ಸಾರಾಂಶ
ಕುಡಿದ ಮತ್ತಿನಲ್ಲಿ ಸ್ನೇಹಿತನಿಗೆ ಚಾಕುವಿನಿಂದ ಇರಿತು ಕೊಲೆಗೆ ಯತ್ನಿಸಿದ ಘಟನೆ ತಾಲೂಕಿನ ಕೆಆರ್‌ಎಸ್ ಬಳಿಯ ನಾರ್ಥ್ ಬ್ಯಾಂಕ್ ಗ್ರಾಮದ ಮೀನು ಮಾರಾಟ ಕೇಂದ್ರದಲ್ಲಿ ನಡೆದಿದೆ.
ಶ್ರೀರಂಗಪಟ್ಟಣ : ಕುಡಿದ ಮತ್ತಿನಲ್ಲಿ ಸ್ನೇಹಿತನಿಗೆ ಚಾಕುವಿನಿಂದ ಇರಿತು ಕೊಲೆಗೆ ಯತ್ನಿಸಿದ ಘಟನೆ ತಾಲೂಕಿನ ಕೆಆರ್‌ಎಸ್ ಬಳಿಯ ನಾರ್ಥ್ ಬ್ಯಾಂಕ್ ಗ್ರಾಮದ ಮೀನು ಮಾರಾಟ ಕೇಂದ್ರದಲ್ಲಿ ನಡೆದಿದೆ.
ಪಾಂಡವಪುರ ತಾಲೂಕು ಚಿನಕುರಳಿ ಹೋಬಳಿ ಸಣಬ ಹೋಬಳಿ ಕುಂಬಾರಕೊಪ್ಪಲು ಗ್ರಾಮದ ಅರುಣ (26) ಚಾಕು ಇರಿತಕ್ಕೆ ಒಳಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುಮಂತ್ ಮತ್ತು ಅರುಣ ಇಬ್ಬರು ಚಾಲಕ ವೃತ್ತಿಯಲ್ಲಿದ್ದು ಸ್ನೇಹಿತರಾಗಿದ್ದರು. ನಾರ್ಥ ಬ್ಯಾಂಕ್ ಬಳಿಯ ಕೆಆರ್‌ಎಸ್ ಮುಖ್ಯ ರಸ್ತೆಯ ಮೀನು ಮಾರಾಟ ಕೇಂದ್ರದಲ್ಲಿ ಒಟ್ಟಿಗೆ ಮದ್ಯ ಸೇವಿಸಿ ಮೀನು ತಿನ್ನುತ್ತಿದ್ದರು. ಈ ಹಿಂದೆ ಅರುಣ ಮತ್ತೊಬ್ಬ ಸ್ನೇಹಿತ ವಿನಯ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದನು ಎಂಬ ಕಾರಣಕ್ಕೆ ಮದ್ಯದ ಅಮಲಿನಲ್ಲಿದ್ದ ಸುಮಂತ್ ಕೋಪಗೋಂಡು ಮೀನು ಸ್ವಚ್ಛಗೊಳಿಸಲು ಇಟ್ಟಿದ ಚಾಕುವನ್ನು ತಂದು ಅರುಣನ ಹೊಟ್ಟೆಗೆ ಇರಿದು ಹಾಗೂ ಮುಖದ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಲು ಯತ್ನಿಸಿದ್ದಾನೆ.
ತಕ್ಷಣ ಸ್ಥಳೀಯರು ಕೆಆರ್‌ಎಸ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪಿಎಸ್‌ಐ ರಮೇಶ ಕರಕಿಕಟ್ಟಿ ಮತ್ತು ಸಿಬ್ಬಂದಿ ಆರೋಪಿ ಸುಮಂತ್ ನನ್ನು ವಶಕ್ಕೆ ಪಡೆದು ಚಾಕು ಇರಿತದಿಂದ ತೀವ್ರ ಗಾಯಗೊಂಡಿದ್ದ ಅರುಣನನ್ನು ಚಿಕಿತ್ಸೆಗಾಗಿ 108 ಆಂಬ್ಯುಲೆನ್ಸ್ ಮೂಲಕ ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಈ ಕುರಿತು ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.