ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ವಿದೇಶಿ ಆರೋಪಿಯ ಮೇಲೆ ಸಿಸಿಬಿ ದಾಳಿ : ₹6 ಕೋಟಿ ಡ್ರಗ್ಸ್‌ ಜಪ್ತಿ

| Published : Jul 27 2024, 01:53 AM IST / Updated: Jul 27 2024, 04:35 AM IST

CCB

ಸಾರಾಂಶ

ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ವಿದೇಶಿ ಆರೋಪಿಯ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ 6 ಕೋಟಿ ಮೌಲ್ಯದ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ.

 ಬೆಂಗಳೂರು : ಬಟ್ಟೆ ವ್ಯಾಪಾರದಲ್ಲಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಅಕ್ರಮವಾಗಿ ಮಾದಕವಸ್ತು ಮಾರಾಟದಲ್ಲಿ ತೊಡಗಿದ್ದ ವಿದೇಶಿ ಪ್ರಜೆಯನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಮಾದಕವಸ್ತು ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ.

ನೈಜೀರಿಯಾ ಪ್ರಜೆ ಚುಕುದ್ವೇಮ್‌ ಜಸ್ಟೀಸ್‌ ನ್ವಾಫಾರ್‌(41) ಬಂಧಿತ. ಆರೋಪಿಯಿಂದ ಸುಮಾರು ₹6 ಕೋಟಿ ಮೌಲ್ಯದ 4 ಕೆ.ಜಿ. ಎಂಡಿಎಂಎ ಕ್ರಿಸ್ಟೆಲ್‌ ಮಾದವಸ್ತು, ಎರಡು ಮೊಬೈಲ್‌ ಫೋನ್‌, ಒಂದು ತೂಕದ ಯಂತ್ರ ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಇತ್ತೀಚೆಗೆ ಎಲೆಕ್ಟ್ರಾನಿಕ್‌ ಸಿಟಿಯ ಬೆಟ್ಟದಾಸನಪುರದ ಮನೆಯೊಂದರಲ್ಲಿ ವಿದೇಶಿ ಪ್ರಜೆಯೊಬ್ಬ ಅಕ್ರಮವಾಗಿ ಮಾದಕವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಲಭವಾಗಿ ಹಣ ಗಳಿಸಲು ಡ್ರಗ್ಸ್‌ ದಂಧೆ:

ಆರೋಪಿ ಜಸ್ಟೀಸ್‌ ಬಿಜಿನೆಸ್‌ ವೀಸಾದಡಿ ಕೆಲ ವರ್ಷಗಳ ಹಿಂದೆ ಭಾರತಕ್ಕೆ ಬಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ನೆಲೆಸಿ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ. ವ್ಯಾಪಾರದಲ್ಲಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಮೂರು-ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ. ಇಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳ ಮುಖಾಂತರ ಮಾದಕವಸ್ತು ಮಾರಾಟದ ಬಗ್ಗೆ ತಿಳಿದುಕೊಂಡು ಡ್ರಗ್ಸ್‌ ದಂಧೆ ಶುರು ಮಾಡಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಮುಂಬೈನಿಂದ ನಗರಕ್ಕೆ ಡ್ರಗ್ಸ್‌:

ಮುಂಬೈನಲ್ಲಿರುವ ಸ್ನೇಹಿತರಿಂದ ಕಡಿಮೆ ಬೆಲೆಗೆ ಎಂಡಿಎಂಎ ಕ್ರಿಸ್ಟೆಲ್‌ ಮಾದಕವಸ್ತು ಖರೀದಿಸಿ ಬಳಿಕ ಬೆಂಗಳೂರಿಗೆ ತಂದು ಐಟಿ ಉದ್ಯೋಗಿಗಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ಪರಿಚಿತರಿಗೆ 1 ಗ್ರಾಂಗೆ ₹12 ಸಾವಿರದಿಂದ ₹15 ಸಾವಿರವರೆಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಗಳಿಸುತ್ತಿದ್ದ ವಿಚಾರ ವಿಚಾರಣೆ ವೇಳೆ ಬಯಲಾಗಿದೆ.

ಕಾಸ್ಮಿಟಿಕ್ಸ್‌ ಬಾಕ್ಸ್‌ಗಳಲ್ಲಿ ಸಾಗಾಟ!

