ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ/ಮದ್ದೂರು
ಲೈಸೆನ್ಸ್ ಪಡೆಯುವುದಕ್ಕೂ ಲಂಚ ಕೊಡಬೇಕು. ಲೈಸೆನ್ಸ್ ಪಡೆದ ನಂತರವೂ ಅಧಿಕಾರಿಗಳಿಗೆ ಮಂತ್ಲಿ ಕೊಡಬೇಕು. ಪ್ರಶ್ನೆ ಮಾಡಿದವರನ್ನೇ ಅಧಿಕಾರಿಗಳು ಟಾರ್ಗೆಟ್ ಮಾಡುತ್ತಾರೆ. ತಪಾಸಣೆ ನೆಪದಲ್ಲಿ ಕೇಸ್ ಬುಕ್ ಮಾಡುತ್ತಾರೆ. ತಪಾಸಣೆಗೂ ಮುನ್ನವೇ ತಪ್ಪೊಪ್ಪಿಗೆ ಪತ್ರಕ್ಕೆ ಸಹಿ ಮಾಡುವಂತೆ ಒತ್ತಡ ಹೇರುತ್ತಾರೆ.- ಇದು ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮಿತಿಮೀರಿರುವುದರ ಒಂದು ಝಲಕ್.
ಕಳೆದ 27 ನವೆಂಬರ್ 2024ರಲ್ಲಿ ಸಿಎಲ್-7 ಬಾರ್ ಲೈಸೆನ್ಸ್ ನೀಡಲು ಅಬಕಾರಿ ಇಲಾಖೆಯ ಜಿಲ್ಲಾ ಅಧಿಕಾರಿ 20 ಲಕ್ಷ ರು. ಲಂಚದ ಬೇಡಿಕೆ ಇಟ್ಟಿರುವುದಾಗಿ ಆರೋಪಿಸಿ ಮದ್ದೂರು ತಾಲೂಕು ಚಂದೂಪುರ ಗ್ರಾಮದ ಎಸ್.ಪುನೀತ್‌ಕುಮಾರ್ ಲೋಕಾಯುಕ್ತರಿಗೆ ದೂರು ನೀಡಿದ್ದರು. ಆ ದ್ವೇಷವನ್ನೇ ಮುಂದಿಟ್ಟುಕೊಂಡು ಅಬಕಾರಿ ಅಧಿಕಾರಿಗಳು ತಮಗೆ ಮತ್ತೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪುನೀತ್‌ಕುಮಾರ್ ಮದ್ದೂರಿನ ಅಬಕಾರಿ ಇನ್ಸ್‌ಪೆಕ್ಟರ್ ರಂಗನಾಥ್ ವಿರುದ್ಧ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ.ಎಸ್.ಐ.ಹಾಗಲಹಳ್ಳಿಯಲ್ಲಿ ಎಸ್.ಪುನೀತ್‌ಕುಮಾರ್ ಅವರು ತಮ್ಮ ತಾಯಿ ಲಕ್ಷ್ಮೀ ಹೆಸರಿನಲ್ಲಿ ಲೈಸೆನ್ಸ್ ಪಡೆದು ಸಿಎಲ್-7 ಬಾರ್ ನಡೆಸುತ್ತಿದ್ದಾರೆ. ನಿಯಮ ಬದ್ಧವಾಗಿ ಬಾರ್ ನಡೆಸುತ್ತಿದ್ದರೂ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿರುವ ಅವರು, ಆಗಸ್ಟ್ 30ರಂದು ಮದ್ದೂರು ಅಬಕಾರಿ ಇನ್ಸ್‌ಪೆಕ್ಟರ್ ರಂಗನಾಥ್ ತಮ್ಮ ಸಿಬ್ಬಂದಿಯೊಂದಿಗೆ ಬಾರ್‌ಗೆ ದಿಢೀರ್ ಭೇಟಿ ನೀಡಿದರು. ಮುಂಚೆಯೇ ಸಿದ್ಧಪಡಿಸಿ ತಂದಿದ್ದ ತಪ್ಪೊಪ್ಪಿಗೆ ಪತ್ರಕ್ಕೆ ಸಹಿ ಹಾಕುವಂತೆ ಒತ್ತಡ ಹೇರಿದರು. ನಮಗೆ ಟಾರ್ಗೆಟ್ ಇದೆ, ತಿಂಗಳಾಂತ್ಯ ಇರುವುದರಿಂದ ಕೇಸ್ ದಾಖಲಿಸುವುದಾಗಿ ಬೆದರಿಸಿದರು. ತಪ್ಪೊಪ್ಪಿಗೆ ಪತ್ರಕ್ಕೆ ಸಹಿ ಹಾಕದಿದ್ದಾಗ ಸ್ಟಾಕ್ ತಪಾಸಣೆ ಮಾಡಿ ತಪ್ಪು ಲೆಕ್ಕ ಬರೆದಿದ್ದಾರೆ ಎಂದು ದೂಷಿಸಿದ್ದಾರೆ.
