ಸಾರಾಂಶ
ಬೆಂಗಳೂರು: ಪಡಿತರ ಅಂಗಡಿಯ ಅಮಾನತನ್ನು ಹಿಂಪಡೆಯಲು ಲಂಚ ಸ್ವೀಕರಿಸುತ್ತಿದ್ದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕಿ ಸೇರಿ ಇಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕಿ ಪ್ರೀತಿ ಚಂದ್ರಶೇಖರ್ ಮತ್ತು ಖಾಸಗಿ ವ್ಯಕ್ತಿ ರಮೇಶ್ ಎಂಬುವವರು ಬಂಧಿತರಾಗಿದ್ದಾರೆ. ದೂರುದಾರ ಪುರುಷೋತ್ತಮ ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ. ಪಡಿತರ ಅಂಗಡಿಯನ್ನು ಅಮಾನತು ಮಾಡಲಾಗಿತ್ತು. ಇದನ್ನು ಹಿಂಪಡೆಯುವ ಸಂಬಂಧ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ದೂರುದಾರರು ಮನವಿ ಮಾಡಿದ್ದರು. ಅಮಾನತನ್ನು ಹಿಂಪಡೆಯಲು ₹70 ಸಾವಿರ ಲಂಚ ನೀಡುವಂತೆ ಬೇಡಿಕೆ ಇಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
50 ಸಾವಿರ ರು. ಮುಂಗಡವಾಗಿ ನೀಡಲಾಗಿತ್ತು. ಬಾಕಿ ಇರುವ 20 ಸಾವಿರ ರು. ಅನ್ನು ಖಾಸಗಿ ವ್ಯಕ್ತಿ ರಮೇಶ್ ಸ್ವೀಕರಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ. ನಂತರ ಕಂದಾಯ ಭವನದಲ್ಲಿ ಪ್ರೀತಿ ಚಂದ್ರಶೇಖರ್ ಅವರನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.