ಸಾರಾಂಶ
ಬೆಂಗಳೂರು : ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲು ಎರಡು ಲಕ್ಷ ರು. ಲಂಚ ಪಡೆದ ಆರೋಪದಲ್ಲಿ ಬಿಬಿಎಂಪಿ ಗಣೇಶ ಮಂದಿರ ವಾರ್ಡ್‌ನ ಮಾಜಿ ಸದಸ್ಯ ಎಲ್. ಗೋವಿಂದರಾಜು ಅವರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ವಿಧಿಸಿದ್ದ ನಾಲ್ಕು ವರ್ಷಗಳ ಶಿಕ್ಷೆಯನ್ನು ಹೈಕೋರ್ಟ್ ರದ್ದುಪಡಿಸಿದೆ.
ಲೋಕಾಯುಕ್ತ ನ್ಯಾಯಾಲಯದ ಆದೇಶ ರದ್ದು ಕೋರಿ ಗೋವಿಂದರಾಜು ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರ ಪೀಠ ಈ ಆದೇಶ ನೀಡಿದೆ.
ಲೋಕಾಯುಕ್ತ ಪೊಲೀಸರ ತನಿಖೆ ಅತ್ಯಂತ ದೋಷಪೂರಿತವಾಗಿದೆ. ಆರೋಪಿ ವಿರುದ್ಧದ ಆರೋಪಗಳನ್ನು ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ತಿಳಿಸಿ, ಗೋವಿಂದರಾಜು ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ.
ಅಲ್ಲದೆ, ಗೋವಿಂದರಾಜು ಅವರಿಗೆ ವಿಚಾರಣಾ ನ್ಯಾಯಾಲಯ ವಿಧಿಸಿರುವ ಶಿಕ್ಷೆ ಪ್ರಮಾಣ ಹೆಚ್ಚಿಸುವಂತೆ ಕೋರಿ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಅರ್ಜಿಯನ್ನು ಇದೇ ವೇಳೆ ನ್ಯಾಯಪೀಠ ವಜಾಗೊಳಿಸಿದೆ.
ಪ್ರಕರಣದ ಹಿನ್ನೆಲೆ:
ಪ್ರಕರಣ ಸಂಬಂಧ ಉದಯ್ ಕುಮಾರ್ ಎಂಬಾತ ಲೋಕಾಯುಕ್ತ ಪೊಲೀಸರಿಗೆ ದೂರು ದಾಖಲಿಸಿ, ತಾನು ಕತ್ರಿಗುಪ್ಪೆಯಲ್ಲಿ ಬಹುಮಹಡಿ ಕಟ್ಟಡ ನಿರ್ಮಿಸುತ್ತಿದ್ದೇನೆ. ಗೋವಿಂದರಾಜು ಬಿಬಿಎಂಪಿ ಸದಸ್ಯರಾದ ಬಳಿಕ ಕಟ್ಟಡದ ನಕ್ಷೆ ಮತ್ತು ಬೈಲಾ ಉಲ್ಲಂಘಿಸಲಾಗಿದೆ ಎಂದು ಹೇಳಿ ನಿರ್ಮಾಣ ಸ್ಥಗಿತ ಮಾಡುವಂತೆ ಹೇಳಿದರು. ಕಾಮಗಾರಿ ಮುಂದುವರಿಯಬೇಕಾದರೆ ಲಂಚ ನೀಡಬೇಕು ಎಂದು ಆಪ್ತರಿಂದ ಬೇಡಿಕೆಯಿಟ್ಟಿದ್ದಾರೆ ಎಂದು ಆರೋಪಿಸಿದ್ದರು.
ಈ ದೂರು ಆಧರಿಸಿ ಲೋಕಾಯುಕ್ತ ಪೊಲೀಸರು ದೂರುದಾರನಿಂದ 2 ಲಕ್ಷ ರು. ಪಡೆಯುವಾಗ ಗೋವಿಂದರಾಜುವನ್ನು ಬಂಧಿಸಿದ್ದರು, ಬಳಿಕ ತನಿಖೆ ನಡೆಸಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಲಂಚ ಸ್ವೀಕಾರ ಆರೋಪದ ಮೇಲೆ ಆರೋಪಪಟ್ಟಿ ಸಲ್ಲಿಸಿದ್ದರು. ಲೋಕಾಯುಕ್ತ ವಿಶೇಷ ನ್ಯಾಯಾಲಯ ಗೋವಿಂದರಾಜುಗೆ ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ 90 ಸಾವಿರ ರು. ದಂಡ ವಿಧಿಸಿತ್ತು.