ಸಾರಾಂಶ
ಪ್ರದೀಪ್ ಹಾಗೂ ಬಾಲಕಿ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದ್ದು, ಒಂದೇ ಮರಕ್ಕೆ ಪ್ಲಾಸ್ಟಿಕ್ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆಯಾಗಿವೆ. ಸ್ಥಳದಲ್ಲಿ ಒಂದು ಚಾಕು ಮತ್ತು ಎರಡು ಮೊಬೈಲ್ ಫೋನ್‌ಗಳು ಕೂಡ ಪತ್ತೆಯಾಗಿವೆ. ಕುಂಬಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಗಡಿನಾಡು ಕೇರಳದ ಕಾಸರಗೋಡು ಜಿಲ್ಲೆ ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಪೈವಳಿಕೆ ಎಂಬಲ್ಲಿ ಕಳೆದ ತಿಂಗಳು ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿ ಹಾಗೂ ಆಟೋ ಚಾಲಕನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಮನೆ ಸಮೀಪದ ಕಾಡಿನಲ್ಲಿ ಪತ್ತೆಯಾಗಿದೆ. ಪೈವಳಿಕೆ ಮಂಡೆಕಾಪು ನಿವಾಸಿ ಆಟೋ ಚಾಲಕ ಪ್ರದೀಪ್ (42) ಹಾಗೂ ಅದೇ ಊರಿನ 15 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿ ಮೃತರು.ಪ್ರದೀಪ್ ಹಾಗೂ ಬಾಲಕಿ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದ್ದು, ಒಂದೇ ಮರಕ್ಕೆ ಪ್ಲಾಸ್ಟಿಕ್ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆಯಾಗಿವೆ. ಸ್ಥಳದಲ್ಲಿ ಒಂದು ಚಾಕು ಮತ್ತು ಎರಡು ಮೊಬೈಲ್ ಫೋನ್‌ಗಳು ಕೂಡ ಪತ್ತೆಯಾಗಿವೆ. ಕುಂಬಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ:ಆಟೋ ಚಾಲಕ ಪ್ರದೀಪ್, ಬಾಲಕಿಯ ಮನೆಗೆ ಕೆಲ ಸಮಯದಿಂದ ನಿತ್ಯ ಭೇಟಿ ನೀಡುತ್ತಿದ್ದು, ಆಗಾಗ ಬಾಲಕಿಯನ್ನು ರಿಕ್ಷಾದಲ್ಲಿ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ. ಈ ನಡುವೆ ಫೆ.11ರ ರಾತ್ರಿ ಮನೆಯಲ್ಲಿ ಮಲಗಿದ್ದ ಬಾಲಕಿ ಏಕಾಏಕಿ ನಾಪತ್ತೆಯಾಗಿದ್ದಳು. ಆಟೋ ಚಾಲಕ ಪ್ರದೀಪ್ ಕೂಡ ನಾಪತ್ತೆಯಾಗಿದ್ದ.
ತನಿಖೆ ನಡೆಸಿದ ಕುಂಬಳೆ ಪೊಲೀಸರು ಮಂಡೆಕಾಪು ಬಳಿ ಇಬ್ಬರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದನ್ನು ಪತ್ತೆಹಚ್ಚಿದ್ದರು. ಬಳಿಕ ಸ್ಥಳದ ಸುತ್ತಮುತ್ತ ಶೋಧ ಕಾರ್ಯ ನಡೆಸಿದ್ದರೂ ಯಾವುದೇ ಕುರುಹು ಪತ್ತೆಯಾಗಿರಲಿಲ್ಲ. ಬಾಲಕಿ ಪತ್ತೆಯಾಗದ ಹಿನ್ನೆಲೆಯಲ್ಲಿ ಪೋಷಕರು ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಭಾನುವಾರ ಸ್ಥಳೀಯರ ನೆರವಿನೊಂದಿಗೆ ಪೊಲೀಸರು ಇಬ್ಬರ ಮನೆಯ ಸಮೀಪದ ಕಾಡಿನಲ್ಲಿ ತೀವ್ರ ಶೋಧ ಕಾರ್ಯ ಆರಂಭಿಸಿದ್ದರು. ಈ ವೇಳೆ ಇಬ್ಬರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ.