ಬಿಎಂಟಿಸಿ ಬಸ್‌ ಮತ್ತು ಬೈಕ್‌ ಮುಖಾಮುಖಿ ಡಿಕ್ಕಿಯಾಗಿ ದ್ವಿಚಕ್ರ ವಾಹನದ ಸವಾರ ಹಾಗೂ ಹಿಂಬದಿ ಸವಾರ ಮೃತಪಟ್ಟಿರುವ ಘಟನೆ ಶನಿವಾರ ರಾತ್ರಿ ಸುಮಾರು 7.20ಕ್ಕೆ ಬೆಂಗಳೂರು-ಬಳ್ಳಾರಿ ರಸ್ತೆ ಸಾದರಹಳ್ಳಿ ಗೇಟ್‌ ಜಿಯೋ ಪೆಟ್ರೋಲ್‌ ಬಂಕ್‌ ಬಳಿಯ ಸರ್ವಿಸ್‌ ರಸ್ತೆಯಲ್ಲಿ ನಡೆದಿದೆ.

ಬೆಂಗಳೂರು : ಬಿಎಂಟಿಸಿ ಬಸ್‌ ಮತ್ತು ಬೈಕ್‌ ಮುಖಾಮುಖಿ ಡಿಕ್ಕಿಯಾಗಿ ದ್ವಿಚಕ್ರ ವಾಹನದ ಸವಾರ ಹಾಗೂ ಹಿಂಬದಿ ಸವಾರ ಮೃತಪಟ್ಟಿರುವ ಘಟನೆ ಶನಿವಾರ ರಾತ್ರಿ ಸುಮಾರು 7.20ಕ್ಕೆ ಬೆಂಗಳೂರು-ಬಳ್ಳಾರಿ ರಸ್ತೆ ಸಾದರಹಳ್ಳಿ ಗೇಟ್‌ ಜಿಯೋ ಪೆಟ್ರೋಲ್‌ ಬಂಕ್‌ ಬಳಿಯ ಸರ್ವಿಸ್‌ ರಸ್ತೆಯಲ್ಲಿ ನಡೆದಿದೆ.

ಕಲಬುರಗಿ ಮೂಲದ ರಮೇಶ್‌ (41), ನಬೀ (35) ಮೃತ ದುರ್ದೈವಿಗಳು. ಘಟನೆ ಸಂಬಂಧ ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್‌ ಚಾಲಕ ಆನಂದ (37) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.

ರಮೇಶ್‌ ಮತ್ತು ನಬೀ ನಗರದಲ್ಲಿ ಕ್ಯಾಬ್‌ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದರು. ಶನಿವಾರ ರಾತ್ರಿ ಸರ್ವಿಸ್‌ ರಸ್ತೆಯಲ್ಲಿ ಯಲಹಂಕದ ಕಡೆಗೆ ಬೈಕ್‌ ನಲ್ಲಿ ತೆರಳುತ್ತಿದ್ದರು. ಈ ವೇಳೆ ಎದುರಿನಿಂದ ಬರುತ್ತಿದ್ದ ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್‌, ಬೈಕ್‌ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಸವಾರ ಮತ್ತು ಹಿಂಬದಿ ಸವಾರ ಬೈಕ್‌ ಸಮೇತ ಹಾರಿ ರಸ್ತೆಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಸವಾರರನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ. ಪರೀಕ್ಷಿಸಿದ ವೈದ್ಯರು ಇಬ್ಬರು ಮಾರ್ಗ ಮಧ್ಯೆಯೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್‌ ಚಾಲಕನ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಸಂಬಂಧ ಚಿಕ್ಕಜಾಲ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.