ಸಾರಾಂಶ
ಬೆಂಗಳೂರು ನಗರದ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ 6ನೇ ಮಹಡಿಯಿಂದ ಜಿಗಿದು ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ 6ನೇ ಮಹಡಿಯಿಂದ ಜಿಗಿದು ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಘವೇಂದ್ರ ನಗರದ ನಿವಾಸಿ ಕರುಪ್ಪಸ್ವಾಮಿ ದಂಪತಿ ಪುತ್ರ ವಿಘ್ನೇಶ್ (19) ಮೃತ ದುರ್ದೈವಿ. ಕಾಲೇಜಿನಲ್ಲಿ ಸಂಜೆ 4 ಗಂಟೆ ಸುಮಾರಿಗೆ 6ನೇ ಮಹಡಿಗೆ ತೆರಳಿ ವಿಘ್ನೇಶ್ ಜಿಗಿದಿದ್ದಾನೆ. ಕೆಳಗೆ ಬಿದ್ದ ಕೂಡಲೇ ತೀವ್ರ ರಕ್ತಸ್ರಾವವಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ತಮಿಳುನಾಡು ರಾಜ್ಯದ ಕರುಪ್ಪಸ್ವಾಮಿ ಅವರು, ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ನೆಲೆಸಿದ್ದರು. ಪರಪ್ಪನ ಅಗ್ರಹಾರ ಸಮೀಪದ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಬಿಎನಲ್ಲಿ ಅವರ ಪುತ್ರ ವಿಘ್ನೇಶ್ ಓದುತ್ತಿದ್ದ.
ಎಂದಿನಂತೆ ಮಂಗಳವಾರ ಕಾಲೇಜಿಗೆ ಬಂದಿದ್ದ ವಿಘ್ನೇಶ್, ಸಂಜೆ 4 ಗಂಟೆ ಸುಮಾರಿಗೆ ಗೆಳೆಯರ ಜತೆ ಚಹಾ ಸೇವಿಸಿ, ಬಳಿಕ ನೇರವಾಗಿ 6ನೇ ಮಹಡಿಗೆ ತೆರಳಿ ಹಠಾತ್ತನೇ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.