ಹುಕ್ಕಾ ಬಾರಲ್ಲಿ ಬಳಸುವ ₹1.45 ಕೋಟಿಯ ನಿಕೋಟಿನ್‌ ಜಪ್ತಿ

| Published : Feb 14 2024, 02:15 AM IST / Updated: Feb 14 2024, 04:21 PM IST

ಸಾರಾಂಶ

ರಾಜ್ಯದಲ್ಲಿ ಹುಕ್ಕಾ ಬಾರ್‌ ನಿಷೇಧಿಸಿ ಆದೇಶ ಹೊರಡಿಸಿದ ಬೆನ್ನಲ್ಲೆ ಬೆಂಗಳೂರು ಸಿಸಿಬಿ ಭರ್ಜರಿ ಕಾರ್ಯಾಚರಣೆ ನಡೆಸಿದೆ, ನಿಕೋಟಿನ್‌ ಸೇರಿದಂತೆ ಹಲವು ಹಾನಿಕಾರ ವಸ್ತುಗಳನ್ನು ಜಪ್ತಿ ಮಾಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧಿಸಿದ ಬೆನ್ನಲ್ಲೇ ಅಕ್ರಮವಾಗಿ ಹುಕ್ಕಾ ಬಾರ್‌ಗಳಿಗೆ ನಿಕೋಟಿನ್ ಹಾಗೂ ತಂಬಾಕು ಉತ್ಪನಗಳನ್ನು ಪೂರೈಸುತ್ತಿದ್ದ 9 ಮಂದಿಯನ್ನು ಬಂಧಿಸಿ ₹1.45 ಕೋಟಿ ಮೌಲ್ಯದ ವಸ್ತುಗಳನ್ನು ಸಿಸಿಬಿ ಜಪ್ತಿ ಮಾಡಿದೆ.

ಮೈಸೂರಿನ ಮುರಳೀಧರ್‌, ಇರೋದಯ ಅಂತೋಣಿ, ಸಂಪಂಗಿರಾಮನಗರದ ವಿಶ್ವನಾಥ್‌ ಪ್ರತಾಪ್ ಸಿಂಗ್‌ ಅಲಿಯಾಸ್ ಬಿಪಿನ್, ಭರತ್‌, ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ಕಂಡಿಬೇಡಳ ಮಧು, ಹರಿಕೃಷ್ಣ, ರಮೇಶ್, ದಿವಾಕರ್ ಚೌಧರಿ ಹಾಗೂ ಮಹದೇವಪುರದ ಮಧು ಬಂಧಿತರು.

ಆರೋಪಿಗಳಿಂದ ತಂಬಾಕು ಹಾಗೂ ನಿಕೋಟಿನ್ ಅಂಶವಿರುವ ‘ಅಪ್ಜಲ್’ ಹೆಸರಿನ ಮೊಲಾಸಿಸ್ (ಹುಕ್ಕಾ ಬಾರ್‌ಗೆ ಬಳಸುವ ಉತ್ಪನ್ನ) ಮತ್ತು ತಂಬಾಕು ಉತ್ಪನ್ನಗಳಾದ ದಿಲ್‌ಬಾಗ್, ಜೆಡ್ಎಲ್-1, ಆ್ಯಕ್ಷನ್‌-7, ಬಾದ್‌ಷಾ, ಮಹಾ ರಾಯಲ್-717 ಸೇರಿದಂತೆ ಒಟ್ಟು ₹1.45 ಕೋಟಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. 

ಇತ್ತೀಚಿಗೆ ಯುವ ಸಮೂಹದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ ಎಂದು ಹೇಳಿ ರಾಜ್ಯದಲ್ಲಿ ಹುಕ್ಕಾ ಬಾರ್ ಅನ್ನು ಸರ್ಕಾರ ನಿಷೇಧಿಸಿದ ಬಳಿಕ ನಗರದಲ್ಲಿ ಅಕ್ರಮವಾಗಿ ಹುಕ್ಕಾ ಬಾರ್‌ಗಳಿಗೆ ತಂಬಾಕು ಹಾಗೂ ನಿಕೋಟಿನ್‌ ಉತ್ಪನಗಳ ಪೂರೈಕೆದಾರರ ಮೇಲೆ ಮೊದಲ ಬಾರಿ ಸಿಸಿಬಿ ಭರ್ಜರಿ ಕಾರ್ಯಾಚರಣೆ ನಡೆಸಿದೆ.

ಚಾಮರಾಜಪೇಟೆ, ಮಹದೇವಪುರ ಹಾಗೂ ರಾಮಮೂರ್ತಿ ನಗರ ಠಾಣೆಗಳ ವ್ಯಾಪ್ತಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ತಂಬಾಕು ಹಾಗೂ ನಿಕೋಟಿನ್‌ ಉತ್ಪನ್ನಗಳನ್ನು ಕೆಲವರು ದಾಸ್ತಾನು ಮಾಡಿದ್ದರು. 

