ಸಾರಾಂಶ
ಪ್ರವಾಸಕ್ಕೆ ಹೋಗಿದ್ದಾಗ ಗೆಳತಿಯ ಖಾಸಗಿ ವಿಡಿಯೋ ಸೆರೆ ಹಿಡಿದು ಬಳಿಕ ಆ ವಿಡಿಯೋ ತೋರಿಸಿ ಆಕೆಗೆ ಬ್ಲ್ಯಾಕ್ ಮೇಲ್ ಮಾಡಿ ಬರೋಬ್ಬರಿ ₹2.57 ಕೋಟಿ ಸುಲಿಗೆ ಮಾಡಿದ ಆರೋಪದಡಿ ಯುವಕನೊಬ್ಬನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರು : ಪ್ರವಾಸಕ್ಕೆ ಹೋಗಿದ್ದಾಗ ಗೆಳತಿಯ ಖಾಸಗಿ ವಿಡಿಯೋ ಸೆರೆ ಹಿಡಿದು ಬಳಿಕ ಆ ವಿಡಿಯೋ ತೋರಿಸಿ ಆಕೆಗೆ ಬ್ಲ್ಯಾಕ್ ಮೇಲ್ ಮಾಡಿ ಬರೋಬ್ಬರಿ ₹2.57 ಕೋಟಿ ಸುಲಿಗೆ ಮಾಡಿದ ಆರೋಪದಡಿ ಯುವಕನೊಬ್ಬನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಚಾಮರಾಜಪೇಟೆಯ 19 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆರೋಪಿ ಮೋಹನ್ ಕುಮಾರ್ ಎಂಬಾತನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಏನಿದು ದೂರು?: ಆರೋಪಿ ಮೋಹನ್ ಕುಮಾರ್ ಮತ್ತು ಯುವತಿ ಕಳೆದ ಐದು ವರ್ಷಗಳ ಹಿಂದೆ ದೇವನಹಳ್ಳಿ ಖಾಸಗಿ ಬೋರ್ವಿಂಗ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡುವಾಗ ಪರಸ್ಪರ ಪರಿಚಿತರಾಗಿದ್ದರು. ಬಳಿಕ ಸ್ನೇಹ ಬೆಳೆದು ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಸ್ಕೂಲ್‌ಗೆ ರಜೆ ಇದ್ದಾಗ ಸ್ನೇಹಿತರ ಜತೆಗೆ ಗೋವಾ ಸೇರಿ ಹಲವು ಕಡೆಗೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಆರೋಪಿಯು ಮದುವೆಯಾಗುವುದಾಗಿ ನಂಬಿಸಿ ಯುವತಿ ಜತೆಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಯುವತಿ ಗಮನಕ್ಕೆ ಬಾರದಂತೆ ವಿಡಿಯೋ ಚಿತ್ರೀಕರಿಸಿದ್ದ ಎನ್ನಲಾಗಿದೆ.
5 ವರ್ಷದಿಂದ 2.57 ಕೋಟಿ ರು. ಸುಲಿಗೆ?: ಕೆಲ ದಿನಗಳ ಬಳಿಕ ಆರೋಪಿ ಮೋಹನ್ ಕುಮಾರ್, ಯುವತಿಗೆ ಖಾಸಗಿ ವಿಡಿಯೋ ಹಾಗೂ ಫೋಟೋಗಳನ್ನು ತೋರಿಸಿ ಹಣಕ್ಕೆ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದ. ಹಣ ಕೊಡದಿದ್ದಲ್ಲಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿದ್ದ. ಆರೋಪಿಯ ಬ್ಲ್ಯಾಕ್ ಮೇಲ್‌ಗೆ ಹೆದರಿದ ಯುವತಿ, ಕಳೆದ ಐದು ವರ್ಷಗಳಿಂದ ಬರೋಬ್ಬರಿ ₹2.57 ಕೋಟಿ ನೀಡಿದ್ದಳು.
ಬ್ಲ್ಯಾಕ್ ಮೇಲ್ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಆರೋಪಿಯು ಯುವತಿಗೆ ಬೆದರಿಕೆ ಹಾಕಿದ್ದ. ಹೀಗಾಗಿ ಯುವತಿ ಆತ ಕೇಳಿದಾಗಲೆಲ್ಲಾ ಹಣ ನೀಡುತ್ತಿದ್ದಳು. ಇತ್ತೀಚೆಗೆ ಆರೋಪಿ ಕಾಟ ತಾಳಲಾರದೆ ಯುವತಿ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ದೂರಿನ ಮೇರಗೆ ಸಿಸಿಬಿ ಪೊಲೀಸರು ಆರೋಪಿ ಮೋಹನ್ ಕುಮಾರ್‌ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.