ಸಾರಾಂಶ
ಪಾನಮತ್ತ ಚಾಲಕ ಒನ್ ವೇ ರಸ್ತೆಯಲ್ಲಿ ಅತಿವೇಗವಾಗಿ ಕಾರು ಚಲಾಯಿಸಿ ಬ್ಯಾರಿಗೇಡ್‌ಗೆ ಡಿಕ್ಕಿ ಹೊಡೆದು ಬಳಿಕ ಪೊಲಿಸ್ ಕಾನ್ಸ್‌ಟೇಬಲ್‌ಗೂ ಗುದ್ದಿಸಿ ಗಾಯಗೊಳಿಸಿರುವ ಘಟನೆ ಆಡುಗೋಡಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು : ಪಾನಮತ್ತ ಚಾಲಕ ಒನ್ ವೇ ರಸ್ತೆಯಲ್ಲಿ ಅತಿವೇಗವಾಗಿ ಕಾರು ಚಲಾಯಿಸಿ ಬ್ಯಾರಿಗೇಡ್‌ಗೆ ಡಿಕ್ಕಿ ಹೊಡೆದು ಬಳಿಕ ಪೊಲಿಸ್ ಕಾನ್ಸ್‌ಟೇಬಲ್‌ಗೂ ಗುದ್ದಿಸಿ ಗಾಯಗೊಳಿಸಿರುವ ಘಟನೆ ಆಡುಗೋಡಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೋರಮಂಗಲದ ಜ್ಯೋತಿ ನಿವಾಸ್ ಕಾಲೇಜು ಜಂಕ್ಷನ್‌ನಲ್ಲಿ ಶನಿವಾರ ಮುಂಜಾನೆ ಸುಮಾರು 1.40ಕ್ಕೆ ಈ ಘಟನೆ ನಡೆದಿದೆ. ಘಟನೆಯಲ್ಲಿ ಕೋರಮಂಗಲ ಠಾಣೆ ಕಾನ್ಸ್‌ಟೇಬಲ್ ಬಿ.ಎನ್.ಶ್ರೀನಿವಾಸ್ ಗಾಯಗೊಂಡಿದ್ದು, ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇವರು ನೀಡಿದ ದೂರಿನ ಮೇರೆಗೆ ಕೇರಳ ಮೂಲದ ಕಾರು ಚಾಲಕ ನಂದುಕೃಷ್ಣ(29) ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಘಟನೆ?:
ಕೋರಮಂಗಲ ಪೊಲೀಸ್ ಠಾಣೆ ಕಾನ್ಸ್‌ಟೇಬಲ್ ಬಿ.ಎನ್,ಶ್ರೀನಿವಾಸ್ ಅವರನ್ನು ಮೇ 24ರ ರಾತ್ರಿ ಕೋರಮಂಗಲದ ವೈ.ಡಿ.ಮಠ ರಸ್ತೆಯಲ್ಲಿ ರಾತ್ರಿ ಗಸ್ತು ಕರ್ತವ್ಯ ನಿಯೋಜಿಸಲಾಗಿತ್ತು. ಅದರಂತೆ ಮುಂಜಾನೆ ಸುಮಾರು 1.40ಕ್ಕೆ ಜ್ಯೋತಿ ನಿವಾಸ್ ಕಾಲೇಜು ಜಂಕ್ಷನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೇ ವೇಳೆ ಮೈಕ್ರೋ ಲ್ಯಾಂಡ್ ಜಂಕ್ಷನ್ ಕಡೆಯಿಂದ ಜ್ಯೋತಿ ನಿವಾಸ್ ಕಾಲೇಜು ಜಂಕ್ಷನ್ ಕಡೆಗೆ ಏಕಮುಖ ರಸ್ತೆಯಲ್ಲಿ ಅತಿವೇಗವಾಗಿ ಕಾರೊಂದು ಬಂದಿದ್ದು, ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದಿದೆ. ಇದೇ ವೇಳೆ ಕರ್ತವ್ಯ ನಿರತ ಕಾನ್ಸ್‌ಟೇಬಲ್ ಶ್ರೀನಿವಾಸ್‌ಗೂ ಡಿಕ್ಕಿಯಾಗಿದೆ.
ಡಿಕ್ಕಿಯ ರಭಸಕ್ಕೆ ಶ್ರೀನಿವಾಸ್ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಬಳಿಕ ಸ್ಥಳೀಯರು ಹಾಗೂ ಸಹೋದ್ಯೋಗಿಗಳ ನೆರವಿನಿಂದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಇನ್ನು ಅಪಘಾತ ಎಸಗಿ ಕಾರಿನೊಳಗೆ ಇದ್ದ ಚಾಲಕ ನಂದುಕೃಷ್ಣನನ್ನು ಹೊರಗೆ ಬರುವಂತೆ ಕರೆದರೂ ಆತ ಕಾರಿನಿಂದ ಕೆಳಗೆ ಇಳಿಯದೇ ಉದ್ಧಟತನ ಪ್ರದರ್ಶಿಸಿದ್ದಾನೆ. ಬಳಿಕ ಸಾರ್ವಜನಿಕರ ಸಹಾಯದಿಂದ ಕಾರಿನ ಗಾಜು ಹೊಡೆದು ಆತನನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಆತ ಕಂಠಮಟ್ಟ ಮದ್ಯ ಸೇವಿಸಿರುವುದು ಕಂಡು ಬಂದಿದೆ.
ಕಂಠಮಟ್ಟ ಮದ್ಯ ಸೇವನೆ:
ಅರೆಪ್ರಜ್ಞಾವಸ್ಥೆಯಲ್ಲಿದ್ದ ಕಾರು ಚಾಲಕ ನಂದುಕೃಷ್ಣನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿದೆ. ಬಳಿಕ ಗಾಯಾಳು ಕಾನ್ಸ್‌ಟೇಬಲ್ ಶ್ರೀನಿವಾಸ್ ನೀಡಿದ ದೂರಿನ ಮೇರೆಗೆ ಪಾನಮತ್ತ ಚಾಲನೆ ಹಾಗೂ ಅಜಾಗರೂಕತೆ ಮತ್ತು ನಿರ್ಲಕ್ಷ್ಯದ ಚಾಲನೆ ಆರೋಪದಡಿ ಕಾರು ಚಾಲಕ ನಂದುಕೃಷ್ಣನ ವಿರುದ್ಧ ಆಡುಗೋಡಿ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬಳಿಕ ಕಾರು ಚಾಲಕ ನಂದುಕೃಷ್ಣನನ್ನು ವಿಚಾರಣೆ ನಡೆಸಿ ಠಾಣಾ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.