ಈ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದರು.

ಈ ಉತ್ಪನ್ನಗಳನ್ನು ಹೆಚ್ಚಿನ ಹಣಕ್ಕಾಗಿ ಸಾರ್ವಜನಿಕರು ಹಾಗೂ ವ್ಯಾಪಾರಿಗಳಿಗೆ ಆರೋಪಿಗಳು ಮಾರಾಟ ಮಾಡುತ್ತಿದ್ದರು. 

ದಾಳಿ ವೇಳೆ 9 ಮಂದಿಯನ್ನು ಬಂಧಿಸಲಾಗಿದ್ದು, ತಪ್ಪಿಸಿಕೊಂಡಿರುವ ಕೆಲ ಆರೋಪಿಗಳ ಪತ್ತೆಗೆ ತನಿಖೆ ಮುಂದುವರೆಸಲಾಗಿದೆ ಎಂದು ಆಯುಕ್ತರು ಹೇಳಿದರು.

ಚಾಮರಾಜಪೇಟೆಯಲ್ಲಿ ನಿಕೋಟಿನ್‌ ಉತ್ಪನ್ನಗಳನ್ನು ಅಕ್ರಮವಾಗಿ ಮುರಳೀಧರ್‌, ಅಂತೋಣಿ, ವಿಶ್ವನಾಥ್‌ ಪ್ರತಾಪ್ ಸಿಂಗ್‌, ಭರತ್‌ ದಾಸ್ತಾನು ಮಾಡಿದ್ದರೆ, ಇನ್ನುಳಿದವರು ರಾಮಮೂರ್ತಿ ನಗರ ಹಾಗೂ ಮಹದೇವಪುರದಲ್ಲಿ ಪ್ರತ್ಯೇಕವಾಗಿ ದಂಧೆ ನಡೆಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಈ ದಾಳಿಯನ್ನು ಸಿಸಿಬಿ ಡಿಸಿಪಿ ಅಬ್ದುಲ್ ಅಹದ್ ಮಾರ್ಗದರ್ಶನದಲ್ಲಿ ಸಿಸಿಬಿ ಮಹಿಳಾ ಮತ್ತು ಸಂರಕ್ಷಣಾ ದಳದ ಎಸಿಪಿ ಎಚ್‌.ಎನ್.ಧರ್ಮೇಂದ್ರ ಹಾಗೂ ಇನ್‌ಸ್ಪೆಕ್ಟರ್‌ ರಾಜು ನೇತೃತ್ವದ ತಂಡವು ದಾಳಿ ನಡೆಸಿದೆ.1919ರ ಕಾಯ್ದೆಯಡಿ ಕೇಸ್‌

ಆರೋಪಿಗಳ ವಿರುದ್ಧ 1919ರ ಪಾಯ್ಸನ್ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ. ಹುಕ್ಕಾ ನಿಷೇಧದ ಆದೇಶದಲ್ಲಿ ನಿಕೋಟಿನ್‌ ವಿಷಕಾರಿ ಅಂಶ ಎಂದು ಉಲ್ಲೇಖಿಸಲಾಗಿದೆ. 

ಹೀಗಾಗಿ ಪಾಯ್ಸನ್‌ ಕಾಯ್ದೆಯನ್ನು ಕೂಡಾ ಎಫ್‌ಐಆರ್‌ನಲ್ಲಿ ಅಡಕಗೊಳಿಸಲಾಗಿದೆ. ಇದರಲ್ಲಿ ದಂಡ ಸಹಿತ 10 ವರ್ಷಗಳ ವರೆಗೆ ಶಿಕ್ಷೆ ವಿಧಿಸಬಹುದಾಗಿದೆ ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.ಮೊಲಾಸಿಸ್ ಆರೋಗ್ಯಕ್ಕೆ ಹಾನಿಕಾರಕ

ಹುಕ್ಕಾ ಬಾರ್‌ಗಳಲ್ಲಿ ಅಫ್ಜಲ್ ಹೆಸರಿನ ಮೊಲಾಸಿಸ್‌ ಅನ್ನು ಕಾನೂನುಬಾಹಿರವಾಗಿ ಬಳಸುತ್ತಿದ್ದರು. ಇದೂ ಸುಟ್ಟಾಗ ಕಾರ್ಬನ್‌ ಮೊನಾಕ್ಸೈಡ್ ಬಿಡುಗಡೆಯಾಗುತ್ತದೆ. ಇದರಿಂದ ಹುಕ್ಕಾ ಸೇವಿಸುವವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.