ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಗೆ ಸಂತ್ರಸ್ತೆ ವರಿಸಲು ಬೇಲ್‌

| Published : Jun 18 2024, 01:32 AM IST / Updated: Jun 18 2024, 04:50 AM IST

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಗೆ ಸಂತ್ರಸ್ತೆ ವರಿಸಲು ಬೇಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲು ಪಾಲಾಗಿರುವ ಆರೋಪಿಗೆ (ವಿಚಾರಣಾಧೀನ ಕೈದಿ) ಸಂತ್ರಸ್ತೆಯನ್ನೇ ಮದುವೆಯಾಗಲು ಮಧ್ಯಂತರ ಜಾಮೀನು ನೀಡಿ ಹೈಕೋರ್ಟ್‌ ಅಪರೂಪದ ಆದೇಶ ಹೊರಡಿಸಿದೆ.

 ಬೆಂಗಳೂರು :  ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲು ಪಾಲಾಗಿರುವ ಆರೋಪಿಗೆ (ವಿಚಾರಣಾಧೀನ ಕೈದಿ) ಸಂತ್ರಸ್ತೆಯನ್ನೇ ಮದುವೆಯಾಗಲು ಮಧ್ಯಂತರ ಜಾಮೀನು ನೀಡಿ ಹೈಕೋರ್ಟ್‌ ಅಪರೂಪದ ಆದೇಶ ಹೊರಡಿಸಿದೆ.

ಆರೋಪಿಯ ಲೈಂಗಿಕ ಸಂಪರ್ಕದಿಂದ ಸಂತ್ರಸ್ತೆಗೆ ಮಗು ಜನಿಸಿದೆ. ಸಂತ್ರಸ್ತೆಗೆ ಸದ್ಯ 18 ವರ್ಷ. ಈ ಹಿಂದೆ ಏನೆಲ್ಲಾ ಘಟನೆಗಳು ನಡೆದಿವೆ ಎನ್ನುವುದು ಮಗುವಿಗೆ ತಿಳಿದಿಲ್ಲ. ಮಗು ಮತ್ತು ಸಂತ್ರಸ್ತೆಯ ಹಿತ ರಕ್ಷಿಸಬೇಕಿದೆ. ಮಗು ಭವಿಷ್ಯದಲ್ಲಿ ಯಾವುದೇ ರೀತಿಯಲ್ಲಿ ಅವಮಾನಕ್ಕೆ ಗುರಿಯಾಗಬಾರದು ಎಂದು ಹೈಕೋರ್ಟ್‌ ಈ ಆದೇಶ ಹೊರಡಿಸಿದೆ.

ಪೋಕ್ಸೋ ಕಾಯ್ದೆಯಡಿ ತನ್ನ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣ ರದ್ದುಪಡಿಸಲು ಕೋರಿ ಆರೋಪಿ ಮೈಸೂರಿನ ರವಿ (ಹೆಸರು ಬದಲಿಸಲಾಗಿದೆ) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ಸಂತ್ರಸ್ತೆಯನ್ನು ಮದುವೆಯಾಗಲು ಜೂ.17ರಿಂದ ಅನ್ವಯವಾಗುವಂತೆ ಜು.3ರವರೆಗೆ ರವಿಗೆ ಮಧ್ಯಂತರ ಜಾಮೀನು ಮೇಲೆ ಬಿಡುಗಡೆ ಮಾಡಬೇಕು ಎಂದು ಆದೇಶಿಸಿದೆ.

ಸಂತ್ರಸ್ತೆಯನ್ನು ಮದುವೆಯಾಗಿ ಜು.3ರ ಸಂಜೆ ಹಿಂದಿರುಗಬೇಕು. ಜು.4ರಂದು ವಿವಾಹ ನೋಂದಣಿ ಪತ್ರವನ್ನು ಕೋರ್ಟ್‌ಗೆ ಸಲ್ಲಿಸಬೇಕು. ಜಾಮೀನು ಮೇಲೆ ಹೊರಗಿರುವ ಸಮಯದಲ್ಲಿ ರವಿ ಸಂಬಂಧಪಟ್ಟ ಪೊಲೀಸ್‌ ಠಾಣೆಗೆ ವಾರಕ್ಕೊಮ್ಮೆ ಹಾಜರಾಗಬೇಕು. ಒಂದು ವೇಳೆ ಮಧ್ಯಂತರ ಜಾಮೀನು ಮಂಜೂರಾತಿಯ ಉದ್ದೇಶ ಉಲ್ಲಂಘಿಸಿದರೆ, ಗಂಭೀರವಾಗಿ ತೆಗೆದುಕೊಳ್ಳಲಾಗುವುದು ಎಂದು ನಿರ್ದೇಶಿಸಿರುವ ನ್ಯಾಯಪೀಠ, ವಿಚಾರಣೆಯನ್ನು ಜು.4ಕ್ಕೆ ಮುಂದೂಡಿದೆ.