ಮದ್ದೂರು ವಲಯ ಅಧಿಕಾರಿ ಚಂದ್ರಶೇಖರ್ ಪ್ರತಿ ತಿಂಗಳು ಇಂತಿಷ್ಟು ಮದ್ಯ ಮತ್ತು ಬಿಯರ್ ಮಾರಾಟ ಮಾಡಲೇಬೇಕು. ಅಬಕಾರಿ ಉಪ ಆಯುಕ್ತರು ಟಾರ್ಗೆಟ್ ನೀಡಿದ್ದಾರೆ. ಇದನ್ನು ಸಾಧಿಸದಿದ್ದರೆ ಮೊಕದ್ದಮೆ ದಾಖಲಿಸುವುದಾಗಿ ಹೆದರಿಸುತ್ತಾರೆ. ನಿಯಮ ಉಲ್ಲಂಘಿಸಿ ಎಲ್ಲಾ ಹಳ್ಳಿಗಳಿಗೂ ಪಾರ್ಸೆಲ್ ಹೊಡೆಯುವಂತೆ ಅಬಕಾರಿ ಸಿಬ್ಬಂದಿಯೇ ಹೇಳುತ್ತಾರೆ ಎಂದು ಆಪಾದಿಸಿದ್ದಾರೆ.ಎಲ್ಲವನ್ನೂ ನಿಯಮಬದ್ಧವಾಗಿ ಮಾಡುವುದಕ್ಕೆ ಸಾಧ್ಯವಿಲ್ಲ. ಎಲ್ಲರಂತೆ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು. ಯಾವುದಾದರೂ ಬೇರೆ ಹೋಟೆಲ್ ಹೆಸರಿನಲ್ಲಿ ಕೇಸ್ ಬುಕ್ ಮಾಡುತ್ತೇವೆ. ಅದರ ದಂಡವನ್ನು ನೀವೇ ಕಟ್ಟಬೇಕು ಎಂದು ಹೇಳಿದ್ದಾರೆಂದು ಸಿಸಿ ಕ್ಯಾಮೆರಾ ದೃಶ್ಯ ಸಮೇತ ದೂರು ನೀಡಿದ್ದಾರೆ.
ಕಳೆದ ವರ್ಷ ನವೆಂಬರ್‌ನಲ್ಲಿ ಸಿಎಲ್-7 ಲೈಸೆನ್ಸ್ ನೀಡಲು ಅಬಕಾರಿ ಡಿಸಿ 20 ಲಕ್ಷ ರು. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆಂದು ಲೋಕಾಯುಕ್ತ ಪೊಲೀಸರಿಗೆ ಪುನೀತ್‌ಕುಮಾರ್ ದೂರು ನೀಡಿದ್ದರು. ಆ ದೂರಿನ ಆಧಾರದ ಮೇಲೆ ಅಬಕಾರಿ ಡಿಸಿ ರವಿಶಂಕರ್ ಅವರನ್ನು ಅಮಾನತುಗೊಳಿಸಲಾಗಿತ್ತು ಹಾಗೂ ಮದ್ದೂರು ಅಬಕಾರಿ ಇನ್ಸ್‌ಪೆಕ್ಟರ್ ಶಿವಶಂಕರ್ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿತ್ತು. ಈ ಕಾರಣವನ್ನೇ ಮುಂದಿಟ್ಟುಕೊಂಡು ಪದೇ ಪದೇ ತಮ್ಮನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎಂದಿರುವ ಪುನೀತ್‌ಕುಮಾರ್ ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದಾರೆ.