತಮ್ಮ ಸಹಿಯನ್ನು ಗುರುತಿಸಿದರು. ಆದರೆ, ಅದನ್ನು ಎಲ್ಲಿ ಮಾಡಿರುತ್ತೇನೆ ಎಂದು ನನಗೆ ನೆನಪಿಲ್ಲ ಎಂದು ಹೇಳಿಕೆ ನೀಡಿದರು.ಈ ಹಂತದಲ್ಲಿ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು, ಸಾಕ್ಷಿ ನರೇಂದ್ರ ಸಿಂಗ್ ಮತ್ತು ಕಿರಣ್ ಅನ್ನು ಪ್ರತಿಕೂಲ (ಹಾಸ್ಟೈಲ್) ಸಾಕ್ಷಿಯೆಂದು ಪರಿಗಣಿಸಿ ಪಾಟೀ ಸವಾಲು ಮಾಡಲು ತಮಗೆ ಅನುಮತಿ ನೀಡಬೇಕು. ಹಾಗೆಯೇ, ಪಾಟೀ ಸವಾಲು ನಡೆಸಲು ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಅದಕ್ಕೆ ನ್ಯಾಯಾಧೀಶರು ಅನುಮತಿಸಿದರು. ಜೈಲಿನ ಹೊರಗೆ ಖಾಸಗಿ ಆಸ್ಪತ್ರೇಲಿ ಫಿಸಿಯೋಥೆರಪಿಗೆ ದರ್ಶನ್ ಮನವಿ :
ವಿಚಾರಣೆ ವೇಳೆ ದರ್ಶನ್ ಪರ ವಕೀಲರು ಹಾಜರಾಗಿ, ಬೆನ್ನುನೋವಿನಿಂದ ದರ್ಶನ್ ನರಳುತ್ತಿರುವ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಹೊರಗಿನ ನುರಿತ ಆಸ್ಪತ್ರೆಯಿಂದ (ಬಿಜಿಎಸ್ ಅಥವಾ ಹಾಸ್ಮಟ್ ಆಸ್ಪತ್ರೆ) ವೈಯಕ್ತಿಕ ಖರ್ಚಿನಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಅವಕಾಶ/ಅನುಮತಿ ಕಲ್ಪಿಸಬೇಕು. ದರ್ಶನ್‌ಗೆ ಕೇವಲ ಮೂರು ದಿನ ಫಿಸಿಯೋಥೆರಪಿ ಚಿಕಿತ್ಸೆ ಕಲ್ಪಿಸಲಾಗಿದೆ. ಈಗಲೂ ನೋವು ಕಡಿಮೆಯಾಗಿಲ್ಲ. ಹಾಗಾಗಿ, ಚಿಕಿತ್ಸೆ ಪಡೆಯುವುದು ಅಗತ್ಯವಾಗಿದೆ ಎಂದು ಕೋರಿ ಅರ್ಜಿ ಸಲ್ಲಿಸಿದರು. ಈ ಅರ್ಜಿ ಪರಿಗಣಿಸಿದ ನ್ಯಾಯಾಧೀಶರು, ದರ್ಶನ್ ಸದ್ಯದ ಆರೋಗ್ಯ ಸ್ಥಿತಿಗತಿ ಮತ್ತು ಅವರಿಗೆ ಕಲ್ಪಿಸಲಾಗಿರುವ ವೈದ್ಯಕೀಯ ಚಿಕಿತ್ಸೆ ಕುರಿತು ವರದಿ ಸಲ್ಲಿಸುವಂತೆ ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ವೈದ್ಯಾಧಿಕಾರಿಗೆ ಸೂಚನೆ ನೀಡಿ ವಿಚಾರಣೆಯನ್ನು ನ.24ಕ್ಕೆ ಮುಂದೂಡಿದರು.