ಸಾರಾಂಶ
ಬೆಂಗಳೂರು : ಮೆಟ್ರೋ ಕಾಮಗಾರಿ ಹಿನ್ನೆಲೆಯಲ್ಲಿ 18 ಚಕ್ರದ ಲಾರಿಯಲ್ಲಿ ವಯಾಡೆಕ್ಟ್ (ಸಿಮೆಂಟ್ ತಡೆಗೋಡೆ) ಸಾಗಿಸುವಾಗ ಸರಪಳಿ ತುಂಡಾಗಿ ಪಕ್ಕದಲ್ಲಿದ್ದ ಆಟೋರಿಕ್ಷಾದ ಮೇಲೆ ವಯಾಡೆಕ್ಟ್ ಬಿದ್ದು ಆಟೋ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಯಲಹಂಕ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೆಗಡೆನಗರ ನಿವಾಸಿ ಖಾಸಿಂ ಸಾಬ್ (35) ಮೃತ ಆಟೋ ಚಾಲಕ. ಮಂಗಳವಾರ ರಾತ್ರಿ ಸುಮಾರು 12 ಗಂಟೆಗೆ ಕೋಗಿಲು ಕ್ರಾಸ್ ಬಳಿ ಘಟನೆ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಆಟೋದಲ್ಲಿದ್ದ ಪ್ರಯಾಣಿಕ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.
ಮೆಟ್ರೋ ಕಾಮಗಾರಿ ಸಂಬಂಧ ವಯಾಡೆಕ್ಟ್‌ಗಳನ್ನು ಸಾಗಿಸಲಾಗುತ್ತಿತ್ತು. ಮಂಗಳವಾರ ಮಧ್ಯರಾತ್ರಿ ಕೋಗಿಲು ಕ್ರಾಸ್ ಬಳಿ ಲಾರಿ ತಿರುವು ಪಡೆಯುವಾಗ ಸರಪಳಿ ತುಂಡಾಗಿ ಬೃಹದಾಕಾರದ ವಯಾಡಕ್ಟ್ ಪಕ್ಕದಲ್ಲೇ ಬರುತ್ತಿದ್ದ ಆಟೋರಿಕ್ಷಾದ ಮೇಲೆ ಉರುಳಿ ಬಿದ್ದಿದೆ. ಈ ವೇಳೆ ಆಟೋ ಸಂಪೂರ್ಣ ನಜ್ಜುಗುಜ್ಜಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಟೋದಲ್ಲಿದ್ದ ಪ್ರಯಾಣಿಕ ತಕ್ಷಣ ಆಟೋದಿಂದ ಇಳಿದ ಪರಿಣಾಮ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸಂಚಾರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ತಕ್ಷಣ ಕ್ರೇನ್ ತರಿಸಿ ಆಟೋ ಮೇಲೆ ಬಿದ್ದಿದ್ದ ವಯಾಡೆಕ್ಟ್ ತೆರವುಗೊಳಿಸಿದ್ದಾರೆ. ಆಟೋದೊಳಗೆ ಸಿಲುಕಿದ್ದ ಚಾಲಕ ಖಾಸಿಂ ಖಾನ್‌ನ ಮೃತದೇಹವನ್ನು ಹೊರಗೆ ತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನೆ ಸಂಬಂಧ ಲಾರಿ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.