ಆಸ್ತಿಗಾಗಿ ಮಗನಿಂದಲೇ ತಂದೆಗೆ ಬ್ಲಾಕ್ ಮೇಲ್ ..!

| Published : Sep 04 2025, 01:00 AM IST

ಸಾರಾಂಶ

ಆಸ್ತಿಗಾಗಿ ಮಗ ತನ್ನ ಸ್ನೇಹಿತರ ಜೊತೆಗೂಡಿ ಅಪ್ಪನನ್ನೇ ಬ್ಲಾಕ್‌ಮೇಲ್ ಮಾಡಿದ ಅಪರೂಪದ ಘಟನೆ ಮದ್ದೂರು ಪಟ್ಟಣದಲ್ಲಿ ಜರುಗಿದೆ. ಮಗನ ವರ್ತನೆಯಿಂದ ರೊಚ್ಚಿಗೆದ್ದ ತಂದೆ ಪೊಲೀಸರಿಗೆ ದೂರು ನೀಡಿದ್ದು ಆರೋಪಿಗಳೆಲ್ಲರೂ ಇದೀಗ ಜೈಲು ಕಂಬಿ ಹಿಂದೆ ಬಿದ್ದಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ಆಸ್ತಿಗಾಗಿ ಮಗ ತನ್ನ ಸ್ನೇಹಿತರ ಜೊತೆಗೂಡಿ ಅಪ್ಪನನ್ನೇ ಬ್ಲಾಕ್‌ಮೇಲ್ ಮಾಡಿದ ಅಪರೂಪದ ಘಟನೆ ಪಟ್ಟಣದಲ್ಲಿ ಜರುಗಿದೆ. ಮಗನ ವರ್ತನೆಯಿಂದ ರೊಚ್ಚಿಗೆದ್ದ ತಂದೆ ಪೊಲೀಸರಿಗೆ ದೂರು ನೀಡಿದ್ದು ಆರೋಪಿಗಳೆಲ್ಲರೂ ಇದೀಗ ಜೈಲು ಕಂಬಿ ಹಿಂದೆ ಬಿದ್ದಿದ್ದಾರೆ.

ಮದ್ದೂರಿನ ರಾಣಿ ಐಶ್ವರ್ಯ ಡೆವಲಪರ್ಸ್‌ ಉದ್ಯಮ ನಡೆಸುತ್ತಿರುವ ಎಚ್.ಎಲ್.ಸತೀಶ್ ಬ್ಲಾಕ್‌ಮೇಲ್‌ಗೆ ಒಳಗಾದವರು. ಈತನ ಮಗ ಪ್ರಣಾಮ್ ಸತೀಶ್, ವಳಗೆರೆಹಳ್ಳಿ ಗ್ರಾಮದ ಮಹೇಶ್ ಅಲಿಯಾಸ್ ಗುಂಡ, ಮದ್ದೂರು ಹಳೇ ಒಕ್ಕಲಿಗರ ಬೀದಿಯ ಈಶ್ವರ್ ಎಂಬುವರು ಆರೋಪಿಗಳಾಗಿದ್ದು ಪೊಲೀಸರ ವಶದಲ್ಲಿದ್ದಾರೆ. ಆನೆದೊಡ್ಡಿ ಗ್ರಾಮದ ಪ್ರೀತಮ್ ನಾಪತ್ತೆಯಾಗಿದ್ದಾನೆ.

ರಾಣಿ ಐಶ್ವರ್ಯ ಡೆವಲಪರ್ಸ್‌ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ ಎಚ್.ಎಲ್.ಸತೀಶ್ ಕೋಟ್ಯಂತರ ರು. ಹಣ ಗಳಿಸಿದ್ದರು. ಅದರಲ್ಲಿ 6 ಕೋಟಿ ರು. ಹಣವನ್ನು ಪುತ್ರ ಪ್ರಣಾಮ್ ಹೆಸರಿಗೆ ಬರೆದಿದ್ದರು. ಜೂಜು ಮತ್ತು ಸಿನಿಮಾ ಹುಚ್ಚಿಗೆ ಬಿದ್ದಿದ್ದ ಪ್ರಣಾಮ್ 2 ಕೋಟಿ ರು. ಆಸ್ತಿಯನ್ನು ಕಳೆದಿದ್ದನು. ಇದರಿಂದ ಕೋಪಗೊಂಡ ತಂದೆ ಸತೀಶ್ ತಾವು ಸಂಪಾದಿಸಿದ ಆಸ್ತಿ ಎಂದು ನ್ಯಾಯಾಲಯದಿಂದ ಆಸ್ತಿ ಮಾರಾಟಕ್ಕೆ ತಡೆಯಾಜ್ಞೆ ತಂದಿದ್ದರು.

