ಮನೆಯ ಕಿಟಕಿ ಬಾಗಿಲು ಮುರಿದು ಒಳ ನುಗ್ಗಿ ಹಣ, ಆಭರಣ ಕಳವು ಮಾಡಿದ್ದ ಕಾರ್ಪೆಂಟರ್‌ನನ್ನು ಸಂಪಿಗೆಹಳ್ಳಿ ಠಾಣಾ ಪೊಲೀಸರು ಬಂಧಿಸಿ 3.20 ಲಕ್ಷ ರು. ಮೌಲ್ಯದ 23 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮನೆಯ ಕಿಟಕಿ ಬಾಗಿಲು ಮುರಿದು ಒಳ ನುಗ್ಗಿ ಹಣ, ಆಭರಣ ಕಳವು ಮಾಡಿದ್ದ ಕಾರ್ಪೆಂಟರ್‌ನನ್ನು ಸಂಪಿಗೆಹಳ್ಳಿ ಠಾಣಾ ಪೊಲೀಸರು ಬಂಧಿಸಿ 3.20 ಲಕ್ಷ ರು. ಮೌಲ್ಯದ 23 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.ಸಾರಾಯಿಪಾಳ್ಯದ ನಿವಾಸಿ ಅಮೀನ್(22) ಬಂಧಿತ ಆರೋಪಿ. ದೂರುದಾರರು ಜ.25 ರಂದು ಥಣಿಸಂದ್ರದ ರಾಚೇನಹಳ್ಳಿಯಲ್ಲಿರುವ ತಮ್ಮ ಮನೆಗೆ ಬೀಗ ಹಾಕಿಕೊಂಡು ಮಧ್ಯಾಹ್ನ ಹೊರಗೆ ಹೋಗಿದ್ದು, ರಾತ್ರಿ ವಾಪಸ್ ಬರುವಷ್ಟರಲ್ಲಿ ಅವರ ಮನೆಯ ಸ್ಲೈಡ್ ಡೋರ್‌ನ ಕಿಟಕಿ ಬಾಗಿಲು ಮುರಿದಿರುವುದು ಕಂಡು ಬಂದಿದೆ.
ತಕ್ಷಣ ಮನೆಯ ಬೀಗ ತೆಗೆದು ಒಳಗೆ ಹೋಗಿ ನೋಡಿದಾಗ ಕೊಠಡಿಯ ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣಗಳು ಹಾಗೂ 1.60 ಲಕ್ಷ ನಗದು ಕಳವಾಗಿರುವುದು ಗಮನಕ್ಕೆ ಬಂದಿದ್ದು, ಕೂಡಲೇ ಅವರು ಠಾಣೆಗೆ ದೂರು ನೀಡಿ, ತಮ್ಮ ಮನೆಯ ಬಳಿ ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದ ವ್ಯಕ್ತಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು.ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿ ಬಳಿಕ ಆತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾಗ ಮನೆಗಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಬಳಿಕ ಆತನ ಮನೆಯಲ್ಲಿ ಬಚ್ಚಿಟ್ಟಿದ್ದ 3.20 ಲಕ್ಷ ರು. ಮೌಲ್ಯದ 23 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.