ಬಿಬಿಎಂಪಿ ಡಂಪಿಂಗ್‌ ಯಾರ್ಡ್‌ನಲ್ಲಿ ಬೆಂಕಿ, ದುರ್ವಾಸನೆ: ಜನ ಹೈರಾಣ

| Published : Jan 29 2024, 01:34 AM IST

ಸಾರಾಂಶ

ಎಲೆಕ್ಟ್ರಾನಿಕ್ ಸಿಟಿ ಸಮೀಪದ ಹುಲ್ಲಹಳ್ಳಿ ಕ್ವಾರಿಯಲ್ಲಿ ಕೆಲ ದಿನಗಳಿಂದ ಕಸಕ್ಕೆ ಬೆಂಕಿ ಬಿದ್ದು ಹೊತ್ತಿ ಉರಿಯುತ್ತಿದೆ.ಬೆಂಕಿಯ ಕೆನ್ನಾಲಿಗೆಯಿಂದಾಗಿ ದಟ್ಟ ಹೊಗೆ ಆವರಿಸಿದ್ದು, ಕೊಳೆತ ಕಸ ಸುಟ್ಟು ದುರ್ನಾತದಿಂದ ಜನರು ಹೈರಾಣಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಆನೇಕಲ್‌

ಎಲೆಕ್ಟ್ರಾನಿಕ್ ಸಿಟಿ ಸಮೀಪದ ಹುಲ್ಲಹಳ್ಳಿ ಕ್ವಾರಿಗೆ ಬಿಬಿಎಂಪಿ ಕಸವನ್ನು ಸುರಿಯುತ್ತಿದ್ದು, ಕೆಲ ದಿನಗಳಿಂದ ಕಸಕ್ಕೆ ಬೆಂಕಿ ಬಿದ್ದು ಹೊತ್ತಿ ಉರಿಯುತ್ತಿದೆ.

ಬೆಂಕಿಯ ಕೆನ್ನಾಲಿಗೆಯಿಂದಾಗಿ ದಟ್ಟ ಹೊಗೆ ಆವರಿಸಿದ್ದು, ಕೊಳೆತ ಕಸ ಸುಟ್ಟು ದುರ್ನಾತದಿಂದ ಜನರು ಹೈರಾಣಾಗಿದ್ದಾರೆ.

ಬಿಬಿಎಂಪಿ ಯಡವಟ್ಟಿಗೆ ಅಲ್ಲಿನ ನಿವಾಸಿಗಳ ನರಕಯಾತನೆ ಅನುಭವಿಸುವಂತಾಗಿದೆ. ಕಸದ ಡಂಪಿಂಗ್ ಯಾರ್ಡ್‌ನಲ್ಲಿ ಕೊಳೆತ ಕಸ ಉರಿಯಲು ಕೆಟ್ಟ ವಾಸನೆ ಕಡಿಮೆ ಆಗಲು ಕೆಲ ರಾಸಾಯನಿಕ ಸಿಂಪಡಿಸುವುದೂ ಕಾರಣವಾಗಿದೆ.

ಬಿಬಿಎಂಪಿ ಗುತ್ತಿಗೆದಾರರು ತಾಲೂಕಿನ ವಿವಿಧೆಡೆ ಕ್ವಾರಿಗಳನ್ನೇ ಆಯ್ದು ಕೊಂಡು ರಾತ್ರೋ ರಾತ್ರಿ ಅವೈಜ್ಞಾನಿಕವಾಗಿ ಕಸ ಸುರಿಯುತ್ತಿರುವ ಬಗ್ಗೆ ಗ್ರಾಮಸ್ತರು ಆರೋಪಿಸಿದ್ದಾರೆ.

ಕ್ವಾರಿ ಸಮೀಪ ಪ್ರತಿಷ್ಠಿತ ಶಾಲೆಗಳು, ವಸತಿ ಬಡಾವಣೆಗಳಿದ್ದರೂ ಕಸ ಸುರಿಯುತ್ತಿರುವ ಬಿಬಿಎಂಪಿ ಧೋರಣೆ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಕಳೆದ ಮೂರು ದಿನಗಳಿಂದ ಬೆಂಕಿ ನಂದಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸ ಪಡುತ್ತಿದ್ದು, ಒಂದು ಕಡೆ ಬೆಂಕಿ ನಂದಿಸಿದರೆ ಮತ್ತೊಂದು ಕಡೆ ಬೆಂಕಿ ವಿಸ್ತರಣೆಯಾಗಿ ತಹಬಂದಿಗೆ ಬರುವುದೇ ಸವಾಲಾಗಿದೆ. ಕಲುಷಿತ ವಾತಾವರಣದಿಂದ ಜನರು ಹಾಗೂ ಮಕ್ಕಳು ಆನಾರೋಗ್ಯಕ್ಕೆ ತುತ್ತಾಗುತ್ತಿದ್ದು, ಅಧಿಕಾರಿಗಳು ಇತ್ತ ಸುಳಿಯದಿರುವುದೂ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ.

ಸ್ಥಳೀಯ ಶಾಸಕರು ಈ ಬಗ್ಗೆ ಕ್ರಮ ವಹಿಸಬೇಕೆಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.