ಆರೋಪಿ ಜಸ್ಟೀಸ್‌ ಮುಂಬೈನಲ್ಲಿ ಸ್ನೇಹಿತರ ಬಳಿ ಡ್ರಗ್ಸ್‌ ಖರೀದಿಸಿದ ಬಳಿಕ ಮಕ್ಕಳು ಸೇವಿಸುವ ಸೆರಲೆಕ್ಸ್‌ ಪುಡಿಯ ಪೊಟ್ಟಣ, ಸೌಂದರ್ಯ ವರ್ಧಕ ವಸ್ತುಗಳ ಬಾಕ್ಸ್‌ಗಳಲ್ಲಿ ಡ್ರಗ್ಸ್‌ ಬಚ್ಚಿಟ್ಟು ಬೆಂಗಳೂರಿಗೆ ತರುತ್ತಿದ್ದ. ಇದರಿಂದ ಯಾರಿಗೂ ಅನುಮಾನ ಬರುತ್ತಿರಲಿಲ್ಲ. ಬಳಿಕ ಗ್ರಾಹಕರ ಬೇಡಿಕೆ ಮೇರೆಗೆ ಎಲೆಕ್ಟ್ರಾನಿಕ್ಸ್‌ ಯಂತ್ರದಲ್ಲಿ ತೂಕ ಮಾಡಿ ಮಾರಾಟ ಮಾಡುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಆರೋಪಿಯ ವಿದೇಶಿ ಮೂಲದ ಸಹಚರ ನಗರದಲ್ಲಿ ಅನಧಿಕೃತವಾಗಿ ನೆಲೆಸಿದ್ದು, ಆತನನ್ನು ವಶಕ್ಕೆ ಪಡೆದು ಗಡಿಪಾರಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಊಬರ್‌ ಕ್ಯಾಬ್‌ ಚಾಲಕನಿಂದ ₹1.50 ಕೋಟಿಯ ಡ್ರಗ್ಸ್‌ ಜಪ್ತಿ

ಮತ್ತೊಂದು ಪ್ರಕರಣದಲ್ಲಿ ಡ್ರಗ್ಸ್‌ ಮಾರಾಟ ದಂಧೆಯಲ್ಲಿ ತೊಡಗಿದ್ದ ಊಬರ್‌ ಕ್ಯಾಬ್‌ ಚಾಲಕನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ಆಕಾಶ್‌(26) ಬಂಧಿತ. ಆರೋಪಿಯಿಂದ ಸುಮಾರು ₹1.50 ಕೋಟಿ ಮೌಲ್ಯದ 746 ಗ್ರಾಂ ಕೊಕೇನ್‌ ಮಾದಕವಸ್ತು ಜಪ್ತಿ ಮಾಡಲಾಗಿದೆ.

ವರ್ತೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ಮಾದಕವಸ್ತು ಮಾರಾಟದಲ್ಲಿ ತೊಡಗಿರುವ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು 20 ಗ್ರಾಂ ಕೊಕೇನ್‌ ಸಮೇತ ಬಂಧಿಸಲಾಗಿದೆ. ಆರೋಪಿ ಹೆಚ್ಚಿನ ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಜಿಗಣಿಯ ಮನೆಯೊಂದರಲ್ಲಿ ಸಂಗ್ರಹಿಸಿದ್ದ 726 ಗ್ರಾಂ ಕೊಕೇನ್‌ ಜಪ್ತಿ ಮಾಡಲಾಗಿದೆ. ಕೇರಳ ಮೂಲದ ಆರೋಪಿ ಆಕಾಶ್‌ ನಗರದಲ್ಲಿ ಹಲವು ವರ್ಷಗಳಿಂದ ಊಬರ್‌ ಕ್ಯಾಬ್‌ ಓಡಿಸಿಕೊಂಡಿದ್ದ. ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಡ್ರಗ್ಸ್‌ ಮಾರಾಟ ದಂಧೆಯಲ್ಲಿ ತೊಡಗಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಸಿಬಿ ತಂಡಕ್ಕೆ ₹1 ಲಕ್ಷ ಬಹುಮಾನ

ಈ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಡ್ರಗ್ಸ್‌ ಪೆಡ್ಲರ್‌ಗಳನ್ನು ಬಂಧಿಸಿ, ಬರೋಬ್ಬರಿ ₹7.50 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ ಮಾಡಿದ ಸಿಸಿಬಿ ಪೊಲೀಸರ ಕಾರ್ಯವನ್ನು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ಪ್ರಶಂಸಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಸಿಸಿಬಿ ಅಧಿಕಾರಿಗಳು-ಸಿಬ್ಬಂದಿಯ ತಂಡಕ್ಕೆ ₹1 ಲಕ್ಷ ನಗದು ಬಹುಮಾನ ಘೋಷಿಸಿದ್ದಾರೆ.