ಪಾರ್ಕಿಂಗ್ ಸಿಬ್ಬಂದಿ ಕಾರು ರಿವರ್ಸ್ ತೆಗೆಯುವಾಗ ಪಾದಚಾರಿಯೊಬ್ಬರಿಗೆ ಗುದ್ದಿದ ಪರಿಣಾಮ ಅವರು ಮೃತಪಟ್ಟಿರುವ ಘಟನೆ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಸ್ಯಾಟ್‌ಲೈಟ್ ಪಾರ್ಕಿಂಗ್ ಜಾಗದಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಪಾರ್ಕಿಂಗ್ ಸಿಬ್ಬಂದಿ ಕಾರು ರಿವರ್ಸ್ ತೆಗೆಯುವಾಗ ಪಾದಚಾರಿಯೊಬ್ಬರಿಗೆ ಗುದ್ದಿದ ಪರಿಣಾಮ ಅವರು ಮೃತಪಟ್ಟಿರುವ ಘಟನೆ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಸ್ಯಾಟ್‌ಲೈಟ್ ಪಾರ್ಕಿಂಗ್ ಜಾಗದಲ್ಲಿ ನಡೆದಿದೆ.ಸುಂಕದಕಟ್ಟೆಯ ಸಿದ್ದಾರ್ಥನಗರ ಬಡಾವಣೆಯ ನಿವಾಸಿ ಸ್ವಾಮಿದೊರೆ(50) ಮೃತಪಟ್ಟವರು. ಈ ಸಂಬಂಧ ಮೃತರ ಪತ್ನಿ ನೀಡಿದ ದೂರಿನನ್ವಯ ಬಾಲ ಸುಬ್ರಮಣ್ಯಂ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಂಪತಿ ಕಾರ್ಯ ನಿಮಿತ್ತ ತಮಿಳುನಾಡಿಗೆ ಹೋಗಿದ್ದು, ಭಾನುವಾರ ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಸ್ಯಾಟ್‌ಲೈಟ್ ಬಸ್ ನಿಲ್ದಾಣದಲ್ಲಿ ಬಸ್ ಇಳಿದು ನಡೆದುಕೊಂಡು ಹೋಗುತ್ತಿದ್ದಾಗ, ಪ್ರಯಾಣಿಕರೊಬ್ಬರು ಪಾರ್ಕ್ ಮಾಡಿ ಹೋಗಿದ್ದ ಕಾರನ್ನು ಪಾರ್ಕಿಂಗ್ ಸಿಬ್ಬಂದಿ ಸುಬ್ರಮಣ್ಯಂ ರಿವರ್ಸ್ ತೆಗೆಯುವಾಗ ವೇಗವಾಗಿ ಬಂದು ಸ್ವಾಮಿದೊರೆಗೆ ಡಿಕ್ಕಿ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಪರೀಕ್ಷಿಸಿದ ವೈದ್ಯರು ಮಾರ್ಗ ಮಧ್ಯದಲ್ಲಿಯೇ ಅವರು ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಆರೋಪಿ ಮದ್ಯ ಸೇವಿಸಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
