ಆಟೋಗೆ ಕಾರು ಡಿಕ್ಕಿ: ಸ್ಥಳದಲ್ಲೇ ಓರ್ವ ಮಹಿಳೆ ಸಾವು, ಇಬ್ಬರಿಗೆ ತೀವ್ರ ಗಾಯ

| Published : Jul 11 2024, 01:35 AM IST / Updated: Jul 11 2024, 04:47 AM IST

accident
ಆಟೋಗೆ ಕಾರು ಡಿಕ್ಕಿ: ಸ್ಥಳದಲ್ಲೇ ಓರ್ವ ಮಹಿಳೆ ಸಾವು, ಇಬ್ಬರಿಗೆ ತೀವ್ರ ಗಾಯ
Share this Article
  • FB
  • TW
  • Linkdin
  • Email

ಸಾರಾಂಶ

ದೇವರ ದರ್ಶನ ಪಡೆದು ವಾಪಸ್ಸಾಗುವ ವೇಳೆ ಭಕ್ತರಿದ್ದ ಆಟೋಗೆ ಕಾರು ಹಿಂದಿನಿಂದ ಡಿಕ್ಕಿಯಾಗಿ ಮೈಸೂರು ಮೂಲದ ಮಹಿಳೆ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಮಹಿಳೆಯರು ತೀವ್ರವಾಗಿ ಗಾಯಗೊಂಡಿರುವ ಘಟನೆ ಮದ್ದೂರು ತಾಲೂಕಿನ ಮದ್ದೂರು - ತುಮಕೂರು ರಾಜ್ಯ ಹೆದ್ದಾರಿ ದುಂಡನಹಳ್ಳಿ ಸಮೀಪ ಬುಧವಾರ ಮಧ್ಯಾಹ್ನ ಜರುಗಿದೆ.

  ಮದ್ದೂರು :  ದೇವರ ದರ್ಶನ ಪಡೆದು ವಾಪಸ್ಸಾಗುವ ವೇಳೆ ಭಕ್ತರಿದ್ದ ಆಟೋಗೆ ಕಾರು ಹಿಂದಿನಿಂದ ಡಿಕ್ಕಿಯಾಗಿ ಮೈಸೂರು ಮೂಲದ ಮಹಿಳೆ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಮಹಿಳೆಯರು ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಮದ್ದೂರು - ತುಮಕೂರು ರಾಜ್ಯ ಹೆದ್ದಾರಿ ದುಂಡನಹಳ್ಳಿ ಸಮೀಪ ಬುಧವಾರ ಮಧ್ಯಾಹ್ನ ಜರುಗಿದೆ.

ಮೈಸೂರಿನ ವೀರನ್ನಗೆರೆ ಮೊಹಲ್ಲಾದ ನಿವಾಸಿ ಬಸವರಾಜು ಪತ್ನಿ ಉಮಾ (45) ಮೃತಪಟ್ಟವರು. ಅಪಘಾತದಲ್ಲಿ ತಲೆಗೆ ತೀವ್ರವಾಗಿ ಬಿದ್ದ ಪೆಟ್ಟಿನಿಂದ ರಕ್ತಸ್ರಾವವಾಗಿ ಉಮಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಆಟೋದಲ್ಲಿದ್ದ 14 ಮಂದಿ ಪ್ರಯಾಣಿಕರ ಪೈಕಿ ಉಮಾ ಜೊತೆಯಲ್ಲಿ ಬಂದಿದ್ದ ಅನಿತಾ, ಸಿಂಧು ಸಹ ತೀವ್ರವಾಗಿ ಗಾಯಗೊಂಡು ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಟೋದಲ್ಲಿದ್ದ ರತ್ನಮ್ಮ, ಮಂಗಳಮ್ಮ ಸೇರಿದಂತೆ ಉಳಿದ ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೈಸೂರು ವೀರನ್ನಗೆರೆ ಬಡಾವಣೆಯ ಮೃತ ಉಮಾ, ಗಾಯಾಳುಗಳಾದ ಸಿಂಧು, ಅನಿತಾ, ಹಾಗೂ ರತ್ನ ಮತ್ತು ಮಂಗಳಮ್ಮ ಸೇರಿದಂತೆ ಐದು ಮಂದಿ ಮೈಸೂರಿನಿಂದ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಬಿ.ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದು ನಂತರ ಪ್ರಯಾಣಿಕರ ಆಟೋದಲ್ಲಿ ವಾಪಸ್ಸಾಗುತ್ತಿದ್ದರು.

