ಬಾಂಬ್‌ ಹೇಳಿಕೆ: ಶೋಭಾ ವಿರುದ್ಧದ ಪ್ರಕರಣಕ್ಕೆ ತಡೆ

| Published : Mar 26 2024, 06:14 PM IST

ಸಾರಾಂಶ

ತಮಿಳುನಾಡಿನ ಒಬ್ಬ ವ್ಯಕ್ತಿ ರಾಜ್ಯದಲ್ಲಿ (ರಾಮೇಶ್ವರಂ ಕೆಫೆಯಲ್ಲಿ) ಬಾಂಬ್‌ ಸ್ಫೋಟಿಸಿ ಹೋಗುತ್ತಾರೆ ಎಂದು ಹೇಳಿಕೆ ನೀಡಿದ್ದ ಸಂಬಂಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ದಾಖಲಿಸಲಾಗಿದ್ದ ಎಫ್‌ಐಆರ್‌ಗೆ ಹೈಕೋರ್ಟ್ ತಡೆ ನೀಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತಮಿಳುನಾಡಿನ ಒಬ್ಬ ವ್ಯಕ್ತಿ ರಾಜ್ಯದಲ್ಲಿ (ರಾಮೇಶ್ವರಂ ಕೆಫೆಯಲ್ಲಿ) ಬಾಂಬ್‌ ಸ್ಫೋಟಿಸಿ ಹೋಗುತ್ತಾರೆ ಎಂದು ಹೇಳಿಕೆ ನೀಡಿದ್ದ ಸಂಬಂಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ದಾಖಲಿಸಲಾಗಿದ್ದ ಎಫ್‌ಐಆರ್‌ಗೆ ಹೈಕೋರ್ಟ್ ತಡೆ ನೀಡಿದೆ.

ಪ್ರಚೋದನೆ ನೀಡಿದಂತಹ ಆರೋಪದ ಮೇಲೆ ಬೆಂಗಳೂರಿನ ಕಾಟನ್‌ಪೇಟೆ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್ ಹಾಗೂ ಅದರ ಸಂಬಂಧ 5ನೇ ಎಸಿಎಂಎಂ ನ್ಯಾಯಾಲಯದ ಮುಂದಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ಶೋಭಾ ಕರಂದ್ಲಾಜೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್‌ ಅವರ ಪೀಠ ಈ ಆದೇಶ ಮಾಡಿದೆ.

ಅಲ್ಲದೆ, ಕಾಟನ್‌ಪೇಟೆ ಪೊಲೀಸರು ಹಾಗೂ ದೂರು ದಾಖಲಿಸಿದ್ದ ಚುನಾವಣಾ ನೀತಿ ಸಂಹಿತೆ ಸಂಚಾರಿ ದಳದ ಅಧಿಕಾರಿ ಎಂ.ಎನ್. ಶಿವರಾಜು ಅವರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿದೆ.

ಅರ್ಜಿ ವಿಚಾರಣೆ ವೇಳೆ ಶೋಭಾ ಕರಂದ್ಲಾಜೆ ಪರ ವಕೀಲ ವೆಂಕಟೇಶ್ ದಳವಾಯಿ ಅವರು, ಇತ್ತೀಚೆಗೆ ನಗರ್ತಪೇಟೆಯಲ್ಲಿ ನಡೆದ ಘಟನೆ ಖಂಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಅರ್ಜಿದಾರರು ಪಾಲ್ಗೊಂಡಿದ್ದರು. ಒಬ್ಬ ವ್ಯಕ್ತಿ ತಮಿಳುನಾಡಿನಿಂದ ಬಂದು ರಾಜ್ಯದಲ್ಲಿ ಬಾಂಬ್ ಸ್ಫೋಟಿಸಿ ಹೋಗುತ್ತಾನೆ. ಮತ್ತೊಬ್ಬ ವ್ಯಕ್ತಿ ಕೇರಳದಿಂದ ಬಂದು ಆ್ಯಸಿಡ್ ದಾಳಿ ನಡೆಸುತ್ತಾನೆ. ಇನ್ನೊಬ್ಬ ದೆಹಲಿಯಿಂದ ಬಂದು ಪಾಕಿಸ್ತಾನ್‌ ಜಿಂದಾಬಾದ್ ಘೋಷಣೆ ಕೂಗುತ್ತಾನೆ ಎಂದು ಹೇಳಿದ್ದರು. ಇದು ದೇಶದ ಜನರ ನಡುವೆ ದ್ವೇಷ ಹುಟ್ಟುಹಾಕುವಂತಹದ್ದು ಹಾಗೂ ಸಮುದಾಯಗಳ ನಡುವೆ ಕೋಮು ಪ್ರಚೋದನೆ ನೀಡುವಂತಹದ್ದು ಎಂಬ ಆರೋಪದ ಮೇಲೆ ಪೊಲೀಸರು ದೂರು ದಾಖಲಿಸಿದ್ದಾರೆ. ಆದರೆ ಅರ್ಜಿದಾರರ ಭಾಷಣದಲ್ಲಿ ಯಾವುದೇ ಧರ್ಮ, ಜಾತಿ, ಪಂಗಡ ಉಲ್ಲೇಖವಾಗಿಲ್ಲ. ಹೀಗಿದ್ದರೂ ದ್ವೇಷ ಹಾಗೂ ಕೋಮು ಪ್ರಚೋದನೆ ನೀಡಿದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಅದಕ್ಕೂ ಮುನ್ನ ದೂರುದಾರರು ಪ್ರಾಥಮಿಕ ತನಿಖೆ ನಡೆಸಿಲ್ಲ. ರಾಜಕೀಯ ಪ್ರೇರಿತ ಪ್ರಕರಣ ದಾಖಲಿಸಲಾಗಿದ್ದು, ಎಫ್‌ಐಆರ್ ರದ್ದುಪಡಿಸಬೇಕು ಎಂದು ಕೋರಿದರು.

ಶೋಭಾ ಕರಂದ್ಲಾಜೆ ನೀಡಿದ ಹೇಳಿಕೆ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಚುನಾವಣಾ ಆಯೋಗ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಸೂಚನೆ ನೀಡಿತ್ತು. ಅದರಂತೆ, ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.