ರಸ್ತೆಯಲ್ಲಿ ಬಿಎಂಟಿಸಿ ಬಸ್ಸೊಂದು ಬೈಕ್‌ಗೆ ತಾಕಿತು ಎಂಬ ಕಾರಣಕ್ಕೆ ಸಿನಿಮೀಯ ಶೈಲಿಯಲ್ಲಿ ಆ ಬಸ್ಸನ್ನು ಹಿಂಬಾಲಿಸಿ ಚಾಲಕನ ಮೇಲೆ ಹಲ್ಲೆ ಮಾಡಿದ ಆರೋಪದಡಿ ಬೈಕ್‌ ಸವಾರನನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು : ರಸ್ತೆಯಲ್ಲಿ ಬಿಎಂಟಿಸಿ ಬಸ್ಸೊಂದು ಬೈಕ್‌ಗೆ ತಾಕಿತು ಎಂಬ ಕಾರಣಕ್ಕೆ ಸಿನಿಮೀಯ ಶೈಲಿಯಲ್ಲಿ ಆ ಬಸ್ಸನ್ನು ಹಿಂಬಾಲಿಸಿ ಚಾಲಕನ ಮೇಲೆ ಹಲ್ಲೆ ಮಾಡಿದ ಆರೋಪದಡಿ ಬೈಕ್‌ ಸವಾರನನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಲ್ಲೇಶ್ವರ ನಿವಾಸಿ ಕಮಲ್‌ ಸಿಂಗ್‌(36) ಬಂಧಿತ ಸವಾರ. ಈತ ನ.10ರಂದು ರಾತ್ರಿ ಸುಮಾರು 8 ಗಂಟೆಗೆ ಹಳೇಗುಡ್ಡದಹಳ್ಳಿ ಸಿಗ್ನಲ್‌ ಬಳಿ ಬಿಎಂಟಿಸಿ ಘಟಕ-16ರ ಬಸ್‌ (ಕೆಎ 57 ಎಫ್‌ 4034) ಹತ್ತಿ ಚಾಲಕ ಮುರ್ದುಜಾ ಇಮಾಮ್‌ ಸಾಬ್‌ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.

ಏನಿದು ಘಟನೆ?: ಬಿಎಂಟಿಸಿ ಘಟಕ-16ರ ಚಾಲಕ ಮುರ್ದುಜಾ ಇಮಾಮ್‌ ಸಾಬ್‌ ಭಾನುವಾರ ಜಯನಗರ ಟಿಟಿಎಂಸಿಯಿಂದ ವಿಜಯನಗರ ಟಿಟಿಎಂಸಿ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಲ್ಲೇಶ್ವರ ಕಡೆಯಿಂದ ಮೈಸೂರು ರಸ್ತೆ ಕಡೆಗೆ ಬರುವಾಗ ಮಲ್ಲೇಶ್ವರ ರಸ್ತೆಯಲ್ಲಿ ಕಮಲ್‌ ಸಿಂಗ್‌ ಬರುತ್ತಿದ್ದ ಬೈಕ್‌ಗೆ ಬಿಎಂಟಿಸಿ ಬಸ್‌ ತಾಕಿತ್ತು ಎನ್ನಲಾಗಿದೆ.

ಸಿನಿಮೀಯ ಶೈಲಿಯಲ್ಲಿ ಚೇಸಿಂಗ್‌: ಬೈಕ್‌ಗೆ ಬಸ್‌ ತಾಗಿತೆಂದು ರೊಚ್ಚಿಗೆದ್ದ ಸವಾರ ಕಮಲ್‌ ಸಿಂಗ್‌, ಮಲ್ಲೇಶ್ವರದಿಂದ ಆ ಬಸ್ಸನ್ನು ಸಿನಿಮೀಯ ಶೈಲಿಯಲ್ಲಿ ಹಿಂಬಾಲಿಸಿದ್ದಾನೆ. ಬಳಿಕ ಆ ಬಸ್‌ ಹಳೇ ಗುಡ್ಡದಹಳ್ಳಿ ಸಿಗ್ನಲ್‌ನಲ್ಲಿ ನಿಂತ ಕೂಡಲೇ ಬೈಕನ್ನು ರಸ್ತೆ ಬದಿ ನಿಲ್ಲಿಸಿ ಬಸ್‌ ಹತ್ತಿದ ಕಮಲ್‌ ಸಿಂಗ್‌, ಏಕಾಏಕಿ ಚಾಲಕ ಮುರ್ದುಜಾ ಇಮಾಮ್‌ ಸಾಬ್‌ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದಾನೆ. ಬಳಿಕ ಬಸ್‌ನ ಬಾಗಿಲುಗಳನ್ನು ಮುಚ್ಚಿ ಪ್ರಯಾಣಿಕರ ಸಹಾಯದಿಂದ ಕಮಲ್‌ ಸಿಂಗ್‌ ಅನ್ನು ಹಿಡಿದು ಬ್ಯಾಟರಾಯನಪುರ ಪೊಲೀಸರಿಗೆ ಒಪ್ಪಿಸಲಾಗಿದೆ.

ಆರೋಪಿಯ ಬಂಧನ: ಹಲ್ಲೆಯಿಂದ ಗಾಯಗೊಂಡಿದ್ದ ಬಸ್‌ನ ಚಾಲಕ ಮುರ್ದುಜಾ ಇಮಾಮ್‌ ಸಾಬ್‌ ಅವರನ್ನು ಬಿಎಂಟಿಸಿಯ ಸಾರಥಿ ವಾಹನದಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಈ ಸಂಬಂಧ ಚಾಲಕ ಮುರ್ದುಜಾ ನೀಡಿದ ದೂರಿನ ಮೇರೆಗೆ ಬ್ಯಾಟರಾಯನಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಕಮಲ್‌ ಸಿಂಗ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.