5 ದಿನಗಳ ಹಿಂದೆ ಕೆ.ಆರ್‌.ಪುರದಲ್ಲಿ ಭೀಕರವಾಗಿ ತನ್ನ ಪ್ರಿಯತಮೆಯ ಹೆತ್ತವರು ಹಾಗೂ ಸೋದರಿಯನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದ ಹಂತಕ ಪಾಂಡಿಚೇರಿಯ ಮದ್ಯಂಗಡಿಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಬೆಂಗಳೂರು : 5 ದಿನಗಳ ಹಿಂದೆ ಕೆ.ಆರ್‌.ಪುರದಲ್ಲಿ ಭೀಕರವಾಗಿ ತನ್ನ ಪ್ರಿಯತಮೆಯ ಹೆತ್ತವರು ಹಾಗೂ ಸೋದರಿಯನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದ ಹಂತಕ ಪಾಂಡಿಚೇರಿಯ ಮದ್ಯಂಗಡಿಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಮಾರತ್ತಹಳ್ಳಿಯ ಕೆನೆತ್ ಬಂಧಿತ

ಮಾರತ್ತಹಳ್ಳಿಯ ಕೆನೆತ್ ಬಂಧಿತನಾಗಿದ್ದು, ಪಾಂಡಿಚೇರಿಯಲ್ಲಿ ಗುರುವಾರ ರಾತ್ರಿ ಮದ್ಯ ಸೇವಿಸುವಾಗ ಆತನನ್ನು ಸ್ಥಳೀಯ ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ನಂತರ ಕೆ.ಆರ್‌.ಪುರ ಪೊಲೀಸರಿಗೆ ಕೆನೆತ್‌ನನ್ನು ಪಾಂಡಿಚೇರಿ ಪೊಲೀಸರು ಹಸ್ತಾಂತರಿಸಿದ್ದಾರೆ. ನಂತರ ಆರೋಪಿಯನ್ನು ಸುಪರ್ದಿಗೆ ಪಡೆದು ನಗರಕ್ಕೆ ಕೆ.ಆರ್‌.ಪುರ ಪೊಲೀಸರು ಕರೆತಂದಿದ್ದಾರೆ.

ಸೀಗೇನಹಳ್ಳಿ ಸಮೀಪದ ತಮ್ಮ ಅಪಾರ್ಟ್‌ಮೆಂಟ್‌ಗೆ ಬಂದ ತಮ್ಮ ತಂದೆ ಸೋಮಸುಂದರ್, ತಾಯಿ ಮುತ್ತುಲಕ್ಷ್ಮೀ ಹಾಗೂ ತಂಗಿ ಸುಪ್ರಿಯಾ ಅ‍ವರನ್ನು ಸೋಮವಾರ ರಾತ್ರಿ ಶ್ವೇತಾ ಹಾಗೂ ಆಕೆಯ ಪ್ರಿಯಕರ ಕೆನೆತ್ ಹತ್ಯೆಗೈದಿದ್ದರು. ಈ ಹತ್ಯೆ ಬಳಿಕ ಬಂಧನಭೀತಿಯಿಂದ ನಗರ ತೊರೆದು ಪಾಂಡಿಚೇರಿಯಲ್ಲಿ ಆರೋಪಿಗಳು ತಲೆಮರೆಸಿಕೊಂಡಿದ್ದರು. ಮೊದಲು ಬುಧವಾರ ಶ್ವೇತಾಳನ್ನು ಬಂಧಿಸಿದ್ದ ತನಿಖಾ ತಂಡ, ಎರಡು ದಿನಗಳ ಬಳಿಕ ಸ್ಥಳೀಯ ಪೊಲೀಸರ ನೆರವಿನಿಂದ ಆಕೆಯ ಪ್ರಿಯಕರನ್ನು ಬಂಧಿಸಿದೆ.

ಮೂವರನ್ನು ಕೊಂದು ತಣ್ಣಗೆ ಮದ್ಯ ಸೇವನೆ!:

ಮನೆಯಲ್ಲಿ ಸೋಮವಾರ ರಾತ್ರಿ 8.30 ಗಂಟೆಗೆ ಕುಟುಂಬದವರ ಹತ್ಯೆ ಬಳಿಕ ಪ್ರಿಯತಮೆಯನ್ನು ಬೈಕ್‌ನಲ್ಲಿ ಕರೆದು ಕೊಂಡು ಕೆನೆತ್ ನಗರ ತೊರೆದಿದ್ದ. ತಮಿಳುನಾಡು ಮೂಲಕ ಪಾಂಡಿಚೇರಿಯನ್ನು ಅವರು ತಲುಪಿದ್ದರು. ಅಲ್ಲಿ ಒಟ್ಟಾಗಿದ್ದರೆ ಪೊಲೀಸರಿಗೆ ಸುಳಿವು ಸಿಗಬಹುದು ಎಂದು ಪ್ರತ್ಯೇಕವಾಗಿ ತಲೆಮರೆಸಿಕೊಂಡಿದ್ದರು. ಆಗ ಬುಧವಾರ ಸಂಜೆ ಶ್ವೇತಾಳನ್ನು ಪೊಲೀಸರು ಸೆರೆ ಹಿಡಿದಿದ್ದರು. 

