ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಎಲೆಕ್ಟ್ರಿಕ್ ಅಟೋರಿಕ್ಷಾಗಳಿಗೆ ಜಿಲ್ಲೆಯಾದ್ಯಂತ ಸಂಚರಿಸಲು ಅನುಮತಿ ನೀಡಿರುವ ಆದೇಶವನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಮಂಗಳೂರಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆಟೋ ರಿಕ್ಷಾ ಚಾಲಕರು ಗುರುವಾರ ಮೆರವಣಿಗೆ ಮಾಡಿ ಪ್ರತಿಭಟನಾ ಸಭೆ ನಡೆಸಿದರು.ದ.ಕ. ಜಿಲ್ಲಾ ಆಟೋರಿಕ್ಷಾ ಚಾಲಕರ ಮಾಲೀಕರ ಸಂಘಗಳ ಒಕ್ಕೂಟ ಮತ್ತು ಸಮಾನ ಮನಸ್ಕ ಆಟೋರಿಕ್ಷಾ ಚಾಲಕರ ಮಾಲೀಕರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ರಿಕ್ಷಾ ಚಾಲಕರು ಹಾಗೂ ಮಾಲೀಕರು ತಮ್ಮ ಆಟೋ ಸಂಚಾರ ಸ್ಥಗಿತಗೊಳಿಸಿ ನಗರದ ಅಂಬೇಡ್ಕರ್ ವೃತ್ತದಿಂದ ಕ್ಲಾಕ್ ಟವರ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಚಲೋ ಆಯೋಜಿಸಿದ್ದರೂ ಕ್ಲಾಕ್‌ಟವರ್‌ನಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಬ್ಯಾರಿಕೇಡ್ ಹಾಕಿ ತಡೆದ ಕಾರಣ ಕ್ಲಾಕ್‌ಟವರ್ ಬಳಿ ಪ್ರತಿಭಟನಾ ಪ್ರದರ್ಶನ ನಡೆಸಿದರು.ಸುಮಾರು ಮೂರು ಗಂಟೆಗೂ ಅಧಿಕ ಕಾಲ ನಡೆದ ಪ್ರತಿಭಟನೆ ನಡೆದಿದ್ದು, ಅಂತಿಮವಾಗಿ ಸೆ. 5ರಂದು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ, ಒಕ್ಕೂಟದ ಬೇಡಿಕೆಯಂತೆ ಜಿಲ್ಲಾಧಿಕಾರಿ ಆದೇಶ ವಾಪಾಸ್ ಪಡೆಯುವುದು ಹಾಗೂ ಇ ರಿಕ್ಷಾ ವಾಹನಗಳ ನೋಂದಣಿ ತಡೆಯುವ ಕುರಿತಂತೆ ಸಭೆ ನಡೆಸುವ ನಿರ್ಧಾರವನ್ನು ಆರ್‌ಟಿಒ ಶ್ರೀಧರ್ ಮಲ್ಲಾಡ್‌ರವರು ಘೋಷಿಸಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಒಕ್ಕೂಟದಿಂದ ನಿರ್ಣಯಿಸಲಾಗಿದ್ದ ಜಿಲ್ಲಾಧಿಕಾರಿ ಕಚೇರಿ ಚಲೋಗೆ ಅವಕಾಶ ನಿರಾಕರಣೆಯ ಹಿನ್ನೆಲೆಯಲ್ಲಿ ಕ್ಲಾಕ್‌ಟವರ್ ಬಳಿ ಪ್ರತಿಭಟನಾ ಪ್ರದರ್ಶನ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ತಮ್ಮ ಮನವಿ ಸ್ವೀಕರಿಸಿ ಆದೇಶವನ್ನು ಹಿಂಪಡೆಯಬೇಕು ಎಂದು ಆರಂಭದಲ್ಲಿ ಪ್ರತಿಭಟನಾಕಾರರು ಪಟ್ಟು ಹಿಡಿದರು.