ಸಾರಾಂಶ
ಬೆಂಗಳೂರು : ಜಾಲಹಳ್ಳಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಕುವೆಂಪು ವೃತ್ತದ ಕೆಳಸೇತುವೆ ರಸ್ತೆಯಲ್ಲಿ ಮೊಳೆಗಳನ್ನು ಸಂಚಾರ ಪೊಲೀಸರು ಸಂಗ್ರಹಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇದೇ ವೇಳೆ ಈ ಮೊಳೆಗಳು ರಸ್ತೆಯಲ್ಲಿ ಇಷ್ಟೊಂದು ಕಂಡು ಬರಲು ಪಂಕ್ಚರ್ ಅಂಗಡಿಗಳ ಕೈವಾಡವಿದೆ ಎಂದು ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದಾರೆ.
ಕೆಳಸೇತುವೆ ರಸ್ತೆಯಲ್ಲಿ ಇತ್ತೀಚೆಗೆ ಹಲವು ವಾಹನಗಳು ಪಂಕ್ಚರ್ ಆಗುತ್ತಿದ್ದ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ರಸ್ತೆಯಲ್ಲಿ ಸಣ್ಣ ಮೊಳೆಗಳು ಬಿದ್ದಿರುವುದು ಕಂಡು ಬಂದಿದೆ. ಈ ಮೊಳೆಗಳನ್ನು ಸಂಚಾರ ಪೊಲೀಸರು ಹೆಕ್ಕಿ ರಸ್ತೆಯನ್ನು ಸ್ವಚ್ಛಗೊಳಿಸಿದ್ದಾರೆ.
ಈ ಸಂಬಂಧ ಜಾಲಹಳ್ಳಿ ಸಂಚಾರ ಠಾಣೆ ಪೊಲೀಸರು ಕೆಳಸೇತುವೆ ರಸ್ತೆ ಸ್ವಚ್ಛತೆ ಹಾಗೂ ಸಂಗ್ರಹಿಸಿರುವ ಮೊಳೆಗಳ ಫೋಟೋವನ್ನು ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಹಲವು ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಇದರ ಹಿಂದೆ ಪಂಕ್ಚರ್ ಅಂಗಡಿಗಳ ಕೈವಾಡವಿರುವ ಸಾಧ್ಯತೆಯಿದೆ. ಸಮೀಪದ ಸಿಸಿಟಿವಿ ಕ್ಯಾಮರಾ ಪರಿಶೀಲಿಸುವಂತೆ ಸಂಚಾರ ಪೊಲೀಸರಿಗೆ ಸಲಹೆ ನೀಡಿದ್ದಾರೆ.
ಯಾರೋ ಉದ್ದೇಶಪೂರ್ವಕವಾಗಿ ಮೊಳೆಗಳನ್ನು ರಸ್ತೆಯಲ್ಲಿ ಚೆಲ್ಲಿರುವಂತಿದೆ. ಕುವೆಂಪು ವೃತ್ತದ ಸಮೀಪದ ದೇವಿನಗರದ ಬಳಿ ಇರುವ ಪಂಕ್ಚರ್ ಶಾಪ್‌ಗಳ ಕೈವಾಡ ಇರುವ ಸಾಧ್ಯತೆಯಿದೆ. ಹೀಗಾಗಿ ಆ ಪಂಕ್ಚರ್ ಅಂಗಡಿಗಳ ಮೇಲೆ ಕಣ್ಣಿಡಿ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ಸಂಚಾರ ಪೊಲೀಸರ ಈ ಕಾರ್ಯವನ್ನು ಹಲವರು ಶ್ಲಾಘಿಸಿದ್ದಾರೆ.