ಸಾರಾಂಶ
ವಿದ್ಯುತ್ ಸ್ಪರ್ಶದಿಂದ ಕಾರ್ಮಿಕ ತೀವ್ರವಾಗಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮದ್ದೂರು ತಾಲೂಕಿನ ಸೋಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಶನಿವಾರ ಜರುಗಿದೆ. ಕೈಗಾರಿಕಾ ಪ್ರದೇಶದ ಆರ್.ಡಿ.ಟಿ.ಎಂಟಿ ಕಾರ್ಖಾನೆಯ ಸರೋಜ್ ಕುಮಾರ್ ಗಾಯಗೊಂಡರು
ಮದ್ದೂರು: ವಿದ್ಯುತ್ ಸ್ಪರ್ಶದಿಂದ ಕಾರ್ಮಿಕ ತೀವ್ರವಾಗಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲೂಕಿನ ಸೋಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಶನಿವಾರ ಜರುಗಿದೆ.
ಕೈಗಾರಿಕಾ ಪ್ರದೇಶದ ಆರ್.ಡಿ.ಟಿ.ಎಂಟಿ ಕಾರ್ಖಾನೆಯ ಸರೋಜ್ ಕುಮಾರ್ (20) ಗಾಯಗೊಂಡರು ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಿಹಾರ ರಾಜ್ಯದ ಸೀತಾ ಮರೖನ ನಿವಾಸಿ ಸರೋಜ್ ಕುಮಾರ್ ಸೋಮನಹಳ್ಳಿ ಕೈಗಾರಿಕಾ ಪ್ರದೇಶದ ಟಿಎಂಟಿ ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡು ಕಾರ್ಮಿಕರ ವಸತಿ ಗೃಹದಲ್ಲಿ ವಾಸವಾಗಿದ್ದನು. ಶನಿವಾರ ಬೆಳಗ್ಗೆ ವಸತಿಗೃಹದ ನೀರು ಪೂರೈಸುವ ಪಂಪ್ ಸೆಟ್ ವೈರು ತುಂಡಾಗಿತ್ತು. ಇದನ್ನು ಸರಿಪಡಿಸುವ ವೇಳೆ ವಿದ್ಯುತ್ ಸ್ಪರ್ಶ ವಾಗಿ ಸರೋಜ್ ಕುಮಾರ್ ಗಾಯಗೊಂಡಿದ್ದಾನೆ. ಈ ಸಂಬಂಧ ಮದ್ದೂರು ಪೊಲೀಸರು ಪ್ರಕರಣ ದಾಖಲ ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಹಳ್ಳಕ್ಕೆ ಉರುಳಿದ ಬಸ್: ಮೂವರಿಗೆ ತೀವ್ರ ಗಾಯ
ಹಲಗೂರು: ಹಳ್ಳಕ್ಕೆ ಬಸ್ ಉರುಳಿ ಬಿದ್ದ ಪರಿಣಾಮ ಬಸ್‌ನಲ್ಲಿದ್ದ ಮೂವರು ತೀವ್ರ ಗಾಯಗೊಂಡ ಘಟನೆ ಸಮೀಪದ ಮುತ್ತತ್ತಿ ಬಳಿಯ ಕೆಸರಕ್ಕಿ ಹಳ್ಳದ ಬಳಿ ಶನಿವಾರ ಸಂಜೆ ನಡೆದಿದೆ.
ಬೆಂಗಳೂರು ಮೂಲದ 35 ಮಂದಿ ಪ್ರವಾಸಿಗರು ಮುತ್ತತ್ತಿ ಅಂಜನೇಯ ಸ್ವಾಮಿ ದೇವಾಲಯಕ್ಕೆ ಪೂಜೆಗಾಗಿ ತೆರಳುತ್ತಿದ್ದರು. ಮುತ್ತತ್ತಿ ಬಳಿಯ ಕೆಸರಕ್ಕಿ ಹಳ್ಳದ ಬಳಿ ಚಾಲಕನ ನಿಯಂತ್ರಣ ತಪ್ಪಿದ್ದು, ರಸ್ತೆಯ ತಡೆಗೋಡೆ ಹೊಡೆದುಕೊಂಡು ಮರಕ್ಕೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಬಸ್ ಚಾಲಕನ ಕಾಲು ಮುರಿದಿದ್ದು, ಮೂವರು ಪ್ರಯಾಣಿಕರ ತಲೆಗೆ ಪೆಟ್ಟಾಗಿದೆ. ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ.
ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿರತೆ ದಾಳಿಗೆ ಹಸು ಬಲಿ
ಪಾಂಡವಪುರ: ಪಟ್ಟಣದ ಹಾರೋಹಳ್ಳಿಯ ರೈತ ಹಾಗೂ ಪುರಸಭೆ ಮಾಜಿ ಸದಸ್ಯ ಎಲ್.ಶ್ರೀನಿವಾಸ್ ಅವರ ಹಿಲಾತಿ ಹಸುವಿನ ಫಾರಂ ಮೇಲೆ ಚಿರತೆ ದಾಳಿ ನಡೆಸಿ ಹಸುವೊಂದನ್ನು ತಿಂದು ಹಾಕಿರುವ ಘಟನೆ ಶನಿವಾರ ಬೆಳಗಿನ ಜಾವಾ ನಡೆದಿದೆ. ಸುಮಾರು 50 ಸಾವಿರ ರುಪಾಯಿ ಬೆಲೆ ಬಾಳುವ ಹಿಲಾತಿ ಹಸುವನ್ನು ಫಾರಂನಿಂದ ಜಮೀನಿನ ಮೈದಾನಕ್ಕೆ ಎಳೆದೊಯ್ದು ಚಿರತೆ ತಿಂದು ಹಾಕಿದೆ. ಚಿರತೆಯ ಹೆಜ್ಜೆ ಗುರುತುಗಳನ್ನು ಆಧರಿಸಿ ಹಸುವನ್ನು ಚಿರತೆಯೇ ತಿಂದು ಹಾಕಿದೆ ಎಂದು ಅರಣ್ಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಜತೆಗೆ ತಕ್ಷಣವೇ ಫಾರಂ ಬಳಿ ಬೋನಿರಿಸಿ ಚಿರತೆ ಸೆರೆ ಹಿಡಿಯಲು ಅಗತ್ಯ ಕ್ರಮ ವಹಿಸಿದ್ದಾರೆ.