ಜಿಲ್ಲಾಧಿಕಾರಿ ಪರವಾಗಿ ಸ್ಥಳಕ್ಕೆ ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ಭೇಟಿ ನೀಡಿದಾಗ, ಆದೇಶ ಹಿಂಪಡೆಯಲು ಅಧಿಕಾರ ಇಲ್ಲದಾಗ ಮನವಿ ಸ್ವೀಕರಿಸಿ ಪ್ರಯೋಜನವಿಲ್ಲ. ಸ್ಥಳಕ್ಕೆ ಜಿಲ್ಲಾಧಿಕಾರಿಯೇ ಆಗಮಿಸಬೇಕು. ಇಲ್ಲವೇ ಆರ್‌ಟಿಒ ಬರಬೇಕು ಎಂದು ಪ್ರತಿಭಟನಾ ನಿರತ ರಿಕ್ಷಾ ಚಾಲಕರು- ಮಾಲೀಕರು ತಮ್ಮ ಪಟ್ಟು ಮುಂದುವರಿಸಿದಾಗ ಆರ್‌ಟಿಒ ಶ್ರೀಧರ್ ಮಲ್ಲಾಡ್ ಸ್ಥಳಕ್ಕೆ ಭೇಟಿ ನೀಡಿದರು.ಸುಮಾರು ಮೂರು ಗಂಟೆಗಳ ಕಾಲ ತಮ್ಮ ಪಟ್ಟು ಮುಂದುವರಿಸಿದ ಪ್ರತಿಭಟನಾ ನಿರತರು ಪ್ರಾದೇಶಿಕ ಸಾರಿಗೆ ಅಧಿಕಾರಿ ಲಿಖಿತ ಆದೇಶ ನೀಡುವವರೆಗೆ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಸಿಐಟಿಯು ಮುಖಂಡ ಸುನಿಲ್ ಕುಮಾರ್ ಬಜಾಲ್ ಮಾತನಾಡಿದರು.
ಒಕ್ಕೂಟದ ಮುಖಂಡರಾದ ಲೋಕೇಶ್ ಶೆಟ್ಟಿ ಬಳ್ಳಾಲ್‌ಬಾಗ್, ಅರುಣ್ ಕುಮಾರ್, ಭರತ್ ಕುಮಾರ್, ವಿಷ್ಣುಮೂರ್ತಿ ಮತ್ತಿತರರು ಮಾತನಾಡಿದರು.ಪಾಲಿಕೆ ಚುನಾವಣೆಯಲ್ಲಿ ರಿಕ್ಷಾ ಚಾಲಕರನ್ನು ಕಣಕ್ಕಿಳಿಸಲು ನಿರ್ಧಾರ
ರಿಕ್ಷಾ ಚಾಲಕರ ಬಗ್ಗೆ ಜನಪ್ರತಿನಿಧಿಗಳು ಕಾಳಜಿ ವಹಿಸುತ್ತಿಲ್ಲ. ಜಿಲ್ಲೆಯ ಸಂಸದರು, ಸ್ಥಳೀಯ ಶಾಸಕರು ಹಾಗೂ ಮೇಯರ್ ರಿಕ್ಷಾ ಚಾಲಕರ ಬಗ್ಗೆ ತೀವ್ರ ನಿರ್ಲಕ್ಷ್ಯ ತೋರಿದ್ದಾರೆಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಮುಂದಿನ ಪಾಲಿಕೆ ಚುನಾವಣೆಯಿಂದಲೇ ರಿಕ್ಷಾ ಚಾಲಕರು ರಾಜಕೀಯ ಪ್ರವೇಶಿಸುವತ್ತ ಹೆಜ್ಜೆ ಇಡುವ ಬಗ್ಗೆ ಘೋಷಣೆ ಮಾಡಿದರು.ಪಾಲಿಕೆ ಚುನಾವಣೆಯಲ್ಲಿ ರಿಕ್ಷಾ ಚಾಲಕರು ಕೂಡಾ ಪಕ್ಷೇತರರಾಗಿ ಸ್ಪರ್ಧಿಸುವ ಮೂಲಕ ರಾಜಕೀಯ ಪಕ್ಷಗಳಿಗೆ ಸೆಡ್ಡು ಹೊಡೆಯಲಿದ್ದಾರೆ ಎಂದು ಒಕ್ಕೂಟದ ಮುಖಂಡ ಭರತ್ ಕುಮಾರ್ ಪ್ರತಿಭಟನಾ ಸಭೆಯವಲ್ಲಿ ಪ್ರಕಟಿಸಿದರು.