ಸಾರಾಂಶ
ಹಾಡಹಗಲೇ ಬ್ಯಾಂಕ್ ಎಟಿಎಂಗಳಿಗೆ ಹಣ ಸಾಗಿಸುತ್ತಿದ್ದ ಸಿಬ್ಬಂದಿ ಮೇಲೆ ಗುಂಡು ಹಾರಿಸಿ 83 ಲಕ್ಷ ರು. ದೋಚಿದ ಆರೋಪಿಗಳ ಪತ್ತೆಗೆ ಮುಗಿ ಬಿದ್ದಿರುವ ಪೊಲೀಸ್ ತಂಡ ತನಿಖೆಯಲ್ಲಿ ಕೊಂಚ ಪ್ರಗತಿ ಸಾಧಿಸಿದೆ
ಅಪ್ಪಾರಾವ್ ಸೌದಿ
ಬೀದರ್: ಹಾಡಹಗಲೇ ಬ್ಯಾಂಕ್ ಎಟಿಎಂಗಳಿಗೆ ಹಣ ಸಾಗಿಸುತ್ತಿದ್ದ ಸಿಬ್ಬಂದಿ ಮೇಲೆ ಗುಂಡು ಹಾರಿಸಿ 83 ಲಕ್ಷ ರು. ದೋಚಿದ ಆರೋಪಿಗಳ ಪತ್ತೆಗೆ ಮುಗಿ ಬಿದ್ದಿರುವ ಪೊಲೀಸ್ ತಂಡ ತನಿಖೆಯಲ್ಲಿ ಕೊಂಚ ಪ್ರಗತಿ ಸಾಧಿಸಿದೆ. ಆರೋಪಿಗಳಿಬ್ಬರೂ ಬಿಹಾರ ಮೂಲದ ಗ್ಯಾಂಗ್‌ಸ್ಟರ್ ಎನ್ನಲಾದ ಅಮಿತ್ ಕುಮಾರ ಸಹಚರರು ಎಂಬ ಮಾಹಿತಿ ಲಭ್ಯವಾಗಿದೆ.
ಬೀದರ್‌ನ ಎಸ್‌ಬಿಐನಿಂದ ಎಟಿಎಂಗಳಿಗೆ ಹಣ ಸಾಗಿಸುತ್ತಿದ್ದ ಸಿಬ್ಬಂದಿ ಮೇಲೆ ಗುಂಡಿನ ಸುರಿಮಳೆಗರೆಯಲಾಗಿತ್ತು. ಬಳಿಕ ಓರ್ವನ ಹತ್ಯೆ ಮಾಡಿ 83 ಲಕ್ಷ ರು. ನಗದು ದೋಚಿ ಬೈಕಲ್ಲಿ ಪರಾರಿಯಾಗಿರುವ ಇಬ್ಬರು ದುಷ್ಕರ್ಮಿಗಳು ಬಿಹಾರ ಮೂಲದವರು ಎಂದು ಪತ್ತೆ ಹಚ್ಚಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಬೀದರ್‌ನಲ್ಲಿ ಎಟಿಎಂಗೆ ಹಣ ತುಂಬಿಸುವ ಸಿಎಂಎಸ್ ಸಂಸ್ಥೆ ಸಿಬ್ಬಂದಿಯನ್ನು ಹತ್ಯೆ ಮಾಡಿ ಹಣ ದೋಚಿ ಹೈದರಾಬಾದ್‌ಗೆ ಪರಾರಿಯಾಗಿ ಅಲ್ಲಿಂದ ಛತ್ತೀಸಗಢದ ರಾಯ್‌ಪುರ ಮಾರ್ಗವಾಗಿ ಬಿಹಾರಕ್ಕೆ ಪರಾರಿಯಾಗಲು ಯತ್ನಿಸಿದ್ದಾರೆ.
ಹೈದರಾಬಾದ್‌ನ ಅಫ್ಜಲ್‌ಗಂಜ್ ಖಾಸಗಿ ಟ್ರಾವೆಲ್ಸ್ ಸಿಬ್ಬಂದಿ ಮೇಲೆಯೂ ಗುಂಡಿನ ದಾಳಿ ನಡೆಸಿ ಸಿಕಂದರಾಬಾದ್ ರೈಲು ನಿಲ್ದಾಣಕ್ಕೆ ಆಟೋದಲ್ಲಿ ಹೋಗಿದ್ದಾರೆ. ಅಲ್ಲಿಂದ ಉತ್ತರ ಭಾರತಕ್ಕೆ ಪರಾರಿಯಾಗಿರಬಹುದು. ಈ ಮಧ್ಯೆ ಹೋಟೆಲ್‌ವೊಂದಕ್ಕೆ ತೆರಳಿ ದೋಸೆ ಸೇವಿಸಿರುವ ಬಗ್ಗೆಯೂ ಊಹಾಪೋಹಗಳಿವೆ ಎಂದರು.
