ಸಾರಾಂಶ
ಬೆಂಗಳೂರು : ಮಾಜಿ ಸಂಸದ ಡಿ.ಕೆ.ಸುರೇಶ್ ಹೆಸರಿನಲ್ಲಿ ಚಿನ್ನಾಭರಣ ವ್ಯಾಪಾರಿಗಳಿಗೆ ವಂಚನೆ ಪ್ರಕರಣದ ತನಿಖಾ ಉಸ್ತುವಾರಿ ಎಸಿಪಿ ಸೇರಿದಂತೆ 52 ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಶುಕ್ರವಾರ ಆದೇಶಿಸಿದೆ.
ವಂಚನೆ ಪ್ರಕರಣ ಸಂಬಂಧ ಐಶ್ವರ್ಯಗೌಡ ದಂಪತಿ ವಿರುದ್ಧ ತನಿಖೆ ನಡೆದಿರುವ ಹೊತ್ತಿನಲ್ಲೇ ತನಿಖಾ ಉಸ್ತುವಾರಿ ವಹಿಸಿದ್ದ ಬ್ಯಾಟರಾಯನಪುರ ಉಪ ವಿಭಾಗದ ಎಸಿಪಿ ಭರತ್ ರೆಡ್ಡಿ ಅವರನ್ನು ದಿಢೀರ್ ವರ್ಗಾವಣೆಗೊಳಿಸಿರುವುದು ಚರ್ಚೆಗೆ ಕಾರಣವಾಗಿದೆ.
ವರ್ಗಾವಣೆ ಬಳಿಕ ಭರತ್ ರೆಡ್ಡಿ ಅವರಿಗೆ ಸ್ಥಳ ತೊರಿಸದೆ ಡಿಜಿಪಿ ಕಚೇರಿಗೆ ವರದಿ ಮಾಡಿಕೊಳ್ಳಲು ಸೂಚಿಸಲಾಗಿದ್ದು, ಅವರಿಂದ ತೆರವಾದ ಸ್ಥಾನಕ್ಕೆ ಗುಪ್ತಚರ ದಳದ ಡಿವೈಎಸ್ಪಿ ಸಿ.ವಿ.ದೀಪಕ್ ನಿಯುಕ್ತಿಗೊಂಡಿದ್ದಾರೆ. ಹಾಗೆ ಇತ್ತೀಚಿಗೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿದ್ದ ತುಮಕೂರು ಜಿಲ್ಲೆ ಮಧುಗಿರಿ ಉಪ ವಿಭಾಗದ ಡಿವೈಎಸ್ಪಿ ರಾಮಚಂದ್ರರವರು ಸಹ ವರ್ಗಾವಣೆಗೊಂಡಿದ್ದು, ಅವರಿಂದ ಖಾಲಿಯಾದ ಹುದ್ದೆಯನ್ನು ಜಿ.ಮಂಜುನಾಥ್ ರವರಿಗೆ ಸರ್ಕಾರ ನೀಡಿದೆ. ಒಟ್ಟಾರೆ 11 ಡಿವೈಎಸ್ಪಿ ಹಾಗೂ 41 ಇನ್ಸ್‌ಪೆಕ್ಟರ್‌ಗಳು ಸಹ ಎತ್ತಂಗಡಿಯಾಗಿದ್ದಾರೆ.
ವರ್ಗಾವಣೆ ಡಿವೈಎಸ್ಪಿಗಳ ಪಟ್ಟಿ:
ಜ್ಯೋತಿಬಾ ನಿಕ್ಕಂ-ಸಂಚಾರ ಉಪ ವಿಭಾಗ ಬೆಳಗಾವಿ, ಜಿ.ಮಂಜುನಾಥ್-ಮಧುಗಿರಿ, ಪಿ.ಎ.ಸುರಜ್- ಮಡಿಕೇರಿ, ಡಿ.ಎನ್.ಸನಾದಿ- ಸಿಇಎನ್ ಬೀದರ್ ಜಿಲ್ಲೆ, ಕುಮಾರಸ್ವಾಮಿ- ಡಿಸಿಆರ್‌ಇ, ಗಜಾನನ ವಾಮನ ಸುತಾರ- ಬಾಗಲಕೋಟೆ, ಸಂಜೀವ್ ಕುಮಾರ್ ತಿರ್ಲುಕ- ಶಿವಮೊಗ್ಗ ಬಿ ಉಪ ವಿಭಾಗ, ಶರಣಬಸವೇಶ್ವರ ಭೀಮರಾವ್- ದಾವಣಗೆರೆ, ಸಿ.ಎಸ್.ಆನಂದ್- ಜೆ.ಸಿ.ನಗರ, ಸಿ.ವಿ.ದೀಪಕ್- ಬ್ಯಾಟರಾಯನಪುರ ಹಾಗೂ ಎಚ್.ಡಿ.ಕುಲಕರ್ಣಿ- ಕುಂದಾಪುರ.