ವೈಯಕ್ತಿಕ ಮನಸ್ತಾಪ ಹಿನ್ನೆಲೆ ನ್ಯಾಯಾಲಯದಲ್ಲೇ ಗೆಳತಿಗೆ ಚಾಕು ಇರಿದ ರಿಯಲ್ ಎಸ್ಟೇಟ್ ಉದ್ಯಮಿ!

| Published : Jul 24 2024, 01:16 AM IST / Updated: Jul 24 2024, 04:51 AM IST

ಸಾರಾಂಶ

ವೈಯಕ್ತಿಕ ಮನಸ್ತಾಪ ಹಿನ್ನೆಲೆಯಲ್ಲಿ ನ್ಯಾಯಾಲಯದ ಕಲಾಪದ ವೇಳೆಯೇ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ತನ್ನ ಗೆಳತಿಗೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿರುವ ಘಟನೆ ನಗರದ ಎಸಿಎಂಎಂ ನ್ಯಾಯಾಲಯದಲ್ಲಿ ಮಂಗಳವಾರ ನಡೆದಿದೆ.

 ಬೆಂಗಳೂರು : ವೈಯಕ್ತಿಕ ಮನಸ್ತಾಪ ಹಿನ್ನೆಲೆಯಲ್ಲಿ ನ್ಯಾಯಾಲಯದ ಕಲಾಪದ ವೇಳೆಯೇ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ತನ್ನ ಗೆಳತಿಗೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿರುವ ಘಟನೆ ನಗರದ ಎಸಿಎಂಎಂ ನ್ಯಾಯಾಲಯದಲ್ಲಿ ಮಂಗಳವಾರ ನಡೆದಿದೆ.

ಮಲ್ಲೇಶ್ವರ ನಿವಾಸಿ ವಿಮಲಾ ಹಲ್ಲೆಗೆ ಒಳಗಾಗಿದ್ದು, ಈ ಕೃತ್ಯ ಸಂಬಂಧ ಆಕೆಯ ಸ್ನೇಹಿತ ಜಯರಾಮ್ ರೆಡ್ಡಿ ಅವರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಣಕಾಸು ವಿವಾದ ಪ್ರಕರಣ ಸಂಬಂಧ ಎಸಿಎಂಎಂ ನ್ಯಾಯಾಲಯಕ್ಕೆ ವಿಚಾರಣೆಗೆ ಇಬ್ಬರೂ ಬಂದಿದ್ದಾಗ ಈ ಕೃತ್ಯ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬೆದರಿಸಿ ಹಣ ವಸೂಲಿ ಆರೋಪ:

ರಿಯಲ್ ಎಸ್ಟೇಟ್ ಉದ್ಯಮಿ ಜಯರಾಮ್ ರೆಡ್ಡಿ, ತನ್ನ ಕುಟುಂಬದ ಜತೆ ಶೇಷಾದ್ರಿಪುರದಲ್ಲಿ ನೆಲೆಸಿದ್ದಾರೆ. ಹಲವು ವರ್ಷಗಳಿಂದ ವಕೀಲೆ ವಿಮಲಾ ಜತೆ ರೆಡ್ಡಿ ಆತ್ಮೀಯ ಸ್ನೇಹವಿತ್ತು. ಈ ಗೆಳೆತನದಲ್ಲಿ ರೆಡ್ಡಿಗೆ ಆಕೆ ಹಣವನ್ನು ಕೊಟ್ಟಿದ್ದರು. ಆದರೆ ಹಣ ಹಾಗೂ ಭೂ ಖರೀದಿ ವಿಚಾರವಾಗಿ ರೆಡ್ಡಿ ಮತ್ತು ವಿಮಲಾ ಮಧ್ಯೆ ಮನಸ್ತಾಪ ಮೂಡಿತ್ತು. ಈ ಸಂಬಂಧ ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೆ ಖಾಸಗಿ ಕ್ಷಣ ಕಳೆದ ವಿಡಿಯೋ ಮಾಡಿಕೊಂಡು ಬಳಿಕ ಬ್ಲ್ಯಾಕ್‌ಮೇಲ್‌ ಮೂಲಕ ಗೆಳತಿಯಿಂದ ಹಣ ವಸೂಲಿ ಮಾಡಿದ್ದಾನೆ ಎಂದು ಜಯರಾಮ್ ರೆಡ್ಡಿ ವಿರುದ್ಧ ಆರೋಪ ಕೇಳಿ ಬಂದಿತ್ತು. ಈ ಬೆಳವಣಿಗೆ ಬಳಿಕ ಗೆಳತಿ ಮೇಲೆ ರೆಡ್ಡಿ ಹಗತನ ಸಾಧಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಹಣಕಾಸು ವಿವಾದ ಪ್ರಕರಣ ವಿಚಾರಣೆ ಸಲುವಾಗಿ ದೂರುದಾರೆ ವಿಮಲಾ ಹಾಗೂ ಆರೋಪಿ ರೆಡ್ಡಿ ಹಾಜರಾಗಿದ್ದರು. ಆ ವೇಳೆ ವಿಮಲಾ ಮೇಲೆ ಚಾಕುವಿನಿಂದ ಏಕಾಏಕಿ ರೆಡ್ಡಿ ಹಲ್ಲೆ ಮಾಡಿದ್ದಾನೆ. ಈ ಹಂತದಲ್ಲಿ ಆಕೆಯ ಕೈಗೆ ನಾಲ್ಕು ಬಾರಿ ರೆಡ್ಡಿ ಚಾಕುವಿನಿಂದ ಇರಿದಿದ್ದಾನೆ. ತಕ್ಷಣವೇ ವಕೀಲರು ಹಾಗೂ ಕಕ್ಷಿದಾರರು ಮಧ್ಯಪ್ರವೇಶಿಸಿ ವಿಮಲಾ ಅವರನ್ನು ರಕ್ಷಿಸಿದ್ದಾರೆ. ಬಳಿಕ ಮಾಹಿತಿ ಪಡೆದ ಹಲಸೂರು ಗೇಟ್ ಠಾಣೆ ಪೊಲೀಸರು, ಕೂಡಲೇ ಘಟನಾ ಸ್ಥಳಕ್ಕೆ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.