ಸಾರಾಂಶ
ಕೆರೆಯ ವಾಕಿಂಗ್ ಪಾತ್‌ನಲ್ಲಿ ಆಡುವಾಗ ಕೆರೆಗೆ ಬಿದ್ದ ಬಿಂದಿಗೆ ತರಲು ಹೋಗಿ ಅಣ್ಣ-ತಂಗಿ ಸಾವನ್ನಪಿರುವ ಘಟನೆ ಕೆಂಗೇರಿಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು-ಮೈಸೂರು ರಸ್ತೆಯ ಕೆಂಗೇರಿ ಬಸ್ ನಿಲ್ದಾಣದ ಎದುರಿನ ಕೆರೆಯ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದ ಅಣ್ಣ-ತಂಗಿಯ ಮೃತದೇಹಗಳು ಮಂಗಳವಾರ ಪತ್ತೆಯಾಗಿವೆ.ಕೆಂಗೇರಿಯ ಹರ್ಷ ಲೇಔಟ್ ನಿವಾಸಿ ನಾಗಮ್ಮ ಅವರ ಮಕ್ಕಳಾದ ಜಾನ್ಸನ್ ಶ್ರೀನಿವಾಸ್(13) ಮತ್ತು ಮಹಾಲಕ್ಷ್ಮೀ(11) ಮೃತರು.
ಸೋಮವಾರ ಸಂಜೆವರೆಗೂ ಮಕ್ಕಳ ಪತ್ತೆಗಾಗಿ ಕೆರೆಯಲ್ಲಿ ಕಾರ್ಯಾಚರಣೆ ಕೈಗೊಂಡಿದ್ದ ಅಗ್ನಿಶಾಮಕ ಹಾಗೂ ಸಿವಿಲ್ ಡಿಫೆನ್ಸ್ ಸಿಬ್ಬಂದಿ ಮಳೆ ಹಾಗೂ ಕತ್ತಲು ಆವರಿಸಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರು. ಮಂಗಳವಾರ ಮುಂಜಾನೆ ರಬ್ಬರ್ ಬೋಟ್ ತರಿಸಿಕೊಂಡು ಕೆರೆಯಲ್ಲಿ ಕಾರ್ಯಾಚರಣೆ ಮುಂದುವರೆಸಿದ್ದರು.ಮೊದಲಿಗೆ ಅಣ್ಣನ ಮೃತದೇಹ ಪತ್ತೆ:
ಮಧ್ಯಾಹ್ನ ಸುಮಾರು 12ರ ವೇಳೆಗೆ ಜಾನ್ಸನ್ ಶ್ರೀನಿವಾಸ್‌ನ ಮೃತದೇಹವನ್ನು ಪತ್ತೆಹಚ್ಚಿ ಮೇಲಕ್ಕೆ ತಂದರು. ಬಳಿಕ ಸುರಿಯುವ ಮಳೆಯ ನಡುವೆಯೂ ಬಾಲಕಿ ಮೃತದೇಹ ಪತ್ತೆಗೆ ಕಾರ್ಯಾಚರಣೆ ಮುಂದುವರೆಸಿದ್ದರು. ಸಂಜೆ ಸುಮಾರು 4ಕ್ಕೆ ನೀರಿನ ಮೇಲೆ ತೇಲಿದ ಮಹಾಲಕ್ಷ್ಮೀ ಮೃತದೇಹವನ್ನು ಅಗ್ನಿಶಾಮಕ ಮತ್ತು ಸಿವಿಲ್ ಡಿಫೆನ್ಸ್ ಸಿಬ್ಬಂದಿ ಮೇಲಕ್ಕೆ ತಂದರು. ಬಳಿಕ ಪೊಲೀಸರು ಎರಡೂ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದರು.ಘಟನೆ ಹಿನ್ನೆಲೆ:
ತಮಿಳುನಾಡು ಮೂಲದ ನಾಗಮ್ಮ ಬಿಬಿಎಂಪಿಯಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಪತಿ ರಾಜು ಎರಡು ವರ್ಷಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಹೀಗಾಗಿ ತನ್ನ ಇಬ್ಬರು ಮಕ್ಕಳು ಹಾಗೂ ಸಹೋದರಿ ಜತೆಗೆ ಹರ್ಷ ಲೇಔಟ್‌ನ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಸೋಮವಾರ ಸಂಜೆ ನಾಗಮ್ಮ ಮನೆಯಲ್ಲಿ ಇರಲಿಲ್ಲ. ಈ ವೇಳೆ ಜಾನ್ಸನ್ ಶ್ರೀನಿವಾಸ್ ಮತ್ತು ಮಹಾಲಕ್ಷ್ಮೀ ನೀರು ತರಲು ಕೆಂಗೇರಿ ಕೆರೆ ಬಳಿ ಬಂದಿದ್ದಾರೆ.ಕೆರೆ ವಾಕಿಂಗ್ ಪಾತ್‌ನಲ್ಲಿಆಡುತ್ತಿದ್ದಾಗ ಅನಾಹುತಈ ವೇಳೆ ವಾಕಿಂಗ್ ಪಾತ್‌ನಲ್ಲಿ ಅಣ್ಣ-ತಂಗಿ ಆಟವಾಡುವಾಗ, ಬಿಂದಿಗೆ ಕೆರೆಗೆ ಉರುಳಿದೆ. ಬಿಂದಿಗೆ ತೆಗೆದುಕೊಳ್ಳಲು ಮಹಾಲಕ್ಷ್ಮೀ ಕೆರೆಗೆ ಇಳಿದಾಗ ನೀರಿನಲ್ಲಿ ಮುಳುಗಿದ್ದಾಳೆ. ಇದನ್ನು ನೋಡಿದ ಜಾನ್ಸನ್ ಶ್ರೀನಿವಾಸ್, ತಂಗಿಯನ್ನು ಎಳೆದುಕೊಳ್ಳಲು ನೀರಿಗೆ ಇಳಿದಿದ್ದಾನೆ. ಈ ವೇಳೆ ಆತನೂ ನೀರಿನಲ್ಲಿ ಮುಳುಗಿದ್ದಾನೆ.
