ದುಷ್ಕರ್ಮಿಗಳು ಮನೆ ಬಾಗಿಲ ಬೀಗ ಮುರಿದು ನಗದು ಸೇರಿದಂತೆ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ ಮಾಡಿ ಪರಾರಿಯಾಗಿರುವ ಘಟನೆ ಮದ್ದೂರು ನಗರದ ಸೋಮೇಗೌಡರ ಬೀದಿಯಲ್ಲಿ ಭಾನುವಾರ ತಡರಾತ್ರಿ ಜರುಗಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ದುಷ್ಕರ್ಮಿಗಳು ಮನೆ ಬಾಗಿಲ ಬೀಗ ಮುರಿದು ನಗದು ಸೇರಿದಂತೆ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ ಮಾಡಿ ಪರಾರಿಯಾಗಿರುವ ಘಟನೆ ನಗರದ ಸೋಮೇಗೌಡರ ಬೀದಿಯಲ್ಲಿ ಭಾನುವಾರ ತಡರಾತ್ರಿ ಜರುಗಿದೆ.ಸೋಮೇಗೌಡರ ಬೀದಿಯ ಕೋಳಿ ಮೊಟ್ಟೆ ವ್ಯಾಪಾರಿ ಎಂ.ಜೆ. ಬಸವಯ್ಯ ಮತ್ತು ಪೂರ್ಣಿಮಾ ದಂಪತಿ ಮನೆಯಲ್ಲಿ ಈ ಕೃತ್ಯ ನಡೆಸಿರುವ ದುಷ್ಕರ್ಮಿಗಳು 67 ಗ್ರಾಂ ತೂಕದ ಚಿನ್ನಾಭರಣ ಹಾಗೂ 1.50 ಲಕ್ಷ ರು. ನಗದು ದೋಚಿ ಪರಾರಿಯಾಗಿದ್ದಾರೆ. ಮಂಗಳೂರಿನ ಎಕ್ಸ್ಪರ್ಟ್ ಕಾಲೇಜಿನಲ್ಲಿ ಬಸವಯ್ಯ ಪುತ್ರಿ ವ್ಯಾಸಂಗ ಮಾಡುತ್ತಿದ್ದು, ಈಕೆಯನ್ನು ನೋಡಲು ಪತ್ನಿ ಪೂರ್ಣಿಮಾ ಹಾಗೂ ಮಗನೊಂದಿಗೆ ಕಳೆದ ನ.30ರಂದು ಮನೆ ಬೀಗ ಹಾಕಿ ಮಂಗಳೂರಿಗೆ ತೆರಳಿದ್ದರು.
ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ದುಷ್ಕರ್ಮಿಗಳು ಮನೆಯ ಗೇಟಿನ ಬೀಗ ಮುರಿದು ಒಳ ನುಗ್ಗಿ ನಂತರ ಯಾವುದೋ ಆಯುಧದಿಂದ ಕಿಟಕಿ ಮುರಿದು ಹಿಂಬಾಗಿಲ್ಲ ಬ್ಲಾಕ್ ತೆರೆದು ಒಳ ಪ್ರವೇಶ ಮಾಡಿ ಬೀರುವಿನಲ್ಲಿದ್ದ 1.50 ಲಕ್ಷ ರು. ನಗದು ಹಾಗೂ ವಾರ್ಡ ರೂಪಿನಲ್ಲಿದ್ದ 32 ಗ್ರಾಂ ತೂಕದ ಎರಡು ಚಿನ್ನದ ಬಳೆ, 25 ಗ್ರಾಂ ಚಿನ್ನದ ಮುತ್ತಿನ ಸರ ಹಾಗೂ 10 ಗ್ರಾಂ ತೂಕದ ಚಿನ್ನದ ಚೈನು ಸೇರಿದಂತೆ 6.5 ಲಕ್ಷ ರು ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾರೆ ಎಂದು ಮನೆ ಮಾಲೀಕ ಬಸವಯ್ಯ ಪೊಲೀಸರಿಗೆ ದೂರು ನೀಡಿದ್ದಾರೆ.ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿ ಯಶ್ವಂತ್ ಕುಮಾರ್, ಸಿಪಿಐ ನವೀನ್, ಹಾಗೂ ಅಪರಾಧ ವಿಭಾಗದ ಪೊಲೀಸರು, ಶ್ವಾನದಳ ಮತ್ತುಬೆರಳಚ್ಚು ತಜ್ಞರ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.