ಕೊಪ್ಪಳ: ನಗರ ಮತ್ತು ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಕೊಪ್ಪಳ ನಗರದಲ್ಲಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ ಅವರಿಗೆ ಮನವಿ ಸಲ್ಲಿಸಿದ ಆನಂತರ ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸನಗೌಡ ಪೊಲೀಸ್‌ಪಾಟೀಲ ಹಾಗೂ ಕರವೇ ಜಿಲ್ಲಾಧ್ಯಕ್ಷ ಬಿ. ಗಿರೀಶಾನಂದ ಜ್ಞಾನಸುಂದರ ಮಾತನಾಡಿ, ನಗರ ಮತ್ತು ಗ್ರಾಮೀಣ ಭಾಗದಲ್ಲಿ ಮದ್ಯವನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ. ಸರ್ಕಾರದ ನಿಯಮ ಗಾಳಿಗೆ ತೂರಿ ಸಿಎಲ್-೨ ವ್ಯಾಪಾರ ಮಳಿಗೆಯಲ್ಲಿ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡಲಾಗುತ್ತಿದೆ. ಅಂತಹ ಅಂಗಡಿ ಮಾಲೀಕರ ಮೇಲೆ ಕಾನೂನು ಕ್ರಮ ಕೈಗೊಂಡು, ಪರವಾನಗಿ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.ಕೊಪ್ಪಳ ವಲಯದ ಅಬಕಾರಿ ನಿರೀಕ್ಷಕರು ಹಾಗೂ ಅಬಕಾರಿ ಉಪ ಆಯುಕ್ತರಿಗೆ ಮನವಿ ಸಲ್ಲಿಸಿದ್ದು, ಜಿಲ್ಲೆಯಾದ್ಯಂತ ಅಕ್ರಮ ಮದ್ಯ ಮಾರಾಟ ಹಾಗೂ ಸಾಗಾಣಿಕೆ ನಡೆಯುತ್ತಿದ್ದು, ಜಿಲ್ಲಾ ಮತ್ತು ತಾಲೂಕು ಕೇಂದ್ರಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವು ಸಿಎಲ್-೨ ಸನ್ನದ್ದುದಾರರ ಎಲ್ಲ ಅಂಗಡಿಗಳಲ್ಲಿ ಕೌಂಟರ್‌ನಿಂದ ಗ್ರಾಹಕರ ಟೇಬಲ್‌ಗಳಿಗೆ ರಾಜಾರೋಷವಾಗಿ ಮದ್ಯ ಸರಬರಾಜು ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಅಲ್ಲದೆ ಗ್ರಾಹಕರು ಕಳುಹಿಸಿರುವ ಹಲವು ವಿಡಿಯೋ ತೋರಿಸಿದರು. ಕೆಲವು ಅಂಗಡಿಗಳಲ್ಲಿ ನಿಯಮ ಉಲ್ಲಂಘಿಸಲಾಗುತ್ತಿದೆ. ಚಿಲ್ಲರೆ ಮಾರಾಟದ ಪರವಾನಗಿ ದುರುಪಯೋಗ ಆಗುತ್ತಿದೆ. ಅಬಕಾರಿ ಶುಲ್ಕ ಪಾವತಿಸದೇ, ಮಾನದಂಡಗಳನ್ನು ಅನುಸರಿಸದೇ, ಮದ್ಯದ ರೇಟ್ ಬೋರ್ಡ್ ಹಾಕದೇ ಸಿಎಲ್-೯ ಬಾರ್ ಮತ್ತು ರೆಸ್ಟೋರೆಂಟ್‌ಗಳಂತೆ ವರ್ತಿಸುತ್ತಿವೆ. ಜನವಸತಿ ಪ್ರದೇಶವಿದ್ದಲ್ಲಿ ಮಹಿಳೆಯರು, ಮಕ್ಕಳು ಹಾಗೂ ವೃದ್ಧರಿಗೆ ಕಿರಿಕಿರಿ ಉಂಟುಮಾಡುತ್ತಿದ್ದಾರೆ ಎಂದರು.