ಸಂಜೆಯಾದರೂ ಮಕ್ಕಳು ಮನೆಗೆ ಬಾರದ ಹಿನ್ನೆಲೆಯಲ್ಲಿ ನಾಗಮ್ಮ ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಬಳಿಕ ಕೆಂಗೇರಿ ಕೆರೆ ಬಳಿ ಬಂದು ಹುಡುಕಾಡಿದಾಗ ದಡದಲ್ಲಿ ಮಕ್ಕಳ ಬಟ್ಟೆಗಳು ಇರುವುದು ಕಂಡು ಬಂದಿದೆ. ಕೆರೆಯಲ್ಲಿ ಮುಳುಗಿರುವ ಶಂಕೆ ಹಿನ್ನೆಲೆಯಲ್ಲಿ ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೂಡಲೇ ಕೆಂಗೇರಿ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದಾರೆ.ಮಳೆಯ ನಡುವೆಯೂ ಕಾರ್ಯಾಚರಣೆ
ಪೊಲೀಸರ ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಅಗ್ನಿಶಾಮಕ ಹಾಗೂ ಸಿವಿಲ್ ಡಿಫೆನ್ಸ್ ಸಿಬ್ಬಂದಿ ಕೆರೆಯಲ್ಲಿ ನಾಪತ್ತೆಯಾಗಿದ್ದ ಮಕ್ಕಳಿಗಾಗಿ ಹುಡುಕಾಟ ಆರಂಭಿಸಿದ್ದರು. ಈ ವೇಳೆ ಮಳೆ ಸುರಿಯಲು ಆರಂಭಿಸಿದ್ದು, ಕತ್ತಲು ಆವರಿಸಿದೆ. ಹೀಗಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರು. ಮಂಗಳವಾರ ಮುಂಜಾನೆಯಿಂದಲೇ ಕಾರ್ಯಾಚರಣೆ ಮತ್ತೆ ಆರಂಭಿಸಿ ಇಬ್ಬರು ಮಕ್ಕಳ ಮೃತದೇಹವನ್ನು ಕೆರೆಯಿಂದ ಹೊರಗೆ ತೆಗೆದಿದ್ದಾರೆ. ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ನಾಗಮ್ಮನ ಸಂಕಷ್ಟ
ಎರಡು ವರ್ಷದ ಹಿಂದೆ ಪತಿಯನ್ನು ಕಳೆದುಕೊಂಡಿದ್ದ ನಾಗಮ್ಮ ಇದೀಗ ತನ್ನಿಬ್ಬರು ಮಕ್ಕಳನ್ನು ಕಳೆದುಕೊಂಡಿದ್ದಾರೆ. ಕೆರೆ ಬಳಿ ಮಕ್ಕಳ ಮೃತದೇಹಕ್ಕಾಗಿ ಶೋಧ ಕಾರ್ಯ ಒಂದೆಡೆ ಸಾಗಿದರೆ, ಮತ್ತೊಂದೆಡೆ ನಾಗಮ್ಮನ ಆಕ್ರಂದನ ಮುಗಿಲು ಮುಟ್ಟಿತು. ಕೆರೆ ದಡದಲ್ಲಿ ಕುಳಿತು ನಾಗಮ್ಮ ರೋಧಿಸಿದರು. ಈ ತಾಯಿಯ ರೋಧನ ಕಂಡವರ ಕಣ್ಣಾಲಿಗಳು ನೀರಾದವು. ಇಬ್ಬರು ಮಕ್ಕಳ ಮೃತದೇಹವನ್ನು ಕಂಡು ನಾಗಮ್ಮ ಬಿಕ್ಕಿಬಿಕ್ಕಿ ಅತ್ತರು.