ಸಾರಾಂಶ
ಬೆಂಗಳೂರು : ಖಾಸಗಿ ಬಸ್ ಟ್ರಾವೆಲ್ಸ್‌ವೊಂದರ ವರ್ಕ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕೆಲಸಗಾರರನ್ನು ದುಷ್ಕರ್ಮಿಗಳು ರಾಡ್‌ನಿಂದ ಹಲ್ಲೆಗೈದು ಕೊಲೆ ಮಾಡಿರುವ ಘಟನೆ ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾಮನಗರ ಮೂಲದ ನಾಗೇಶ್ (55) ಮತ್ತು ಮಂಡ್ಯ ಮೂಲದ ಮಂಜೇಗೌಡ (50) ಕೊಲೆಯಾದ ದುರ್ದೈವಿಗಳು. ಸಿಂಗಹಳ್ಳಿ ಕೆಐಎಡಿಬಿ ಕೈಗಾರಿಕಾ ಪ್ರದೇಶದ ಎಸ್‌ಆರ್‌ಎಸ್ ಟ್ರಾವೆಲ್ಸ್ ಕಂಪನಿಗೆ ಸೇರಿದ ವರ್ಕ್‌ಶಾಪ್‌ನಲ್ಲಿ ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ. ಎಸ್‌ಆರ್‌ಎಸ್ ಟ್ರಾವೆಲ್ಸ್ ಸಿಬ್ಬಂದಿ ಸುನೀಲ್ ಕುಮಾರ್ ಎಂಬುವವರು ಬಸ್ ಸ್ವಚ್ಛ ಮಾಡಿಸಲು ಶನಿವಾರ ಬೆಳಗ್ಗೆ ವರ್ಕ್ ಶಾಪ್‌ಗೆ ಬಂದಾಗ ಈ ಜೋಡಿ ಕೊಲೆ ಘಟನೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ವಿವರ: ಎಸ್‌ಆರ್‌ಎಸ್ ಟ್ರಾವೆಲ್ಸ್ ಕಂಪನಿಗೆ ಸೇರಿದ ವರ್ಕ್‌ಶಾಪ್‌ನಲ್ಲಿ ಬಸ್‌ಗಳನ್ನು ಸ್ವಚ್ಛಗೊಳಿಸುವ ಕೆಲಸವನ್ನು ನಾಗೇಶ್ ಕಳೆದ ಎರಡು ವರ್ಷದಿಂದ ಕೆಲಸ ಮಾಡುತ್ತಿದ್ದರೆ, ಮಂಜೇಗೌಡ ಕಳೆದ ನಾಲ್ಕು ತಿಂಗಳಿಂದ ಈ ವರ್ಕ್‌ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ ವೇಳೆ ವರ್ಕ್‌ಶಾಪ್ ಬಳಿಯ ಶೆಡ್‌ನಲ್ಲೇ ಮಲಗುತ್ತಿದ್ದರು.
ನಾಗೇಶ್ ಮತ್ತು ಮಂಜೇಗೌಡ ಶುಕ್ರವಾರ ವರ್ಕ್‌ಶಾಪ್‌ನಲ್ಲಿ ಕೆಲಸ ಮುಗಿಸಿ ಶೆಡ್‌ಗೆ ಹೋಗಿದ್ದಾರೆ. ಈ ವೇಳೆ ಆರೋಪಿಗಳೊಂದಿಗೆ ಮದ್ಯ ಸೇವಿಸಿರುವ ಸಾಧ್ಯತೆಯಿದೆ. ಆಗ ಯಾವುದೋ ವಿಚಾರಕ್ಕೆ ಆರೋಪಿಗಳ ಜತೆಗೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ಆರೋಪಿಗಳು ಇಬ್ಬರ ತಲೆ, ಮುಖಕ್ಕೆ ಮನಬಂದಂತೆ ಹಲ್ಲೆಗೈದು ಕೊಲೆ ಮಾಡಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಸಿಬ್ಬಂದಿ ಬಂದಾಗ ಘಟನೆ ಬೆಳಕಿಗೆ: ಎಸ್‌ಆರ್‌ಎಸ್ ಟ್ರಾವೆಲ್ಸ್ ಸಿಬ್ಬಂದಿ ಸುನೀಲ್ ಕುಮಾರ್ ಅವರು ಶನಿವಾರ ಬೆಳಗ್ಗೆ ಬಸ್ ಸ್ವಚ್ಛ ಮಾಡಿಸಲು ವರ್ಕ್‌ಶಾಪ್‌ಗೆ ಬಂದಿದ್ದಾರೆ. ಈ ವೇಳೆ ವರ್ಕ್‌ಶಾಪ್‌ನಲ್ಲಿ ಯಾರೂ ಕಾಣಿಸಿಲ್ಲ. ಚಾಲಕರು ವಿಶ್ರಾಂತಿ ಪಡೆಯುವ ಶೆಡ್‌ನ ಬಾಗಿಲು ತೆರೆದು ನೋಡಿದಾಗ, ನಾಗೇಶ್ ಮತ್ತು ಮಂಜೇಗೌಡ ಕೊಲೆಯಾಗಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಈ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿ ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಸಂಬಂಧ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಓರ್ವ ಕೆಲಸಗಾರ ನಾಪತ್ತೆ: ಕೊಲೆಯಾದ ನಾಗೇಶ್ ಮತ್ತು ಮಂಜೇಗೌಡನ ಜತೆಗೆ ಸುರೇಶ್ ಎಂಬಾತ ವರ್ಕ್ ಶಾಪ್‌ನಲ್ಲಿ ಬಸ್‌ಗಳ ಸ್ವಚ್ಛತೆ ಕಾರ್ಯ ಮಾಡುತ್ತಿದ್ದ. ಆತನೂ ಸಹ ರಾತ್ರಿ ವೇಳೆ ಶೆಡ್‌ನಲ್ಲೇ ಮಲಗುತ್ತಿದ್ದ. ಘಟನೆ ಬಳಿಕ ಸುರೇಶ್ ನಾಪತ್ತೆಯಾಗಿದ್ದಾನೆ. ಈತನೇ ನಾಗೇಶ್ ಮತ್ತು ಮಂಜೇಗೌಡನ ಮೇಲೆ ಹಲ್ಲೆಗೈದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈಗಾಗಲೇ ತನಿಖೆ ಆರಂಭಿಸಿರುವ ಪೊಲೀಸರು ಜೋಡಿ ಕೊಲೆ ಸಂಬಂಧ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.