ಸಾರಾಂಶ
ಬೆಂಗಳೂರು : ಪಾರ್ಕಿಂಗ್ ಸ್ಥಳಗಳು, ಮನೆಗಳ ಎದುರು ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳ ಕಳವು ಮಾಡುತ್ತಿದ್ದ ಆರೋಪಿಯನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿ, 2.40 ಲಕ್ಷ ರುಪಾಯಿ ಮೌಲ್ಯದ 7 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಬಸವನಗುಡಿ ನಾಗಸಂದ್ರ ಸರ್ಕಲ್ ನಿವಾಸಿ ಮಧುಸೂಧನ್ (32) ಬಂಧಿತ ಆರೋಪಿ. ಫೆ.20ರಂದು ವ್ಯಕ್ತಿಯೊಬ್ಬರು ಬಸವನಗುಡಿಯ ಎಂ.ಎನ್.ಕೃಷ್ಣರಾವ್ ಪಾರ್ಕ್ ಎದುರು ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನ ಕಳ್ಳತನವಾಗಿತ್ತು. ಈ ಪ್ರಕರಣದ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
ಪ್ರಕರಣದ ತನಿಖೆ ವೇಳೆ ಬಾತ್ಮೀದಾರರು ನೀಡಿದ ಮಾಹಿತಿ ಮೇರೆಗೆ ನಾಗಸಂದ್ರ ಸರ್ಕಲ್ ಬಳಿ ಆರೋಪಿಯನ್ನು ದ್ವಿಚಕ್ರ ವಾಹನ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ದ್ವಿಚಕ್ರ ವಾಹನ ಕಳವು ಮಾಡಿದ್ದು ತಾನೇ ಎಂದು ತಪ್ಪೊಪ್ಪಿಕೊಂಡಿದ್ದಾನೆ. ನಗರದ ವಿವಿಧೆಡೆ ದ್ವಿಚಕ್ರ ವಾಹನ ಕಳವು ಮಾಡಿರುವುದಾಗಿಯೂ ಬಾಯ್ಬಿಟ್ಟಿದ್ದಾನೆ. ಈತ ನೀಡಿದ ಮಾಹಿತಿ ಮೇರೆಗೆ ಬಸವನಗುಡಿ ನೇತಾಜಿ ರಸ್ತೆಯ ಸೊಳ್ಳೆ ಪಾರ್ಕ್ ಬಳಿ ನಿಲ್ಲಿಸಿದ್ದ ಆರು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಆರು ದ್ವಿಚಕ್ರ ವಾಹನಗಳ ಮಾಲೀಕರ ಪತ್ತೆಗೆ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.