ಮದ್ದೂರು- ತುಮಕೂರು ರಾಜ್ಯ ಹೆದ್ದಾರಿ ದುಂಡನಹಳ್ಳಿ ಸಮೀಪ ವೇಗವಾಗಿ ಬಂದ ಹುಂಡೈ ಕಾರು ಆಟೋಗೆ ಹಿಂದಿನಿಂದ ಗುದ್ದಿದೆ. ಇದರಿಂದ ಆಟೋದಲ್ಲಿದ್ದ ಪ್ರಯಾಣಿಕರೆಲ್ಲರೂ ಕೆಳಗೆ ಬಿದ್ದು ಸಾವು- ನೋವು ಉಂಟಾಗಿದೆ.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಕೆಸ್ತೂರು ಪೊಲೀಸ್ ಠಾಣೆ ಪಿಎಸ್ಐ ನರೇಶ್ ಹಾಗೂ ಸಿಬ್ಬಂದಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು. ಅಪಘಾತದ ನಂತರ ಕಾರು ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಮದ್ದೂರು ಗ್ರಾಮಾಂತರ ವೃತ್ತ ನಿರೀಕ್ಷಕ ವೆಂಕಟೇಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂಬಂಧ ಕೆಸ್ತೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಪ್ರತ್ಯೇಕ ಪ್ರಕರಣ ಇಬ್ಬರು ನಾಪತ್ತೆ

ಶ್ರೀರಂಗಪಟ್ಟಣ:ತಾಲೂಕಿನ ಕೊಡಿಯಾಲ ಹಾಗೂ ಮಹದೇವಪುರ ಗ್ರಾಮಗಳಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಮಹಿಳೆಯರು ನಾಪತ್ತೆಯಾಗಿದ್ದು, ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಲೂಕಿನ ಕೊಡಿಯಾಲ ಗ್ರಾಮದ ಕುಮಾರಿ (40) ಕಾಣೆಯಾದ ಮಹಿಳೆಯು 5.5 ಅಡಿ ಎತ್ತರ, ದುಂಡುಮುಖ, ಬಿಳಿ ಬಣ್ಣ, ಸಾಧಾರಣ ಶರೀರ ಹೊಂದಿದ್ದು ಕಾಣೆಯಾದ ದಿನ ಗುಲಾಬಿ ಬಣ್ಣದ ಸೀರೆ ಧರಿಸಿರುತ್ತಾರೆ. ತಾಲೂಕಿನ ಮಹದೇವಪುರದ ಗ್ರಾಮದ ಪುಷ್ಪಮ್ಮ (55) ಕಾಣೆಯಾದ ಮಹಿಳೆಯು 5.5 ಅಡಿ ಎತ್ತರ, ದುಂಡುಮುಖ, ಬಿಳಿ ಬಣ್ಣ, ಸಾಧಾರಣ ಶರೀರ ಹೊಂದಿದ್ದು ಕಾಣೆಯಾದ ದಿನ ಹಳದಿ ಬಣ್ಣದ ಸೀರೆ ಧರಿಸಿರುತ್ತಾರೆ. ಇವರ ಸುಳಿವು ಸಿಕ್ಕಲ್ಲಿ ಹೆಚ್ಚಿನ ಮಾಹಿತಿಗಾಗಿ ದೂ-08232-224888/224500/, ಮೊ-9480804857 ನ್ನು ಸಂಪರ್ಕಿಸಬಹುದು ಎಂದು ಅರಕೆರೆ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

ಆಪ್ರಾಪ್ತೆಗೆ ಮದುವೆಯಾಗುವಂತೆ ಬೆದರಿಕೆ: ಅರೋಪಿ ಬಂಧನ

ಕಿಕ್ಕೇರಿ: ಅಪ್ರಾಪ್ತೆಗೆ ಮದುವೆಯಾಗುವಂತೆ ಬೆದರಿಕೆ ಹಾಕಿದ್ದ ಆರೋಪಿಯನ್ನು ಕಿಕ್ಕೇರಿ ಪೊಲೀಸರು ಬಂಧಿಸಿದ್ದಾರೆ.ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲೂಕು ಕೆ.ಹೊಸಹಳ್ಳಿಯ ಸಚಿನ್ ಬಂಧಿತ ಆರೋಪಿ. ತಾಲೂಕಿನ ಸಾಸಲುಕೊಪ್ಪಲು ಗ್ರಾಮದ ಬಾಲಕಿಗೆ ನನ್ನನ್ನು ಮದುವೆಯಾಗಬೇಕು ಎಂದು ಬಲವಂತ ಮಾಡಿರುವ ಆರೋಪಿ ಇಲ್ಲದಿದ್ದರೆ ನಿಮ್ಮ ತಾಯಿ, ನಿನ್ನನ್ನು ಕೊಲೆ ಮಾಡುವುದಾಗಿ, ತಾನು ಕೂಡ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ಅಪ್ರಾಪ್ತೆಯು ಕಿಕ್ಕೇರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ಇನ್ಸ್ ಪೆಕ್ಟರ್ ರೇವತಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.