ಅಪ್ರಾಪ್ತೆ ಮೇಲೆ ಬ್ಯಾಡ್ಮಿಂಟನ್‌ ಟ್ರೈನರ್‌ ರೇಪ್‌ : ತಮಿಳುನಾಡು ಮೂಲದ ಆರೋಪಿ ಬಂಧನ

| N/A | Published : Apr 06 2025, 01:47 AM IST / Updated: Apr 06 2025, 11:33 AM IST

ಅಪ್ರಾಪ್ತೆ ಮೇಲೆ ಬ್ಯಾಡ್ಮಿಂಟನ್‌ ಟ್ರೈನರ್‌ ರೇಪ್‌ : ತಮಿಳುನಾಡು ಮೂಲದ ಆರೋಪಿ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಬ್ಯಾಡ್ಮಿಂಟನ್‌ ತರಬೇತಿಗೆ ಬರುತ್ತಿದ್ದ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸೆಗಿದ ತರಬೇತುದಾರನನ್ನು ಹುಳಿಮಾವು ಠಾಣೆ ಪೊಲೀಸರು ಬಂಧಿಸಿದ್ದಾರೆ.

  ಬೆಂಗಳೂರು : ಬ್ಯಾಡ್ಮಿಂಟನ್‌ ತರಬೇತಿಗೆ ಬರುತ್ತಿದ್ದ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸೆಗಿದ ತರಬೇತುದಾರನನ್ನು ಹುಳಿಮಾವು ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ಮೂಲದ ಸುರೇಶ್‌ ಬಾಲಾಜಿ (26) ಬಂಧಿತ ತರಬೇತುದಾರ. ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಈ ಆರೋಪಿಯ ಮೊಬೈಲ್‌ನಲ್ಲಿ ಇನ್ನು ಹಲವು ಬಾಲಕಿಯರ ವಿಡಿಯೋಗಳು ಪತ್ತೆಯಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 8 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?:

ತಮಿಳುನಾಡು ಮೂಲದ ಬ್ಯಾಡ್ಮಿಂಟನ್‌ ಕೋಚ್‌ ಸುರೇಶ್ ಬಾಲಾಜಿ ಕೆಲ ವರ್ಷಗಳಿಂದ ಹುಳಿಮಾವು ಭಾಗದಲ್ಲಿ ನೆಲೆಸಿದ್ದ. ಸ್ಥಳೀಯ ಕ್ರೀಡಾ ಕೋಚಿಂಗ್‌ ಕೇಂದ್ರದಲ್ಲಿ ಬ್ಯಾಡ್ಮಿಂಟನ್‌ ಕೋಚ್‌ ಆಗಿ ಕೆಲಸ ಮಾಡುತ್ತಿದ್ದ. 2 ವರ್ಷದ ಹಿಂದೆ ಬಾಲಕಿ ಬ್ಯಾಡ್ಮಿಂಟನ್‌ ತರಬೇತಿಗೆ ಸೇರಿಕೊಂಡಿದ್ದಳು. ಈ ವೇಳೆ ಆಕೆಯ ಜತೆಗೆ ಸಲುಗೆ ಬೆಳೆಸಿದ್ದ ಆರೋಪಿಯು ಆಗಾಗ ಮನೆಗೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸೆಗಿದ್ದಾನೆ. ಆ ದೃಶ್ಯವನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದಾನೆ.

ಅಜ್ಜಿಯ ಮೊಬೈಲ್‌ಗೆ ನಗ್ನ ಫೋಟೋ ರವಾನೆ:

ಖಾಸಗಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿದ್ದ ಸಂತ್ರಸ್ತೆ ಪರೀಕ್ಷೆ ಮುಗಿಸಿ ಫಲಿತಾಂಶದ ನಿರೀಕ್ಷೆಯಲ್ಲಿದ್ದಳು. ರಜೆ ಹಿನ್ನೆಲೆಯಲ್ಲಿ ಅಜ್ಜಿ ಮನೆಗೆ ತೆರಳಿದ್ದಳು. ಈ ವೇಳೆ ಅಪರಿಚಿತ ಮೊಬೈಲ್‌ ಸಂಖ್ಯೆಯಿಂದ ಅಜ್ಜಿಯ ಮೊಬೈಲ್‌ಗೆ ಮೊಮ್ಮಗಳ ನಗ್ನ ಫೋಟೋಗಳು ಬಂದಿದ್ದವು. ಅದನ್ನು ನೋಡಿರುವ ಅಜ್ಜಿ, ಸಂತ್ರಸ್ತೆಯ ಪೋಷಕರಿಗೆ ತಿಳಿಸಿದ್ದರು. ಬಳಿಕ ಸಂತ್ರಸ್ತೆಯ ತಾಯಿ ವಿಚಾರಿಸಿದಾಗ ಬ್ಯಾಡ್ಮಿಂಟನ್‌ ತರಬೇತುದಾರ ತನ್ನ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸೆಗಿದ ವಿಚಾರವನ್ನು ಸಂತ್ರಸ್ತೆ ಹೇಳಿಕೊಂಡಿದ್ದಳು. ಅದರಂತೆ ಸಂತ್ರಸ್ತೆ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯ ಸಂತ್ರಸ್ತೆ ತರಬೇತಿಗೆ ಬರುತ್ತಿದ್ದಾಗ ಆಕೆಯ ಸ್ನೇಹ ಸಂಪಾದಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಹಲವು ಬಾರಿ ಆಕೆ ನೃತ್ಯ ತರಬೇತಿ ಹಾಗೂ ಟ್ಯೂಷನ್‌ಗೆ ಹೋದಾಗಲು ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸೆಗಿದ್ದಾನೆ. ಅದನ್ನು ವಿಡಿಯೋ ಮಾಡಿಕೊಂಡು ಯಾರಿಗೂ ಹೇಳದಂತೆ ಬೆದರಿಕೆ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದ. ಹೀಗಾಗಿ ಸಂತ್ರಸ್ತೆ ಭಯದಿಂದ ದೌರ್ಜನ್ಯದ ವಿಚಾರವನ್ನು ಯಾರಿಗೂ ಹೇಳಿರಲಿಲ್ಲ ಎಂದು ತಿಳಿದು ಬಂದಿದೆ.

ಆರೋಪಿ ಮೊಬೈಲ್‌ನಲ್ಲಿ ಹಲವು ವಿಡಿಯೋ ಪತ್ತೆ:

ಆರೋಪಿ ಸುರೇಶ್‌ ಬಾಲಾಜಿ ಬ್ಯಾಡ್ಮಿಂಟನ್‌ ತರಬೇತಿಗೆ ಬರುತ್ತಿದ್ದ ಬಾಲಕಿಯರ ಬಳಿ ಸಲಿಗೆ ಬೆಳೆಸಿ ಬಳಿಕ ಲೈಂಗಿಕ ದೌರ್ಜನ್ಯ ಎಸೆಗುತ್ತಿದ್ದ. ಆ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದ. ಈ ವಿಚಾರ ಯಾರ ಬಳಿಯೂ ಹೇಳದಂತೆ ಬೆದರಿಸುತ್ತಿದ್ದ. ಬಳಿಕ ಆ ವಿಡಿಯೋ ಇರಿಸಿಕೊಂಡು ಹಲವು ಬಾರಿ ದೌರ್ಜನ್ಯ ಎಸೆಗುತ್ತಿದ್ದ. ಆರೋಪಿಯ ಮೊಬೈಲ್‌ನಲ್ಲಿ ಐದಾರು ಮಂದಿ ಅಪ್ರಾಪ್ತೆಯರ ನಗ್ನ ವಿಡಿಯೋಗಳು ಹಾಗೂ ಪೋಟೋಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. ಸದ್ಯ ಹುಳಿಮಾವು ಠಾಣೆ ಪೊಲೀಸರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.