ದೇಶದ ಅಪಘಾತಗಳ ಹಾಟ್‌ಸ್ಪಾಟ್‌ ಪಟ್ಟಿಯ ಅಕೋ ಆಕ್ಸಿಡೆಂಟ್‌ ಇಂಡೆಕ್ಸ್‌ ವರದಿ: ಬೊಮ್ಮನಹಳ್ಳಿ ನಂ.1

| Published : Dec 05 2024, 01:30 AM IST / Updated: Dec 05 2024, 04:19 AM IST

ಸಾರಾಂಶ

ದೇಶದಲ್ಲಿ ಸಂಭವಿಸಿದ ಅಪಘಾತಗಳ ಕುರಿತು ಅಕೋ ಆಕ್ಸಿಡೆಂಟ್‌ ಇಂಡೆಕ್ಸ್‌ ವರದಿಯೊಂದನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ ಭಾರತದ ಅಪಘಾತಗಳ ಹಾಟ್‌ಸ್ಪಾಟ್‌ ಪಟ್ಟಿಯಲ್ಲಿ ಬೆಂಗಳೂರಿನ ಬೊಮ್ಮನಹಳ್ಳಿ ಮೊದಲ ಸ್ಥಾನ ಪಡೆದಿದೆ.

ನವದೆಹಲಿ: ಪ್ರಸಕ್ತ ವರ್ಷದಲ್ಲಿ ದೇಶದಲ್ಲಿ ಸಂಭವಿಸಿದ ಅಪಘಾತಗಳ ಕುರಿತು ಅಕೋ ಆಕ್ಸಿಡೆಂಟ್‌ ಇಂಡೆಕ್ಸ್‌ ವರದಿಯೊಂದನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ ಭಾರತದ ಅಪಘಾತಗಳ ಹಾಟ್‌ಸ್ಪಾಟ್‌ ಪಟ್ಟಿಯಲ್ಲಿ ಬೆಂಗಳೂರಿನ ಬೊಮ್ಮನಹಳ್ಳಿ ಮೊದಲ ಸ್ಥಾನ ಪಡೆದಿದೆ. ದೇಶದ ಮೆಟ್ರೋ ನಗರಗಳ ಪೈಕಿ ರಸ್ತೆ ಗುಂಡಿಗಳಿಂದ ಬೆಂಗಳೂರಿನಲ್ಲೇ ಅತಿ ಹೆಚ್ಚು, ಶೇ.44.8ರಷ್ಟು ಅಪಘಾತಗಳಾಗಿವೆ. ಉಳಿದಂತೆ ದೆಹಲಿಯಲ್ಲಿ ಈ ಪ್ರಮಾಣ ಶೇ.13.3, ಮುಂಬೈನಲ್ಲಿ ಶೇ.12.3ರಷ್ಟಿದೆ.

ವರದಿಯ ಪ್ರಕಾರ 2024ರಲ್ಲಿ ದೇಶದಲ್ಲೇ ಅತಿ ಹೆಚ್ಚು ಅಪಘಾತಗಳಿಗೆ ಸಾಕ್ಷಿಯಾಗಿರುವ ಹೈದರಾಬಾದ್‌ ನಗರದಲ್ಲಿ ಶೇ.16.4ರಷ್ಟು ಅಪಘಾತಗಳು ಸಂಭವಿಸಿವೆ. ದೆಹಲಿ ಹಾಗೂ ರಾಷ್ಟ್ರರಾಜಧಾನಿ ವಲಯದಲ್ಲಿ ಶೇ.15.9ರಷ್ಟು ಅಪಘಾತಗಳು ನಡೆದಿವೆ. ಉಳಿದಂತೆ ಬೆಂಗಳೂರಿನ ಬೊಮ್ಮನಹಳ್ಳಿ, ನೋಯ್ಡಾ, ಪುಣೆಯ ಮರುಂಜಿ, ಮುಂಬೈನ ಮೀರಾ ರೋಡ್‌ಗಳಲ್ಲಿ ಅತಿ ಹೆಚ್ಚು ಅಪಾಘತಗಳು ವರದಿಯಾಗಿವೆ.

ಅಪಘಾತಕ್ಕೆ ಬೀದಿ ನಾಯಿ, ತೆಂಗಿನ ಕಾಯಿ ಕಾರಣ:

ಸಾಮಾನ್ಯವಾಗಿ ಪಾನಮತ್ತ ವಾಹನ ಚಾಲನೆ, ಸಂಚಾರ ನಿಯಮ ಉಲ್ಲಂಘನೆಗಳನ್ನು ಅಪಘಾತದ ಮೂಲ ಕಾರಣಗಳು ಎಂದು ಪರಿಗಣಿಸಲಾಗುತ್ತದೆ. ಆದರೆ ಈ ವರದಿಯ ಪ್ರಕಾರ ಬೀದಿಯಲ್ಲಿ ತಿರುಗುವ ಜಾನುವಾರುಗಳಿಂದಾಗಿ ಹೆಚ್ಚು ಅಪಘಾತಗಳಾಗುತ್ತಿವೆ. ಇದರಲ್ಲಿ ನಾಯಿಗಳಿಂದ ಶೇ.62, ಹಸುಗಳಿಂದ ಶೇ.29, ಎಮ್ಮೆಗಳಿಂದ ಶೇ.4ರಷ್ಟು ಅಪಘಾತವಾಗಿದೆ. ಅಂತೆಯೇ, ಸಂಚರಿಸುವಾಗ ತೆಂಗಿನ ಕಾಯಿ ಬಿದ್ದೂ ಅಧಿಕ ಅಪಘಾತಗಳಾಗಿವೆ. ನೈಸರ್ಗಿಕ ವಿಕೋಪಗಳೂ ಅಪಘಾತಕ್ಕೆ ಕಾರಣವಾಗಿವೆ.

ಹುಂಡೈ ಐ10 ಅತಿಹೆಚ್ಚು ಅಪಘಾತವಾದ ವಾಹನ, ಹುಂಡೈ ಐ10 ಅತಿ ಹೆಚ್ಚು ಅಪಘಾತಕ್ಕೆ ತುತ್ತಾಗಿದ್ದು, ಉಳಿದಂತೆ ಮಾರುತಿ ಸುಜುಕಿ ಸ್ವಿಫ್ಟ್‌, ಬಲೆನೋ, ಐ20, ಡಿಜೈರ್‌ ಕೂಡ ಈ ಪಟ್ಟಿಯಲ್ಲಿವೆ.