ಇದರಿಂದ ಕೋಪಗೊಂಡ ಮಗ ಪ್ರಣಾಮ್ ತಂದೆಗೆ ಬುದ್ಧಿ ಕಲಿಸಲು ನಿರ್ಧರಿಸಿದನು. ಅಪ್ಪನ ಜೊತೆ ಕೆಲಸ ಮಾಡಿಕೊಂಡು ದೂರ ಸರಿದಿದ್ದ ಮಹೇಶ್, ಈಶ್ವರ್, ಪ್ರೀತಮ್ ಜೊತೆ ಸೇರಿಕೊಂಡು ತಂದೆಯ ಖಾಸಗಿ ಮಾಹಿತಿ ಜೊತೆಗೆ ಮಹಿಳೆಯ ಫೋಟೋ, ಆಡಿಯೋ, ವಿಡಿಯೋಗಳಿಗೆ ಸಂಬಂಧಿಸಿದ ವೈಯಕ್ತಿಕ ಮಾಹಿತಿಯ ದಾಖಲೆಗಳನ್ನು (ಕೆ.ಎಂ.ಉದಯ್ ಮದ್ದೂರು ಪುರಸಭೆ ವಾಟ್ಸ್ ಆಪ್) ಗ್ರೂಪ್‌ಗೆ ಸೋರಿಕೆ ಮಾಡಿದ್ದಾರೆ. ಅಲ್ಲದೇ, ಅವರ ಮೊಬೈಲ್ ವಾಟ್ಸ್ ಆಪ್ ಗ್ರೂಪ್‌ನ್ನೂ ಹ್ಯಾಕ್ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಮಹೇಶ್ ಎಂಬಾತ ಸತೀಶ್ ಅವರೊಂದಿಗೆ ಕೆಲಸ ಮಾಡುತ್ತಿರುವ ಸಾಗರ್ ಮತ್ತು ಪ್ರಕಾಶ್‌ರವರ ಮೊಬೈಲ್‌ಗೆ ವಾಟ್ಸ್ ಆಪ್‌ನಲ್ಲಿ ಧ್ವನಿ ಸಂದೇಶಗಳ ಮೂಲಕ ಜೀವಬೆದರಿಕೆ ಹಾಕಿದ್ದಾರೆ. ಆರೋಪಿಗಳು ಹಾಗೂ ಆರೋಪಿಗಳಿಗೆ ಸಂಬಂಧಿಸಿದ ಯಾವುದೇ ವ್ಯಕ್ತಿಗಳಿಂದ ಸಾಮಾಜಿಕ ಜಾಲ ತಾಣದಲ್ಲಿ ನನ್ನ ವೈಯಕ್ತಿಕ ಹಾಗೂ ಮಹಿಳೆಯೊಬ್ಬರ ನಗ್ನ ಫೋಟೋ ಮತ್ತು ಆಡಿಯೋಗಳು, ಖಾಸಗಿ ಫೋಟೋಗಳು, ವಿಡಿಯೋಗಳನ್ನು ಬಿತ್ತರಿಸದಂತೆ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಸತೀಶ್ ನೀಡಿದ ದೂರಿನ ಮೇರೆಗೆ ಆರೋಪಿಗಳಾದ ಮಗ ಪ್ರಣಾಮ್, ಮಹೇಶ, ಈಶ್ವರ್ ಅವರನ್ನು ಮದ್ದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಕೆ.ಗೋಪಾಲಕೃಷ್ಣ ಅವರ ಎದುರು ಹಾಜರು ಪಡಿಸಲಾಯಿತು. ನ್ಯಾಯಾಧೀಶರು ಆರೋಪಿಗಳನ್ನು14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಆನಂತರ ಪೊಲೀಸರು ಹೆಚ್ಚುವರಿ ವಿಚಾರಣೆಗೆ ವಶಕ್ಕೆ ನೀಡುವಂತೆ ಕೋರಿದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಬುಧವಾರದಿಂದ ಮೂರು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿ ಆದೇಶ ಹೊರಡಿಸಿದ್ದಾರೆ. ನಾಪತ್ತೆಯಾಗಿರುವ ಪ್ರೀತಮ್‌ಗೆ ಶೋಧ ನಡೆದಿದೆ.ಇಂತಹ ಕೆಟ್ಟ ಮಗ ಯಾರಿಗೂ ಬೇಡ. ವ್ಯವಹಾರ ಜ್ಞಾನ ಬರಲಿ, ಜವಾಬ್ದಾರಿ ಬರಲಿ ಎಂದು ಆತನ ಹೆಸರಿಗೆ ಆಸ್ತಿ ಮಾಡಿದೆ. ಆದರೆ, ಅದನ್ನು ದುರುಪಯೋಗಪಡಿಸಿಕೊಂಡ. ಮಗನ ಹೆಸರಿಗೆ ಆಸ್ತಿ ಮಾಡಿ ತಪ್ಪು ಮಾಡಿದೆ ಎಂದು ಕೆಲವರೆಲ್ಲಾ ಹೇಳಿದರು. ನಾನೇನು ತಪ್ಪು ಮಾಡಿಲ್ಲ. ಎಲ್ಲಾ ಮಕ್ಕಳೂ ಇವನ ರೀತಿ ಇರುವುದಿಲ್ಲ. ಒಳ್ಳೆಯ ಮಕ್ಕಳೂ ಇದ್ದಾರೆ. ನನ್ನ ಮಗ ನನಗೆ ಕೊಡಬಾರದ ಕಷ್ಟ ಕೊಟ್ಟಿದ್ದಾನೆ. ಮಾನಸಿಕವಾಗಿ ಚಿತ್ರಹಿಂಸೆ ನೀಡಿದ್ದಾನೆ. ಏನೇನೋ ಮಾಡಿ ಕೊನೆಗೆ ಮಾನಹಾನಿ ಮಾಡಲು ಹೋದಾಗ. ವಿಧಿಯಿಲ್ಲದೆ ಪೊಲೀಸರಿಗೆ ದೂರು ನೀಡಿದೆ. ಹಿತೈಷಿಗಳೆಲ್ಲಾ ನನ್ನ ಜೊತೆಗೆ ನಿಂತಿದ್ದಾರೆ.

- ಎಚ್.ಎಲ್.ಸತೀಶ್, ಉದ್ಯಮಿ