ಗ್ರಾಮೀಣ ಪ್ರದೇಶದಲ್ಲಿರುವ ಡಾಬಾಗಳು, ಪಾನ್ ಬೀಡಾ ಅಂಗಡಿಗಳು, ಸಣ್ಣ ಕಿರಾಣಿ ಅಂಗಡಿಗಳಲ್ಲಿ ಕದ್ದು ಮುಚ್ಚಿ ಮದ್ಯ ವ್ಯಾಪಾರ ಮಾಡಲಾಗುತ್ತಿದೆ. ಈ ಕುರಿತು ದಾಖಲೆ ಸಮೇತ ದೂರು ನೀಡಲಾಗಿತ್ತು. ಆದರೆ ೩ ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದನ್ನು ನೋಡಿದರೆ ಅಕ್ರಮ ಮದ್ಯ ಮಾಫಿಯಾದೊಂದಿಗೆ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗುತ್ತಿದೆ. ತಪ್ಪಿತಸ್ಥರ ಪರವಾನಗಿ ಅಮಾನ್ಯಗೊಳಿಸಿ, ದಂಡ ವಸೂಲಾತಿ ಮಾಡಬೇಕು ಹಾಗೂ ಸಾರ್ವಜನಿಕ ಸಂಘ-ಸಂಸ್ಥೆಗಳ ದೂರುಗಳಿಗೆ ಸ್ಪಂದಿಸದ ಅಧಿಕಾರಿಗಳಿಗೆ ಶಿಸ್ತುಕ್ರಮ ಕೈಗೊಂಡು, ಕೊಪ್ಪಳ ಜಿಲ್ಲೆಯನ್ನು ಅಕ್ರಮ ಮದ್ಯ ಮುಕ್ತವನ್ನಾಗಿ ಮಾಡಬೇಕು ಎಂದರು.ಜಿಲ್ಲಾ ಪ್ರಧಾನ ಸಂಚಾಲಕ ಗವಿಸಿದ್ದಪ್ಪ ಚಕ್ಕಡಿ, ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷೆ ಭುವನೇಶ್ವರಿ ಮೊಟಗಿ, ಯಲಬುರ್ಗಾ ತಾಲೂಕು ಮಹಿಳಾಧ್ಯಕ್ಷೆ ಕಾವ್ಯಾ ಹುಂಬಿ, ಜಿಲ್ಲಾ ರೈತ ಘಟಕ ಅಧ್ಯಕ್ಷ ಆರ್.ಜಿ. ತಿಮ್ಮನಗೌಡ, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಮಹೇಶ ನಾಯಕ ಅಗಳಕೇರಾ, ಕೊಪ್ಪಳ ತಾಲೂಕಾಧ್ಯಕ್ಷ ಹುಸೇನಬಾಶಾ ಮಣ್ಣೂರು, ಕನಕಗಿರಿ ತಾಲೂಕಾಧ್ಯಕ್ಷ ಹರೀಶ ಪೂಜಾರ, ಗಂಗಾವತಿ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಗಿಣಿಮೋತಿ, ಕುಕನೂರು ತಾಲೂಕಾಧ್ಯಕ್ಷ ರಮೇಶ ಚಂಡೂರು, ಕೊಪ್ಪಳ ತಾಲೂಕು ಉಪಾಧ್ಯಕ್ಷ ಶ್ರೀಧರ ಭೂತಣ್ಣವರ, ಭಾಗ್ಯನಗರ ಅಧ್ಯಕ್ಷ ವೀರೇಶ ಮುಂಡಾಸದ, ನಗರ ಘಟಕ ಅಧ್ಯಕ್ಷ ಸಾಯಿಕುಮಾರ ಅಳ್ಳಳ್ಳಿ, ಕನಕಗಿರಿ ನಗರ ಘಟಕ ಅಧ್ಯಕ್ಷ ಬಸವರಾಜ ಕೋರಿ, ಸಾ.ಜಾ. ಸಂಚಾಲಕ ಹನುಮೇಶ ಕಟ್ಟಿಮನಿ, ಗಂಗಾವತಿ ತಾಲೂಕು ಪ್ರಧಾನ ಕಾರ್ಯದರ್ಶಿ ಮಂಜುನಾಥ ಸೋಮಸಾಗರ, ಆಟೋ ಚಾಲಕ ಘಟಕ ಅಧ್ಯಕ್ಷ ದ್ಯಾಮೇಶ ಪೂಜಾರ, ಕರವೇ ಮುಖಂಡರಾದ ಶಂಕರಗೌಡ ಪೊಲೀಸ್‌ಪಾಟೀಲ, ಮಂಜಪ್ಪ ಹಳ್ಳಿಕೇರಿ, ಆನಂದ ಕೊಳ್ಳಿ, ಹನುಮಂತ ಪೂಜಾರ, ಕುಮಾರಸ್ವಾಮಿ ನಾಗರಳ್ಳಿ, ಶಿವು ಹಲಗೇರಿ, ಗವಿಸಿದ್ದಪ್ಪ ಗಿಣಗೇರಿ, ಗಂಗಯ್ಯ ಚಿಕ್ಕಮಠ, ರಮೇಶ ಪೂಜಾರ, ಪ್ರವೀಣಕುಮಾರ, ಗುರು ಗಿಣಿಮೋತಿ, ಬಸವರಾಜ ಮಲ್ಲಾಪುರ, ಸುನೀಲ ಸಾವಜಿ, ವಿಜಯಲಕ್ಷ್ಮಿ ಹೂಗಾರ ಪಾಲ್ಗೊಂಡಿದ್ದರು.