ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಕಳೆದ ತಿಂಗಳು ನಗರದಲ್ಲಿ 8 ಮಂದಿ ವಿದೇಶಿ ಪ್ರಜೆಗಳು ಸೇರಿದಂತೆ 57 ಮಂದಿ ಪೆಡ್ಲರ್‌ಗಳನ್ನು ಬಂಧಿಸಿ 85 ಕೇಜಿ ಡ್ರಗ್ಸ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ವ್ಯಾಪ್ತಿ ಜನವರಿ ತಿಂಗಳಿನಲ್ಲಿ 36 ಎನ್‌ಡಿಪಿಸ್ (ಡ್ರಗ್ಸ್) ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 8 ವಿದೇಶಿ ಪ್ರಜೆಗಳು ಸೇರಿ 57 ಆರೋಪಿಗಳನ್ನು ಬಂಧಿಸಿ ವಿವಿಧ ಮಾದರಿಯ 85 ಕೆ.ಜಿ ಡ್ರಗ್ಸ್ ಜಪ್ತಿಯಾಗಿದೆ ಎಂದರು.
ಇನ್ನು ನಗರದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಿಸುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮದಡಿ 164 ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ ಮುಚ್ಚಳಿಕೆ ಉಲ್ಲಂಘನೆ ಮಾಡಿದ ಮೂವರು ವಿರುದ್ಧ ಬಾಂಡ್ ಮೌಲ್ಯವನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ವಿಚಾರಣೆಗೆ ಗೈರು ಹಿನ್ನೆಲೆಯಲ್ಲಿ ನ್ಯಾಯಾಲಯದ ವಾರೆಂಟ್ ಜಾರಿಗೊಂಡಿದ್ದ ಪೋಕ್ಸೊ ಸೇರಿ ಇತರೆ ಹಳೇ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ 13 ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ಹಾಗೂ ಡಾ। ಚಂದ್ರಗುಪ್ತ ಇದ್ದರು.ರೌಡಿಗಳ ವಿರುದ್ಧ ಕಠಿಣ ಕ್ರಮ: ನಗರದಲ್ಲಿ ರೌಡಿಸಂ ಮಟ್ಟ ಹಾಕಲು ಕಠಿಣ ಕ್ರಮಗಳನ್ನು ಜರುಗಿಸಲಾಗಿದೆ. ಈ ಸಂಬಂಧ ಮುಂಜಾಗ್ರತಾ ಕ್ರಮದಡಿ ರೌಡಿಗಳ ವಿರುದ್ಧ 115 ಪ್ರಕರಣಗಳನ್ನು ದಾಖಲಿಸಲಾಗಿದೆ. ಹಳೇ ಪ್ರಕರಣಗಳಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ 10 ಮಂದಿ ರೌಡಿಗಳನ್ನು ಬಂಧಿಸಲಾಗಿದೆ ಎಂದು ಆಯುಕ್ತ ದಯಾನಂದ್ ತಿಳಿಸಿದರು.
1308 ಪ್ರಕರಣ ಪೈಕಿ 762 ಕೇಸ್‌ನಲ್ಲಿ ಶಿಕ್ಷೆ:ಕಳೆದ ತಿಂಗಳು ನ್ಯಾಯಾಲಯಗಳಲ್ಲಿ ಒಟ್ಟು 1308 ಪ್ರಕರಣಗಳು ವಿಚಾರಣೆ ಪೂರೈಸಿ 762 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಇದರಲ್ಲಿ ನಾಲ್ವರು ಆರೋಪಿಗಳಿಗೆ 14ರಿಂದ 20 ವರ್ಷವರೆಗೆ ಶಿಕ್ಷೆಯಾಗಿದೆ. ಅಲ್ಲದೆ 753 ಪ್ರಕರಣಗಳಲ್ಲಿ 845 ಆರೋಪಿಗಳಿಗೆ ದಂಡ ವಿಧಿಸಲಾಗಿದೆ ಎಂದು ದಯಾನಂದ್ ವಿವರಿಸಿದರು.