ಗೃಹಿಣಿಯ ಚಿನ್ನ ದೋಚಿದ ಬುಡುಬುಡಿಕೆ ವೇಷಧಾರಿ!

| Published : Jan 30 2024, 02:05 AM IST / Updated: Jan 30 2024, 02:43 PM IST

ಸಾರಾಂಶ

ಗಂಡನಿಗೆ ಗಂಡಾಂತರ ಇದೆ ಎಂದು ಗೃಹಿಣಿಯನ್ನು ನಂಬಿಸಿ ಚಿನ್ನ ದೋಚಿ ಬುಡುಬುಡಿಕೆ ವೇಷಧಾರಿ ಪರಾರಿ ಆಗಿರುವ ಘಟನೆ ಬೆಂಗಳೂರಿನ ದೊಡ್ಡಗುಬ್ಬಿಯ ಜನತಾ ಕಾಲೋನಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬುಡಬುಡಿಕೆ ವ್ಯಕ್ತಿಯೊಬ್ಬ ‘ನಿನ್ನ ಗಂಡನಿಗೆ ಗಂಡಾಂತರವಿದೆ’ ಎಂದು ಹೆದರಿಸಿ ಪೂಜೆಯ ನೆಪದಲ್ಲಿ ಮಹಿಳೆಯ 4 ಗ್ರಾಂ ತೂಕದ ಚಿನ್ನದ ಕಿವಿಯೋಲೆಗಳನ್ನು ಬಿಚ್ಚಿಸಿಕೊಂಡು ಬಳಿಕ ಕದ್ದು ಪರಾರಿಯಾಗಿರುವ ಘಟನೆ ಕೊತ್ತನೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ದೊಡ್ಡಗುಬ್ಬಿಯ ಜನತಾ ಕಾಲೋನಿ ನಿವಾಸಿ ಶಕುಂತಲಾ(25) ಚಿನ್ನದ ಕಿವಿಯೋಲೆ ಕಳೆದುಕೊಂಡವರು. ಇವರು ನೀಡಿದ ದೂರಿನ ಮೇರೆಗೆ ವಂಚನೆ ಪ್ರಕರಣ ದಾಖಲಿಸಿಕೊಂಡು ಅಪರಿಚಿತ ವ್ಯಕ್ತಿಯ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಘಟನೆ?
ದೂರುದಾರೆ ಶಕುಂತಲಾ ಅವರು ಜ.28ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಮನೆಯಲ್ಲಿ ಇದ್ದರು. ಈ ವೇಳೆ ಬುಡುಬುಡಿಕೆ ನುಡಿಸುತ್ತಾ ಅಪರಿಚಿತ ವ್ಯಕ್ತಿಯೊಬ್ಬ ಮನೆ ಬಳಿ ಬಂದಿದ್ದಾನೆ. 

ಈ ವೇಳೆ ಆತ ‘ನಿನ್ನ ಗಂಡನಿಗೆ ಗಂಡಾಂತರವಿದೆ. ಪೂಜೆ ಮಾಡದಿದ್ದರೆ 9 ದಿನಗಳಲ್ಲಿ ಮರಣ ಹೊಂದುತ್ತಾನೆ. ಇದನ್ನು ತಪ್ಪಿಸಬೇಕಾದರೆ, ಒಂದು ಪೂಜೆ ಮಾಡಬೇಕು’ ಎಂದು ಹೆದರಿಸಿದ್ದಾನೆ.

ಇದರಿಂದ ಆತಂಕಗೊಂಡ ಶಕುಂತಲಾ, ಪೂಜೆ ಮಾಡಿಸಲು ಒಪ್ಪಿದ್ದಾರೆ. ಅದರಂತೆ ಆ ವ್ಯಕ್ತಿಯ ಒಂದು ಮಡಿಕೆ ಪಡೆದು ಅದಕ್ಕೆ ಅಕ್ಕಿ, ಕುಂಕುಮ, ಅರಿಶಿನ ಹಾಕಿದ್ದಾನೆ. ಬಳಿಕ ಕಿವಿಯೋಲೆ ಬಿಚ್ಚಿಡುವಂತೆ ಸೂಚಿಸಿದ್ದಾನೆ. 

ಅದರಂತೆ ಶಂಕುತಲಾ ಅವರು ತಮ್ಮ ಕಿವಿಯೋಲೆಗಳನ್ನು ಬಿಚ್ಚಿಟ್ಟಿದ್ದಾರೆ. ಬಳಿಕ ಆತ ‘ಕಣ್ಣು ಮುಚ್ಚಿ ಕುಳಿತುಕೊಳ್ಳಿ. ಪೂಜೆ ಮಾಡುತ್ತೇನೆ’ ಎಂದು ಹೇಳಿದ್ದಾನೆ. ಆತನ ಮಾತಿನಂತೆ ಶಕುಂತಲಾ ಕಣ್ಣು ಮುಚ್ಚಿ ಕುಳಿತಿದ್ದಾರೆ. 

ಬಳಿಕ ಆತ ಆ ಮಡಿಕೆ ಸುತ್ತ ದಾರಕಟ್ಟಿದ್ದಾನೆ. ‘ನಿಮ್ಮ ಗಂಡ ಬಂದ ಬಳಿಕ ಮಡಿಕೆಯನ್ನು ತೆರೆದು ನೋಡಿ’ ಎಂದು ಸೂಚಿಸಿ ಮನೆಯಿಂದ ತೆರಳಿದ್ದಾನೆ.

ಗಂಡ ಬಂದ ಬಳಿಕ ಮಡಿಕೆ ತೆರೆಯಿರಿ!: ಸಂಜೆ ಗಂಡ ಮನೆಗೆ ಬಂದ ನಂತರ ಶಕುಂತಲಾ ಅವರು ಮಡಿಕೆಯನ್ನು ತೆರೆದು ನೋಡಿದಾಗ ಆ ಮಡಿಕೆಯಲ್ಲಿ ಚಿನ್ನದ ಓಲೆಗಳು ಇಲ್ಲದಿರುವುದು ಕಂಡು ಬಂದಿದೆ. 

ಆ ಅಪರಿಚಿತ ಪೂಜೆ ನೆಪದಲ್ಲಿ ಕಿವಿಯೋಲೆ ಬಿಚ್ಚಿಸಿಕೊಂಡು ಬಳಿಕ ಮೋಸ ಮಾಡಿ ಕಿವಿಯೋಲೆ ತೆಗೆದುಕೊಂಡು ಪರಾರಿಯಾಗಿರುವುದು ಗೊತ್ತಾಗಿದೆ.

ಬಳಿಕ ಶಕುಂತಲಾ ಅವರು ಕೊತ್ತನೂರು ಪೊಲೀಸ್‌ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಅಪರಿಚಿತ ವ್ಯಕ್ತಿಯ ಪತ್ತೆಗೆ ಶೋಧ ಕಾರ್ಯ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.