ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಸ್ತೆ ವಿಭಜಕ್ಕೆ ಬೈಕ್ ಡಿಕ್ಕಿಯಾಗಿ ಯುವಕನೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ದೇವನಹಳ್ಳಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ದೇವನಹಳ್ಳಿ ಪಟ್ಟಣದ ನಿವಾಸಿ ಸೂರ್ಯ (23) ಮೃತ ದುರ್ದೈವಿ. ಕೆಲಸದ ನಿಮಿತ್ತ ಹೊರ ಹೋಗಿದ್ದ ಸೂರ್ಯ ಮನೆಗೆ ಮರಳುವಾಗ ರಾತ್ರಿ 2.30ರ ಸುಮಾರಿಗೆ ದೊಡ್ಡಬಳ್ಳಾಪುರ ವೃತ್ತದಲ್ಲಿ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ದೇವನಹಳ್ಳಿ ತಾಲೂಕು ಕಚೇರಿ ಬಳಿ ತಮ್ಮ ತಂದೆಯ ಝರಾಕ್ಸ್ ಅಂಗಡಿಯಲ್ಲಿ ಮೃತ ಸೂರ್ಯ ಕೆಲಸ ಮಾಡುತ್ತಿದ್ದ. ಧಾರ್ಮಿಕ ಕ್ಷೇತ್ರಗಳಿಗೆ ಆತನ ಕುಟುಂಬದವರು ಪ್ರವಾಸ ಹೋಗಿದ್ದರು.
ಮನೆಯಿಂದ ರಾತ್ರಿ ಸ್ನೇಹಿತರ ಭೇಟಿ ಸಲುವಾಗಿ ಹೊರಗೆ ಹೋಗಿದ್ದ ಸೂರ್ಯ, ಅಲ್ಲಿಂದ ಅತಿವೇಗವಾಗಿ ಬೈಕ್ ಓಡಿಸಿಕೊಂಡು ಮನೆಗೆ ಮರಳುತ್ತಿದ್ದ.
ಆ ವೇಳೆ ದೊಡ್ಡಬಳ್ಳಾಪುರದ ವೃತ್ತದ ಬಳಿ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಸೂರ್ಯ ಬೈಕ್ ಗುದ್ದಿಸಿದ್ದಾನೆ. ಘಟನೆಯಲ್ಲಿ ಆತನ ತಲೆಗೆ ಗಂಭೀರ ಸ್ವರೂಪದ ಪೆಟ್ಟಾಗಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.