ಸಾರಾಂಶ
ಹಾಸನ ಜಿಲ್ಲೆ ಬೇಲೂರು ತಾಲೂಕಿನ ಬಿಕ್ಕೋಡಿಯ ಮೆಟ್ರಿಕ್ ಪೂರ್ವ ಸರ್ಕಾರಿ ಬಾಲಕರ ವಿದ್ಯಾರ್ಥಿ ನಿಲಯದ ಮಕ್ಕಳು ಹಾಸ್ಟೇಲ್‌ನಲ್ಲಿ ಗಾಂಜಾ, ಬೀಡಿ, ಸಿಗರೇಟ್ ಸೇದುತ್ತಿರುವ ಹಾಗೂ ಮದ್ಯದ ಅಮಲಿನಲ್ಲಿ ತೇಲಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೇಲೂರು : ಹಾಸನ ಜಿಲ್ಲೆ ಬೇಲೂರು ತಾಲೂಕಿನ ಬಿಕ್ಕೋಡಿಯ ಮೆಟ್ರಿಕ್ ಪೂರ್ವ ಸರ್ಕಾರಿ ಬಾಲಕರ ವಿದ್ಯಾರ್ಥಿ ನಿಲಯದ ಮಕ್ಕಳು ಹಾಸ್ಟೇಲ್‌ನಲ್ಲಿ ಗಾಂಜಾ, ಬೀಡಿ, ಸಿಗರೇಟ್ ಸೇದುತ್ತಿರುವ ಹಾಗೂ ಮದ್ಯದ ಅಮಲಿನಲ್ಲಿ ತೇಲಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೆ, ಹಾಸ್ಟೇಲ್ ನೊಳಗಡೆ ಮದ್ಯದ ಬಾಟಲ್, ಸಿಗರೇಟು ತುಂಡುಗಳು ಪತ್ತೆಯಾಗಿವೆ. ಈ ಬಗ್ಗೆ ಮಕ್ಕಳ ಪೋಷಕರು ಹಾಗೂ ಸಾರ್ವಜನಿಕರು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತನಿಖೆಗೆ ಆಗ್ರಹಿಸಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ತಹಸೀಲ್ದಾರ್ ಮಮತಾ ಎಂ. ಅವರು ಭಾನುವಾರ ಹಾಸ್ಟೇಲ್ ಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಘಟನೆ ಬಗ್ಗೆ ತನಿಖೆ ನಡೆಸಲಾಗುವುದು. ವಸತಿ ನಿಲಯದೊಳಗೆ ಬೇರೆ ವಿದ್ಯಾರ್ಥಿಗಳು ಬಂದಿರುವ ಮಾಹಿತಿಯೂ ಲಭ್ಯವಾಗಿದೆ. ಮೇಲ್ನೋಟಕ್ಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ವಾರ್ಡನ್ ಚಂದ್ರಶೇಖರ್, ಅಡುಗೆ ಸಿಬ್ಬಂದಿ ಹಾಗೂ ವಾಚ್‌ಮನ್ ಅಮಾನತ್ತಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗೆ ಈ ಸಂಬಂಧ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ರಮೇಶ್ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇದು ಈ ವರ್ಷ ನಡೆದಿರುವ ಘಟನೆಯಲ್ಲ. ಹಿಂದಿನ ವರ್ಷ ಆಗಿರುವ ಘಟನೆ. ಹಿಂದೆ ಇದ್ದ ವಿದ್ಯಾರ್ಥಿಗಳು ವಸತಿ ನಿಲಯಕ್ಕೆ ಆಗಮಿಸಿ, ಗಾಂಜಾ, ಮದ್ಯ ಸೇವಿಸಿ, ಧೂಮಪಾನ ಮಾಡುತ್ತಾ ಮಾಡಿರುವ ವಿಡಿಯೋ ಇದಾಗಿದೆ ಎಂದು ತಿಳಿಸಿದರು.
ಬಿಕ್ಕೋಡು ವಿದ್ಯಾರ್ಥಿ ನಿಲಯದಲ್ಲಿ 8ರಿಂದ 10ನೇ ತರಗತಿಯ ಸುಮಾರು 38 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಸತಿ ನಿಲಯದಲ್ಲಿ ಉಸ್ತುವಾರಿಗಾಗಿ ಒಬ್ಬ ವಾರ್ಡನ್, ಇಬ್ಬರು ಸಹಾಯಕರು ಇದ್ದಾರೆ. ಇವರೆಲ್ಲ ಇದ್ದರೂ ಕೆಲವು ವಿದ್ಯಾರ್ಥಿಗಳು ಕದ್ದುಮುಚ್ಚಿ ಬೀಡಿ, ಸಿಗರೇಟ್ ಸೇದುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕೆಡಿಪಿ ಸದಸ್ಯರಾದ ನಂದೀಶ್, ಚೇತನ್, ಜ್ಯೋತಿ, ಈ ಹಿಂದೆಯೂ ಇಂತಹ ಘಟನೆಗಳ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ. ವಾರ್ಡನ್‌ಗಳು ಸಹಾಯಕರ ಮೇಲೆ ಜವಾಬ್ದಾರಿ ಬಿಟ್ಟು, ಬೇರೆ ಕೆಲಸಕ್ಕೆ ಹೋಗುತ್ತಿರುವ ಬಗ್ಗೆಯೂ ಮಾಹಿತಿ ಇದೆ ಎಂದು ತಿಳಿಸಿದ್ದಾರೆ.
ಇಲ್ಲಿನ ಹಾಸ್ಟೇಲ್ ವಿದ್ಯಾರ್ಥಿಗಳಿಗೆ ಗಾಂಜಾ, ಸಿಗರೇಟ್, ಮದ್ಯ ಸರಬರಾಜು ಮಾಡುತ್ತಿರುವ ಘಟನೆ ಈ ಹಿಂದೆಯೂ ವರದಿಯಾಗಿತ್ತು. ಈ ಬಗ್ಗೆ ಪ್ರಶ್ನಿಸಿದ ವಾರ್ಡನ್ ಮೇಲೆ ಅಪ್ರಾಪ್ತ ವಿದ್ಯಾರ್ಥಿ ಹಲ್ಲೆಗೆ ಯತ್ನಿಸಿದ್ದ ಘಟನೆಯೂ ನಡೆದಿತ್ತು ಎಂದು ಸ್ಥಳೀಯರು ಆಪಾದಿಸಿದ್ದಾರೆ. ಅಲ್ಲದೆ, ಹಾಸ್ಟೇಲ್‌ನ ಕೆಲ ಸಿಬ್ಬಂದಿಗಳೇ ಇದನ್ನು ವಿಡಿಯೋ ಮಾಡಿದ್ದು, ಸಿಬ್ಬಂದಿಗಳ ನಡುವಿನ ವೈಷಮ್ಯದ ಹಿನ್ನೆಲೆಯಲ್ಲಿ ವಿಡಿಯೋ ಹೊರ ಬಂದಿದೆ ಎಂಬ ಮಾತುಗಳೂ ಕೇಳಿ ಬಂದಿವೆ.