 ಇನ್ನು ವಿಚಾರಣೆ ವೇಳೆ ಪಾಂಡಿಚೇರಿಯಲ್ಲೇ ಕೆನೆತ್‌ ಇರುವಿಕೆಗೆ ಕುರಿತು ಆಕೆ ಬಾಯ್ಪಿಟ್ಟಿದ್ದಳು. ಈ ಸುಳಿವು ಆಧರಿಸಿ ತನಿಖಾ ತಂಡಗಳು ಕಾರ್ಯಾಚರಣೆ ಮುಂದುವರಿಸಿದ್ದವು. ಪಾಂಡಿಚೇರಿಯ ಪೊಲೀಸ್ ಅಧಿಕಾರಿಗಳ ಭೇಟಿಯಾಗಿ ಕೆ.ಆರ್.ಪುರ ಪೊಲೀಸರು ನೆರವು ಕೋರಿದ್ದರು. ಆ ನಗರದ ಎಲ್ಲ ಠಾಣೆಗಳಿಗೆ ಆರೋಪಿ ಫೋಟೋ ರವಾನೆಯಾಗಿತ್ತು. ಈ ಪೋಟೋ ಆಧರಿಸಿ ಕೆನೆತ್‌ಗೆ ಸ್ಥಳೀಯ ಪೊಲೀಸರು ಹುಡುಕಾಟ ನಡೆಸಿದ್ದರು.

ಅಲ್ಲಿನ ಒರ್ಲೆನ್‌ ಪೇಟೆ ಸಮೀಪದ ಬಾರ್‌ನಲ್ಲಿ ಕೆನೆತ್ ಮದ್ಯ ಸೇವಿಸುತ್ತಿದ್ದ. ಅದೇ ಬಾರ್‌ಗೆ ಆತನ ಫೋಟೋ ಹಿಡಿದು ಶೋಧನೆಗೆ ಒರ್ಲೆನ್‌ಪೇಟೆ ಪೊಲೀಸ್ ಠಾಣೆಯಸಹಾಯಕ ಸಬ್ ಇನ್ಸ್‌ಪೆಕ್ಟರ್ ರಾಮಲಿಂಗಂ ತೆರಳಿದ್ದರು. ಆ ವೇಳೆ ತಣ್ಣಗೆ ಮದ್ಯ ಸೇವಿಸುತ್ತ ಕುಳಿತಿದ್ದ ಕೆನೆತ್‌ನನ್ನು ಎಎಸ್‌ಐ ಗುರುತು ಹಿಡಿದಿದ್ದಾರೆ. ಕೂಡಲೇ ಆತನ್ನು ವಶಕ್ಕೆ ಪಡೆಯಲು ಯತ್ನಿಸಿದಾಗ ಆರೋಪಿ ಕಾಲ್ಕಿತ್ತಿದ್ದಾನೆ. ತಕ್ಷಣವೇ ಕೆನೆತ್‌ನನ್ನು ಸಾರ್ವಜನಿಕರ ನೆರವು ಪಡೆದು ರಾಮಲಿಂಗಂ ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ. ತದನಂತರ ಅಲ್ಲೇ ಆರೋಪಿಗೆ ಹುಡುಕಾಟ ನಡೆಸುತ್ತಿದ್ದ ಕೆ.ಆರ್‌.ಪುರ ತನಿಖಾ ತಂಡಗಳಿಗೆ ಆರೋಪಿ ಸಿಕ್ಕಿರುವ ಮಾಹಿತಿ ರವಾನೆಯಾಗಿದೆ. ಬಳಿಕ ಒರ್ಲೆನ್ ಪೇಟೆ ಠಾಣೆಗೆ ತೆರಳಿ ಆತನನ್ನು ವಶಕ್ಕೆ ಪಡೆದು ನಗರಕ್ಕೆ ಕೆ.ಆರ್‌.ಪುರ ಠಾಣೆ ಪೊಲೀಸರು ಕರೆತಂದಿದ್ದಾರೆ.

ಕೆ.ಆರ್‌.ಪುರದಲ್ಲಿ ನಡೆದಿದ್ದ ತ್ರಿವಳಿ ಕೊಲೆ ಪ್ರಕರಣದ ಆರೋಪಿಗಳ ಪತ್ತೆಗೆ 10 ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಪಾಂಡಿಚೇರಿಯಲ್ಲಿ ಆರೋಪಿಗಳನ್ನು ತನಿಖಾ ತಂಡಗಳು ಬಂಧಿಸುವಲ್ಲಿ ಯಶಸ್ಸು ಕಂಡಿವೆ. ತಮ್ಮ ಕೃತ್ಯವನ್ನು ಇಬ್ಬರು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.

ನಗರ ಪೊಲೀಸ್ ಆಯುಕ್ತರ ಕಚೇರಿ ಪತ್ರಿಕಾ ಹೇಳಿಕೆ

4 ದಿನಗಳ ಹಿಂದೆ ನಡೆದಿದ್ದ ತ್ರಿವಳಿ ಕೊಲೆ ಸಂಬಂಧ ಇಬ್ಬರು ಆರೋಪಿಗಳನ್ನು ಹುಡುಕಿಕೊಂಡು ಬೆಂಗಳೂರು ಪೊಲೀಸರು ಬಂದಿದ್ದರು. ನಮ್ಮ ಠಾಣೆಗೂ ಸಹ ಆರೋಪಿಗಳ ಪೋಟೋವನ್ನು ತನಿಖಾ ತಂಡ ಕೊಟ್ಟಿತ್ತು. ಬಾರ್‌ನಲ್ಲಿ ಗುರುವಾರ ರಾತ್ರಿ ಮದ್ಯ ಸೇವಿಸುವಾಗ ಆತನನ್ನು ಗುರುತು ಹಿಡಿದು ವಶಕ್ಕೆಪಡೆಯಲಾಯಿತು.

-ರಾಮಲಿಂಗಂ ಎಎಸ್‌ಐ, ಪಾಂಡಿಚೇರಿಯ ಒರ್ಲೆನ್‌ ಪೇಟೆ