ಸಾರಾಂಶ
ಹಾಡುಹಗಲೇ ಕೇರಳ ವ್ಯಾಪಾರಿಯೊಬ್ಬರ ಕಾರನ್ನು ಅಡ್ಡಗಟ್ಟಿದ ಡಕಾಯಿತರು, ವ್ಯಾಪಾರಿ ಮತ್ತು ಚಾಲಕನ ಮೇಲೆ ಹಲ್ಲೆ ನಡೆಸಿ, ಹಣವಿದ್ದ ಕಾರಿನೊಂದಿಗೆ ಪರಾರಿ ಆಗಿರುವ ಘಟನೆ ಮೈಸೂರು ತಾಲೂಕು ಜಯಪುರ ಹೋಬಳಿ ಗುಜ್ಜೇಗೌಡನಪುರ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ಮೈಸೂರು : ಹಾಡುಹಗಲೇ ಕೇರಳ ವ್ಯಾಪಾರಿಯೊಬ್ಬರ ಕಾರನ್ನು ಅಡ್ಡಗಟ್ಟಿದ ಡಕಾಯಿತರು, ವ್ಯಾಪಾರಿ ಮತ್ತು ಚಾಲಕನ ಮೇಲೆ ಹಲ್ಲೆ ನಡೆಸಿ, ಹಣವಿದ್ದ ಕಾರಿನೊಂದಿಗೆ ಪರಾರಿ ಆಗಿರುವ ಘಟನೆ ಮೈಸೂರು ತಾಲೂಕು ಜಯಪುರ ಹೋಬಳಿ ಗುಜ್ಜೇಗೌಡನಪುರ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ಕೇರಳದ ಸುಲ್ತಾನ್ ಬತ್ತೇರಿಯ ವ್ಯಾಪಾರಿ ಮಹಮ್ಮದ್ ಅಶ್ರಫ್, ಕಾರು ಚಾಲಕ ಸೂಫಿ ಹಲ್ಲೆಗೊಳಗಾದವರು. ಕಾರನ್ನು ಅಡ್ಡಗಟ್ಟಿದ ಡಕಾಯಿತರು, ವ್ಯಾಪಾರಿಯ ಮೇಲೆ ಹಲ್ಲೆ ನಡೆಸಿ ಕಾರಿನೊಂದಿಗೆ ₹1.50 ಲಕ್ಷ ಕಸಿದುಕೊಂಡು ಪರಾರಿಯಾಗಿದ್ದಾರೆ. ಸಂಜೆ ವೇಳೆಗೆ ವ್ಯಾಪಾರಿಯ ಕಾರು ಮತ್ತು ಆರೋಪಿಗಳ ಕಾರು ಪತ್ತೆಯಾಗಿದೆ. ಮತ್ತೊಂದು ಕಾರಿನಲ್ಲಿ ಅಥವಾ ಬದಲಿ ವಾಹನಗಳಲ್ಲಿ ಆರೋಪಿಗಳು ಪರಾರಿಯಾಗಿರುವ ಸಾಧ್ಯತೆ ಇದೆ.
ಏನಿದು ಘಟನೆ?:
ಸುಲ್ತಾನ್ ಬತ್ತೇರಿಯಿಂದ ಮಹಮ್ಮದ್ ಅಶ್ರಫ್ ಅವರು ₹1.50 ಲಕ್ಷ ಹಣದೊಂದಿಗೆ ಎಚ್.ಡಿ. ಕೋಟೆಗೆ ಅಡಿಕೆ ಖರೀದಿಸಲು ತೆರಳುತ್ತಿದ್ದರು. ಈ ವೇಳೆ ಎಚ್.ಡಿ. ಕೋಟೆ- ಮಾನಂದವಾಡಿ ರಸ್ತೆಯಲ್ಲಿ ಹಾರೋಹಳ್ಳಿ- ಗುಜ್ಜೇಗೌಡನಪುರ ನಡುವೆ ಎರಡು ಕಾರಿನಲ್ಲಿ ಬಂದ 6 ಮಂದಿ ಪೈಕಿ ನಾಲ್ವರು ಮುಸುಕಿದಾರಿಗಳು ವ್ಯಾಪಾರಿಯ ಕಾರನ್ನು ಅಡ್ಡಗಟ್ಟಿದ್ದಾರೆ. ಇಬ್ಬರನ್ನು ಕಾರಿನಿಂದ ಕೆಳಗೆ ಇಳಿಸಿ ಮಾರಕಾಸ್ತ್ರಗಳಿಂದ ಹೆದರಿಸಿ ಹಲ್ಲೆ ನಡೆಸಿ ಬಳಿಕ ಅವರನ್ನು ಕಾರಿನಿಂದ ಹೊರಗೆ ತಳ್ಳಿ ಹಣವಿದ್ದ ಕಾರಿನೊಂದಿಗೆ ಪರಾರಿಯಾಗಿದ್ದಾರೆ.
ಈ ವಿಚಾರ ತಿಳಿದು ಮೈಸೂರು ಎಸ್ಪಿ ಎನ್. ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಸಿ. ಮಲ್ಲಿಕ್, ಸೇರಿ ವಿವಿಧ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗಾಯಗೊಂಡಿದ್ದ ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2 ಕಾರು ಪತ್ತೆ:
ಡಕಾಯಿತಿ ನಡೆದ ಬಳಿಕ ಕಾರ್ಯಪ್ರವೃತ್ತರಾದ ಪೊಲೀಸರು, ಜಿಲ್ಲೆಯಾದ್ಯಂತ ತಪಾಸಣೆ ಕೈಗೊಂಡರು. ಡಕಾಯಿತಿ ನಡೆದ 10 ಕಿ.ಮೀ. ದೂರದಲ್ಲಿ ಮಾರ್ಬಳ್ಳಿ ಗ್ರಾಮಕ್ಕೆ ಸಂಪರ್ಕ ರಸ್ತೆಯಲ್ಲಿ ಆರೋಪಿಗಳ ಕಾರು ಪತ್ತೆಯಾಗಿದೆ. ಇನ್ನೂ ಗೋಪಾಲಪುರದ ಬಳಿ ವ್ಯಾಪಾರಿಯ ಕಾರು ಪತ್ತೆಯಾಗಿದ್ದು, ಡಕಾಯಿತರು ಕಾರಿನ ಗಾಜು ಒಡೆದು ಹಣ ತೆಗೆದುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಆರೋಪಿಗಳ ಪತ್ತೆಗಾಗಿ ಮೂರು ತಂಡಗಳನ್ನು ರಚಿಸಲಾಗಿದೆ ಎಂದು ಎಸ್ಪಿ ಎನ್. ವಿಷ್ಣುವರ್ಧನ್ ತಿಳಿಸಿದ್ದಾರೆ.