ಸಾರಾಂಶ
ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಹಿರಿಯ ಪತ್ರಕರ್ತ ಸಾವನ್ನಪ್ಪಿರುವ ಘಟನೆ ಪಟ್ಟಣದ ಹೊರವಲಯ ಚಾಮರಾಜನಗರ- ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ತೊಳಲಿ ಗ್ರಾಮದ ಸಮೀಪ ಶುಕ್ರವಾರ ಸಂಜೆ ಸಂಭವಿಸಿದೆ.
ನಾಗಮಂಗಲ : ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಹಿರಿಯ ಪತ್ರಕರ್ತ ಸಾವನ್ನಪ್ಪಿರುವ ಘಟನೆ ಪಟ್ಟಣದ ಹೊರವಲಯ ಚಾಮರಾಜನಗರ- ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ತೊಳಲಿ ಗ್ರಾಮದ ಸಮೀಪ ಶುಕ್ರವಾರ ಸಂಜೆ ಸಂಭವಿಸಿದೆ.
ತಾಲೂಕಿನ ಬ್ಯಾಡರಹಳ್ಳಿಯ ನಿವೃತ್ತ ಶಿಕ್ಷಕ ಸಿ.ಚಂದ್ರಪ್ಪರ ಪುತ್ರ ಬಿ.ಸಿ.ಮೋಹನ್ ಕುಮಾರ್ (46) ಮೃತಪಟ್ಟವರು.
ಕಾರ್ಯನಿಮಿತ್ತ ಬೆಳ್ಳೂರಿಗೆ ತೆರಳಿ ನಾಗಮಂಗಲಕ್ಕೆ ತಮ್ಮ ಕಾರಿನಲ್ಲಿ ವಾಪಸ್ ಬರುವಾಗ ಮೈಸೂರಿನಿಂದ ಬೆಳ್ಳೂರು ಕಡೆಗೆ ಹೋಗುತ್ತಿದ್ದ ಲಾರಿ ಕಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡು ಕಾರು ಚಲಾಯಿಸುತ್ತಿದ್ದ ಬಿ.ಸಿ.ಮೋಹನ್ ಕುಮಾರ್‌ಗೆ ತೀವ್ರವಾಗಿ ಗಾಯಗೊಂಡಿದ್ದಾರೆ.
ತಕ್ಷಣ ಸ್ಥಳೀಯರು ಆಂಬ್ಯುಲೆನ್ಸ್ ಮೂಲಕ ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಮೃತರು ಪ್ರಜಾವಾಣಿ, ವಿಜಯವಾಣಿ, ಆಂದೋಲನ ಸೇರಿದಂತೆ ಹಲವು ದಿನಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದರು. ಉತ್ತಮ ವಾಗ್ಮಿಯಾಗಿದ್ದ ಇವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಕನ್ನಡಪರ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ್ದರು.
ಪ್ರಸ್ತುತ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿಯಾಗಿದ್ದರು. ಹೇಮಾವತಿ ನೀರು ಬಳಕೆದಾರರ ಸಂಘದ ಅಧ್ಯಕ್ಷರಾಗಿ ಹೇಮಾವತಿ ನಾಲೆಗಳಿಗೆ ನೀರು ಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವಿದ್ಯಾರ್ಥಿ ದಿಸೆಯಿಂದಲೇ ನಾಯಕತ್ವದ ಗುಣ ಹೊಂದಿದ್ದರು. ರೈತರ ಹಾಗೂ ಕನ್ನಡ ಪರ ಹೋರಾಟಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುತ್ತಿದ್ದರು.
ಮೃತರಿಗೆ ತಾಯಿ ಪದ್ಮ, ಪತ್ನಿ ಲತಾ ಹಾಗೂ ಸಹೋದರ ಮತ್ತು ಸಹೋದರಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಮೃತರ ನಿಧನಕ್ಕೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮಾಜಿ ಶಾಸಕರಾದ ಸುರೇಶ್ ಗೌಡ, ಪಿ.ರಾಮಯ್ಯ, ಎನ್.ಅಪ್ಪಾಜಿಗೌಡ, ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಶನಿವಾರ ಅಂತ್ಯಕ್ರಿಯೆ:
ಮೃತರ ಹುಟ್ಟೂರಾದ ತಾಲೂಕಿನ ಬ್ಯಾಡರಹಳ್ಳಿಯಲ್ಲಿ ಶನಿವಾರ ಬೆಳಗ್ಗೆ 11:30 ಕ್ಕೆ ಮೃತರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.