ಸಾರಾಂಶ
ಮದ್ಯ ಬಿಡಿಸುವ ಸಲುವಾಗಿ ಮದ್ಯವರ್ಜನ ಕೇಂದ್ರದಲ್ಲಿ ದಾಖಲಾಗಿದ್ದ ವ್ಯಕ್ತಿಯೊಬ್ಬ ದಿಢೀರ್ ಸಾವನ್ನಪ್ಪಿರುವ ಘಟನೆ ಮಂಡ್ಯ ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಮಂಡ್ಯ : ಮದ್ಯ ಬಿಡಿಸುವ ಸಲುವಾಗಿ ಮದ್ಯವರ್ಜನ ಕೇಂದ್ರದಲ್ಲಿ ದಾಖಲಾಗಿದ್ದ ವ್ಯಕ್ತಿಯೊಬ್ಬ ದಿಢೀರ್ ಸಾವನ್ನಪ್ಪಿರುವ ಘಟನೆ ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಸೋಸಲೆ ಗ್ರಾಮದ ಹರೀಶ್ (32) ಮೃತ ವ್ಯಕ್ತಿ. ಕುಡಿತದ ಚಟಕ್ಕೆ ದಾಸನಾಗಿದ್ದ ಹರೀಶನನ್ನು ಕುಟುಂಬದವರು ಮಂಡ್ಯಕ್ಕೆ ಕರೆತಂದು ಬೇವಿನಹಳ್ಳಿಯ ಮದ್ಯವರ್ಜನ ಕೇಂದ್ರಕ್ಕೆ ಜ.11ರಂದು ದಾಖಲಿಸಿದ್ದರು.
ಶುಕ್ರವಾರ ಹರೀಶ್‌ನ ತಂಗಿ ಬಟ್ಟೆ ತೆಗೆದುಕೊಂಡು ಬಂದ ಸಮಯದಲ್ಲೂ ಆತನನ್ನು ಭೇಟಿಯಾಗುವುದಕ್ಕೆ ಕೇಂದ್ರದವರು ಅವಕಾಶ ನೀಡಿಲ್ಲ. ಈಗ ಹರೀಶ್ ಅವರನ್ನು ನೋಡಲಾಗುವುದಿಲ್ಲ ಎಂದು ಹೇಳಿ ಕಳುಹಿಸಿದ್ದಾರೆ. ಅದಾದ ಅರ್ಧಗಂಟೆಗೆ ಹರೀಶ್‌ಗೆ ತೀರಾ ಹುಷಾರಿಲ್ಲದಿರುವ ಕಾರಣ ಆಸ್ಪತ್ರೆಗೆ ದಾಖಲಿಸಿರುವುದಾಗಿ ವಿಷಯ ಮುಟ್ಟಿಸಿದ್ದಾರೆ. ಆಸ್ಪತ್ರೆಗೆ ಬರುವಷ್ಟರಲ್ಲಿ ಹರೀಶ್ ಸಾವಿಗೀಡಾಗಿದ್ದನೆಂದು ಹೇಳಲಾಗಿದೆ.
ಕೇಂದ್ರದ ಸಿಬ್ಬಂದಿಯ ದೈಹಿಕ ಕಿರುಕುಳ ಹಾಗೂ ಸರಿಯಾದ ಚಿಕಿತ್ಸೆ ನೀಡದಿರುವುದೇ ತನ್ನ ಗಂಡನ ಸಾವಿಗೆ ಕಾರಣ ಎಂದು ಹರೀಶ್‌ನ ಪತ್ನಿ ಯಶೋದಾ ಗ್ರಾಮಾಂತರ ಠಾಣೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಶವ ಪರೀಕ್ಷೆ ನಡೆಸಿದ ಬಳಿಕ ಶವವನ್ನು ಕುಟುಂಬದವರಿಗೆ ಒಪ್ಪಿಸಲಾಯಿತು.
ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ:
ಕುಡಿತದ ಚಟ ಬಿಟ್ಟು ಮೃತ ಹರೀಶ್‌ಗೆ ಯಾವುದೇ ಅನಾರೋಗ್ಯ ಇರಲಿಲ್ಲ. 8 ಸಾವಿರ ಪಡೆದು ಕುಡಿತ ಬಿಡಿಸುತ್ತೇವೆ ಎಂದಿದ್ದರು. ಕಳೆದ ವಾರವಷ್ಟೇ ಹರೀಶ್‌ನನ್ನು ಮದ್ಯವರ್ಜನ ಕೇಂದ್ರಕ್ಕೆ ದಾಖಲಿಸಿದ್ದೆವು. ನಿನ್ನವೆರೆಗೂ ಆತನೊಂದಿಗೆ ಮಾತನಾಡುವುದಕ್ಕೂ ಬಿಟ್ಟಿರಲಿಲ್ಲ. ನಿನ್ನೆ ಸಂಜೆ ಕರೆ ಮಾಡಿ ಹುಷಾರಿಲ್ಲ ಆಸ್ಪತ್ರೆಗೆ ಸೇರಿಸಿದ್ದೇವೆ ಎಂದಿದ್ದರು. ಬಂದು ನೋಡಿದ್ರೆ ಅಷ್ಟೊತ್ತಿಗೆ ಮೃತಪಟ್ಟಿದ್ದಾನೆ ಎಂದು ಕುಟುಂಬದವರು ಗೋಳಾಡಿದರು. ಅವರ ಆಕ್ರಂದನ ಮುಗಿಲು ಮುಟ್ಟಿತ್ತು.
ಅತ್ತ ಹರೀಶ್ ಸಾವನ್ನಪ್ಪಿರುವ ಸುದ್ದಿ ತಿಳಿಯುತ್ತಿದ್ದಂತೆ ಮದ್ಯವರ್ಜನ ಕೇಂದ್ರದ ವ್ಯವಸ್ಥಾಪಕ ಚೇತನ್ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಮದ್ಯವರ್ಜನ ಕೇಂದ್ರ ನಡೆಸಬೇಕಾದರೆ ಕರ್ನಾಟಕ ಪಬ್ಲಿಕ್ ಮೆಡಿಕಲ್ ಎಸ್ಟಾಬ್ಲಿಷ್‌ಮೆಂಟ್ (ಕೆಪಿಎಂಇ ) ಅವರಿಂದ ಅನುಮತಿ ಪಡೆಯಬೇಕು. ಬೇವಿನಹಳ್ಳಿ ಮದ್ಯವರ್ಜನ ಕೇಂದ್ರದವರು ಎರಡು ತಿಂಗಳ ಹಿಂದಷ್ಟೇ ಆನ್‌ಲೈನ್‌ನಲ್ಲಿ ಅಪ್ಲಿಕೇಷನ್ ಅಪ್ಲೋಡ್ ಮಾಡಿದ್ದರು. ತಾಲೂಕು ಆರೋಗ್ಯಾಧಿಕಾರಿಗಳು ನಿನ್ನೆಯಷ್ಟೇ ಸ್ಥಳ ಪರಿಶೀಲನೆ ನಡೆಸಿ ಬಂದಿದ್ದರು. ಕೆಪಿಎಂಇಯಿಂದ ಅನುಮತಿ ಪಡೆವ ಮುನ್ನವೇ ಕೇಂದ್ರವನ್ನು ತೆರೆಯುವಂತಿರಲಿಲ್ಲ.
- ಡಾ.ಕೆ.ಮೋಹನ್, ಜಿಲ್ಲಾ ಆರೋಗ್ಯಾಧಿಕಾರಿ, ಮಂಡ್ಯ