ಈಗಾಗಲೇ ಸಿಸಿಟಿವಿ ವಿಡಿಯೋ ಪರಿಶೀಲಿಸಿ, ನೆರೆಯ ರಾಜ್ಯದ ಪೊಲೀಸರ ಸಹಕಾರ ಪಡೆದು ತನಿಖೆ ನಡೆಸಿದಾಗ ಓರ್ವ ದುಷ್ಕರ್ಮಿ ಮನೀಶ್ ಎಂದು ಪತ್ತೆಯಾಗಿದೆ. ಇವನು ಬಿಹಾರದ ಗ್ಯಾಂಗ್‌ಸ್ಟರ್ ಅಮಿತ್ ಕುಮಾರ್ ಎಂಬಾತನ ಸಹಚರ ಮತ್ತು ಛತ್ತೀಸಗಢ ರಾಜ್ಯದಲ್ಲಿ ನಡೆದ 70 ಲಕ್ಷ ರು. ಲೂಟಿ ಪ್ರಕರಣ ಮತ್ತು ಬೀದರ್ ಪ್ರಕರಣದಲ್ಲಿ ಸಾಮ್ಯತೆ ಕಂಡುಬರುತ್ತಿದೆ. ಹೀಗಾಗಿ ಅಮಿತ್ ಕುಮಾರ ಹಾಗೂ ಗ್ಯಾಂಗ್‌ನ ಕೃತ್ಯ ಇದಾಗಿರಬಹುದು ಎಂದೂ ಪೊಲೀಸರು ಶಂಕಿಸಿದ್ದಾರೆ.
ಈ ನಿಟ್ಟಿನಲ್ಲಿ ಪೊಲೀಸರು ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಛತ್ತೀಸಗಢ ಅಷ್ಟೇ ಅಲ್ಲ, ಬಿಹಾರ ಪೊಲೀಸರ ಸಹಕಾರ ಪಡೆಯುತ್ತಿದ್ದು, ಪೊಲೀಸರ 10 ತಂಡಗಳನ್ನು ರಚಿಸಿ ದುಷ್ಕರ್ಮಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ. ಈ ನಡುವೆ, ಬೀದರ್ ಪೊಲೀಸರು ಕೂಡ ಹಗಲು-ರಾತ್ರಿ ಶೋಧ ಮುಂದುವರಿಸಿದ್ದು, ಶೀಘ್ರ ಅವರ ಬಂಧನವಾಗಲಿದೆ ಎಂಬ ವಿಶ್ವಾಸವಿದೆ ಎಂದು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಎಲ್ಲರಿಗಿಂತ ಮೊದಲು ತಿಳಿಯುವುದು ಇಲ್ಲೇ
'ಬೀದರ್ ಎಟಿಎಂ ಹಣ ಲೂಟಿ ಮಾಡಿದ್ದು ಬಿಹಾರಿ ಗ್ಯಾಂಗ್' ಎಂದು ಎಲ್ಲರಿಗಿಂತ ಮೊದಲು 'ಕನ್ನಡಪ್ರಭ' ನಿನ್ನೆಯೇ ವರದಿ ಮಾಡಿತ್ತು.
ಬೀದರ್ ಎಟಿಎಂ ಹಣ ಲೂಟಿ ಮಾಡಿದ್ದು ಬಿಹಾರಿ ಗ್ಯಾಂಗ್?
ಹೈದರಾಬಾದ್: ಬೀದರ್‌ನಲ್ಲಿ ಶೂಟೌಟ್ ನಡೆಸಿ 93 ಲಕ್ಷ ರು. ಹಣ ಲೂಟಿ ಮಾಡಿ ಪರಾರಿಯಾಗಿರುವ ಇಬ್ಬರು ಬಿಹಾರ ಮೂಲದವರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈ ನಡುವೆ, ಆರೋಪಿಗಳ ಸೆರೆಗೆ ತೆಲಂಗಾಣ ಪೊಲೀಸರು 10 ತಂಡ ರಚಿಸಿದ್ದಾರೆ.