ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಮದುವೆಯಾಗುವುದಾಗಿ ನಂಬಿಸಿ ಯುವತಿ ಜತೆಗೆ ಲೈಂಗಿಕ ಸಂಪರ್ಕ ಬೆಳೆಸಿ ವಿಡಿಯೊ ಸೆರೆ ಹಿಡಿದು ಇದೀಗ ಆ ವಿಡಿಯೊ ಮುಂದಿಟ್ಟು ಯುವತಿಗೆ ಬ್ಲ್ಯಾಕ್ ಮೇಲ್ ಮಾಡಿ ಬೆದರಿಕೆ ಹಾಕಿದ ಆರೋಪದಡಿ ಸಿನಿಮಾ ಸಹ ನಟನೊಬ್ಬನ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಯಚೂರು ಮೂಲದ 27 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಅತ್ತಿಬೆಲೆಯ ಶಾನಭೋಗನಹಳ್ಳಿ ನಿವಾಸಿ ಸಂತೋಷ್(30) ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರಿನಲ್ಲಿ ಏನಿದೆ?
ರಾಯಚೂರು ಮೂಲದ ಸಂತ್ರಸ್ತೆ 2014ರಲ್ಲಿ ಬೆಂಗಳೂರಿಗೆ ಬಂದು ಬಸವೇಶ್ವರನಗರದಲ್ಲಿ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. 2019ನೇ ಸಾಲಿನಲ್ಲಿ ಭೂಮಿಕಾ ಎಂಬ ಸ್ನೇಹಿತೆ ಕಡೆಯಿಂದ ಸಂತೋಷ್ ಪರಿಚಯವಾಗಿದೆ.
ಈ ವೇಳೆ ಸಂತೋಷ್, ‘ನಾನು ತಮಿಳು-ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ನಿನಗೂ ಸಿನಿಮಾದಲ್ಲಿ ನಾಯಕಿ ಪಾತ್ರ ಕೊಡಿಸುವುದಾಗಿ ಆಸೆ ಹುಟ್ಟಿಸಿ’ ಸಂತ್ರಸ್ತೆಯ ಮೊಬೈಲ್ ಸಂಖ್ಯೆ ಪಡೆದುಕೊಂಡಿದ್ದಾನೆ.
ಬಳಿಕ ಇಬ್ಬರು ಮೊಬೈಲ್‌ನಲ್ಲಿ ಸಂಪರ್ಕಕ್ಕೆ ಬಂದು ಆತ್ಮೀಯರಾಗಿದ್ದಾರೆ. ಬಳಿಕ ಸಂತೋಷ್ ‘ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದೇನೆ. ಮದುವೆಯಾಗೋಣ’ ಎಂದು ತಿಳಿಸಿದ್ದಾನೆ. ಈತನ ಮಾತಿಗೆ ಸಂತ್ರಸ್ತೆ ಒಪ್ಪಿಗೆ ಸೂಚಿಸಿದ್ದು ಬಳಿಕ ಇಬ್ಬರೂ ಪರಸ್ಪರ ಪ್ರೀತಿಸಲು ಆರಂಭಿಸಿದ್ದಾರೆ.
ಸುತ್ತಾಡಿಸಿ ಸಂಭೋಗ: ಗಾಢ ಪ್ರೀತಿಯ ನಡುವೆ ಸಂತೋಷ್, ಬಸವೇಶ್ವರನಗರದ ಲಾಡ್ಜ್‌ಗೆ ಸಂತ್ರಸ್ತೆಯನ್ನು ಕರೆದೊಯ್ದು ಮದುವೆ ಆಗುವುದಾಗಿ ನಂಬಿಸಿ ಆಕೆಯ ಜತೆಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ.
ಊಟಿ, ಮೈಸೂರು, ಧರ್ಮಸ್ಥಳ, ಹಂಪಿ, ಗೋವಾ ಸೇರಿದಂತೆ ಹಲವು ಸ್ಥಳಗಳಿಗೆ ಸಂತ್ರಸ್ತೆಯನ್ನು ಕರೆದೊಯ್ದು ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ. ಈ ಸಮಯದಲ್ಲಿ ಸಂತ್ರಸ್ತೆಯ ಚಿನ್ನಾಭರಣಗಳು, ನಗದು ಹಣ, ಐ ಫೋನ್‌ಗಳನ್ನು ಪಡೆದುಕೊಂಡಿದ್ದಾನೆ. ಸಂತ್ರಸ್ತೆಗೆ ಗೊತ್ತಾಗದಂತೆ ಖಾಸಗಿ ಕ್ಷಣಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇನ್ನೊಂದು ಮದುವೆ: ಬಳಿಕ ಆರೋಪಿ ಸಂತೋಷ್, ಸಂತ್ರಸ್ತೆಗೆ ಗೊತ್ತಾಗದೆ ಹಾಗೆ ಮತ್ತೊಂದು ಹುಡುಗಿಯನ್ನು ಮದುವೆಯಾಗಿ ಅತ್ತಿಬೆಲೆಯ ಶಾನಭೋಗನಹಳ್ಳಿಯಲ್ಲಿ ನೆಲೆಸಿದ್ದ.
ಈ ವಿಚಾರ ತಿಳಿದ ಸಂತ್ರಸ್ತೆ ಪ್ರಶ್ನೆ ಮಾಡಿದ್ದಾರೆ. ಫೆ.14ರಂದು ಸಂತ್ರಸ್ತೆಯ ಮನೆ ಬಳಿ ಬಂದಿರುವ ಸಂತೋಷ್, ‘ನಾನು ಕರೆದಾಗ ನೀನು ಬರಬೇಕು. ಇಲ್ಲವಾದರೆ, ನಿನ್ನ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇನೆ.
ನಿನ್ನ ಸಂಬಂಧಿಕರು ಹಾಗೂ ಪೋಷಕರಿಗೆ ತೋರಿಸುತ್ತೇನೆ’ ಎಂದು ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲದೆ, ಸಂತ್ರಸ್ತೆ ಜತೆಗೆ ಜಗಳ ತೆಗೆದು ಹಲ್ಲೆ ಮಾಡಿ ತೆರಳಿದ್ದಾನೆ.
ಈತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆ ದೂರನಲ್ಲಿ ಕೋರಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆಯೂ ದೂರು ದಾಖಲು: ಸಂತ್ರಸ್ತೆಯ 2023ರ ಜೂ.20ರಂದು ಆರೋಪಿ ಸಂತೋಷ್ ವಿರುದ್ಧ ವಂಚನೆ, ಹಲ್ಲೆ ಆರೋಪ ಮಾಡಿ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಘಟನೆ ಅತ್ತಿಬೆಲೆಯಲ್ಲಿ ನಡೆದಿದ್ದ ಹಿನ್ನೆಲೆಯಲ್ಲಿ ಪ್ರಕರಣವನ್ನು ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ಇದೀಗ ಮತ್ತೆ ಸಂತೋಷ್ ವಿರುದ್ಧ ಸಂತ್ರಸ್ತೆ ಆರೋಪ ಮಾಡಿದ್ದಾರೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.