ಪ್ರಕರಣದ ವಿವರ:

ರವಿ (23) ಮತ್ತು ಸಂತ್ರಸ್ತೆ ಪರಸ್ಪರ ಪ್ರೀತಿಸುತ್ತಿದ್ದು, 2023ರಲ್ಲಿ ಒಂದು ದಿನ ಸಂತ್ರಸ್ತೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ರವಿ ಮೇಲಿದೆ. ಆ ಸಂದರ್ಭದಲ್ಲಿ ಆಕೆಗೆ 16 ವರ್ಷ 9 ತಿಂಗಳು ಆಗಿತ್ತು. ಇದರಿಂದ ಸಂತ್ರಸ್ತೆಯ ತಾಯಿ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಪೋಕ್ಸೋ ಕಾಯ್ದೆಯಡಿ ರವಿ ವಿರುದ್ಧ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಮೈಸೂರಿನ ಪೋಕ್ಸೋ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ. ದೂರು ದಾಖಲಾದ ಮರು ದಿನದಿಂದ ರವಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಈ ಹಿನ್ನೆಲೆಯಲ್ಲಿ ತನ್ನ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ಆತ ಹೈಕೋರ್ಟ್‌ ಅರ್ಜಿ ಸಲ್ಲಿಸಿದ್ದ.

ಅರ್ಜಿ ಇತ್ತೀಚೆಗೆ ವಿಚಾರಣೆಗೆ ಬಂದಾಗ ರವಿ ಮತ್ತು ಸಂತ್ರಸ್ತೆಯ ಪರ ವಕೀಲರು ಹಾಜರಾಗಿ, ಅರ್ಜಿದಾರರು ಮತ್ತು ಸಂತ್ರಸ್ತೆ ಪರಸ್ಪರ ಪ್ರೀತಿಸುತ್ತಿದ್ದರು. ಅವರ ಮಧ್ಯೆ ಪೋಷಕರು ಬಂದಿದ್ದಾರೆ. ಲೈಂಗಿಕ ಸಂಪರ್ಕದಿಂದ ಅವರಿಗೆ ಜನಿಸಿರುವ ಮಗುವಿಗೆ ಸದ್ಯ ಒಂದು ವರ್ಷವಾಗಿದೆ. ರವಿ ಬಂಧನಕ್ಕೆ ಒಳಗಾಗುವ ದಿನಕ್ಕೆ ಸಂತ್ರಸ್ತೆಗೆ 18 ವರ್ಷ ತುಂಬಿರಲಿಲ್ಲ. ಆಕೆಗೆ ಸದ್ಯ 18 ವರ್ಷ ತುಂಬಿದೆ. ಅವರಿಬ್ಬರೂ ಮದುವೆಯಾಗಲು ನಿರ್ಧರಿಸಿದ್ದಾರೆ. ಅದಕ್ಕೆ ಪೋಷಕರೂ ಒಪ್ಪಿಗೆಯಿದೆ. ಮದುವೆಯಾಗುವುದರಿಂದ ಸಂತ್ರಸ್ತೆ ಮತ್ತ ಮಗು ದಿಕ್ಕಿಲ್ಲದಂತಾಗುವುದು ತಪ್ಪಲಿದೆ. ಈ ರಾಜಿ ಸಂಧಾನ ಪರಿಗಣಿಸಿ ಇಡೀ ಪ್ರಕರಣವನ್ನು ಮುಕ್ತಾಯಗೊಳಿಸಬೇಕು ಎಂದು ಕೋರಿದರು.

ಈ ಎಲ್ಲಾ ಅಂಶಗಳು ಪರಿಗಣಿಸಿದ ನ್ಯಾಯಪೀಠ, ರವಿ ಮತ್ತು ಸಂತ್ರಸ್ತೆಯೇ ಮಗುವಿನ ಜೈವಿಕ ತಂದೆ-ತಾಯಿ ಎಂಬುದು ಮಗುವಿನ ಡಿಎನ್‌ಎ ವರದಿ ಸ್ಪಷ್ಟಪಡಿಸುತ್ತದೆ. ಮಗುವನ್ನು ಸಂತ್ರಸ್ತೆ ತಾಯಿ ಪೋಷಣೆ ಮಾಡಬೇಕಿದೆ. ಸಣ್ಣ ಮಗುವಿಗೆ ಈ ಹಿಂದೆ ಏನೆಲ್ಲಾ ಘಟನೆ ನಡೆದಿದೆ ಎಂಬುದು ಗೊತ್ತಿಲ್ಲ. ಮಗು ಭವಿಷ್ಯದಲ್ಲಿ ಯಾವುದೇ ರೀತಿಯ ಅವಮಾನ ಅನುಭವಿಸಬಾರದು. ತಾಯಿ ಮತ್ತು ಮಗುವಿನ ಹಿತಾಸಕ್ತಿಯನ್ನು ರಕ್ಷಣೆ ಮಾಡಬೇಕಿದೆ. ಹಾಗಾಗಿ ಸಂತ್ರಸ್ತೆಯನ್ನು ಮದುವೆಯಾಗಲು ರವಿಗೆ ಅನುಮತಿ ನೀಡುವುದು ಸೂಕ್ತವಾಗಿದೆ. ಅದರಂತೆ ರವಿಗೆ ಮಧ್ಯಂತರ ಜಾಮೀನು ನೀಡಿ ಸಂತ್ರಸ್ತೆಯನ್ನು ಮದುವೆಯಾಗಲು ಅನುಮತಿ ನೀಡಲಾಗುತ್ತಿದೆ ಎಂದ ಆದೇಶಿಸಿದೆ.