ಸಾರಾಂಶ
ಬೆಂಗಳೂರು : ಐಷಾರಾಮಿ ಹೋಟೆಲ್‌ಗಳಲ್ಲಿ ಉಳಿದುಕೊಂಡು ಬಳಿಕ ನಕಲಿ ಇ-ಪೇಮೆಂಟ್ ಮಾಡಿ ವಂಚಿಸುತ್ತಿದ್ದ ಖತರ್ನಾಕ್ ವಂಚಕನನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ವಿಶಾಖಪಟ್ಟಣಂ ಮೂಲದ ಬೊರಾಡ ಸುಧೀರ್(24) ಬಂಧಿತ. ಇತ್ತೀಚೆಗೆ ನಗರದ ಗಾಲ್ಫ್ ಕೋರ್ಸ್ ರಸ್ತೆಯ ಪಂಚತಾರಾ ಹೋಟೆಲ್‌ನಲ್ಲಿ ತಂಗಿದ್ದ ಆರೋಪಿಯು ನಕಲಿ ಇ-ಪೇಮೆಂಟ್ ಮಾಡಿ ವಂಚಿಸಿದ್ದ. ಈ ಸಂಬಂಧ ಹೋಟೆಲ್ ಸಿಬ್ಬಂದಿ ಸಮೀರ್ ದೇಸಾಯಿ ಎಂಬುವವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಘಟನೆ?:
ಆರೋಪಿ ಸುಧೀರ್ ಮಾ.31ರಂದು ಆನ್‌ಲೈನ್‌ನಲ್ಲಿ ಪಂಚತಾರಾ ಹೋಟೆಲ್‌ನಲ್ಲಿ ಒಂದು ಕೊಠಡಿ ಮತ್ತು ಓಡಾಡಲು ಹೋಟೆಲ್‌ನ ಬಿಎಂಡಬ್ಲ್ಯೂ ಕಾರನ್ನು ಮುಂಗಡ ಕಾಯ್ದಿರಿಸಿದ್ದ. ಏ.1ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೋಟೆಲ್‌ಗೆ ಬಿಎಂಡಬ್ಲ್ಯೂ ಕಾರಿನಲ್ಲಿ ಬಂದಿದ್ದ. ಈ ವೇಳೆ ಚೆಕ್ ಇನ್ ಆಗುವಾಗ ಹಣ ಪಾವತಿಸುವಂತೆ ಹೋಟೆಲ್ ಸಿಬ್ಬಂದಿ ಕೇಳಿದ್ದಾರೆ. ಈ ವೇಳೆ ಆರೋಪಿಯು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ₹17,346 ಪಾವತಿಸಿರುವುದಾಗಿ ತೋರಿಸಿದ್ದಾನೆ. ಈ ವೇಳೆ ಹೋಟೆಲ್ ಸಿಬ್ಬಂದಿ ಹಣ ಪಾವತಿ ಬಗ್ಗೆ ಯಾವುದೇ ಸಂದೇಶ ಬಂದಿಲ್ಲ ಎಂದಿದ್ದಾರೆ. ಇದಕ್ಕೆ ಆರೋಪಿಯು ನನ್ನ ಖಾತೆಯಿಂದ ಹಣ ಕಡಿತವಾಗಿದೆ. ನಿಮ್ಮ ಬ್ಯಾಂಕಿನಲ್ಲಿ ತಾಂತ್ರಿಕ ದೋಷ ಇರಬಹುದು ಎಂದಿದ್ದಾನೆ. ಇದ್ದರೂ ಇರಬಹುದು ಎಂದು ನಂಬಿದ ಹೋಟೆಲ್ ಸಿಬ್ಬಂದಿ, ಆರೋಪಿ ಸುಧೀರ್‌ನನ್ನು ಕೊಠಡಿಗೆ ಕಳುಹಿಸಿದ್ದಾರೆ.
ಬಿಎಂಡಬ್ಲ್ಯು ಕಾರೇ ಬೇಕು:
ಮಾರನೇ ದಿನ ಆರೋಪಿ ಸುಧೀರ್, ನಾನು ಸ್ಥಳೀಯವಾಗಿ ಓಡಾಡಲು ನಿನ್ನೆ ಒದಗಿಸಿದ್ದ ಬಿಎಂಡಬ್ಲ್ಯೂ ಕಾರನ್ನೇ ಒದಗಿಸುವಂತೆ ಕೇಳಿದ್ದಾನೆ. ಅದರಂತೆ ಹೋಟೆಲ್‌ನವರು ಕಾರು ಹಾಗೂ ಚಾಲಕನನ್ನು ಆರೋಪಿಯ ಸೇವೆಗೆ ನಿಯೋಜಿಸಿದ್ದಾರೆ. ಬಳಿಕ ಆರೋಪಿಯು ಆ ಕಾರಿನಲ್ಲಿ ನಗರದ ವಿವಿಧೆಡೆ ಓಡಾಡಿದ್ದಾನೆ. ಬಳಿಕ ಸಂಜೆ ನೇರವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವಂತೆ ಕಾರಿನ ಚಾಲಕನಿಗೆ ಹೇಳಿದ್ದಾನೆ. ಈ ವೇಳೆ ಕಾರು ಚಾಲಕ ವಿಮಾನ ನಿಲ್ದಾಣಕ್ಕೆ ತೆರಳಲು ಹೋಟೆಲ್‌ನಿಂದ ಅನುಮತಿ ಇಲ್ಲ ಎಂದಿದ್ದಾನೆ. ಬಳಿಕ ಆರೋಪಿಯನ್ನು ಹೋಟೆಲ್‌ಗೆ ಕರೆದೊಯ್ದಿದ್ದಾನೆ.₹80 ಸಾವಿರ ಬದಲು ₹10 ಸಾವಿರ ಪಾವತಿ!
ಈ ವೇಳೆ ಹೋಟೆಲ್ ಸಿಬ್ಬಂದಿ ಕೊಠಡಿ ಬಾಡಿಗೆ ಹಾಗೂ ಕಾರಿನ ಬಾಡಿಗೆ ಸೇರಿ ಒಟ್ಟು ₹80,010 ಪಾವತಿಸುವಂತೆ ಸೂಚಿಸಿದ್ದಾರೆ. ಈ ವೇಳೆ ಆರೋಪಿಯು ಒಂದು ಕ್ರೆಡಿಟ್ ಕಾರ್ಡ್ ನೀಡಿದ್ದಾನೆ. ಆ ಕಾರ್ಡಿನಲ್ಲಿ ಹಣ ಪಾವತಿಯಾಗಿಲ್ಲ. ಈ ವಿಚಾರ ಹೇಳಿದಾಗ ಆರೋಪಿಯು ₹10,750 ನೀಡಿದ್ದಾನೆ. ಉಳಿಕೆ ಹಣ ಕೊಡಿ ಎಂದು ಹೋಟೆಲ್ ಸಿಬ್ಬಂದಿ ಕೇಳಿದಾಗ, ಸದ್ಯಕ್ಕೆ ಹಣ ಇಲ್ಲ. ಸ್ವಲ್ಪ ಸಮಯ ಕೊಡಿ ಎಂದಿದ್ದಾನೆ.
ರಾತ್ರಿ 8 ಗಂಟೆ ಬಳಿಕ ಹೋಟೆಲ್ ಸಿಬ್ಬಂದಿ ಬಾಕಿ ಹಣ ಪಾವತಿಸುವಂತೆ ಕೇಳಿದಾಗ, ಆರೋಪಿಯು ‘ನಾನು ರಾತ್ರಿಯೇ ಎಲ್ಲಾ ಹಣ ಪಾವತಿಸಿದ್ದೇನೆ. ನಿಮ್ಮ ಮಷಿನ್‌ನಲ್ಲಿಯೇ ಸಮಸ್ಯೆ ಇದೆ ಎಂದು ವಾದಿಸಿದ್ದಾನೆ. ಅಷ್ಟರಲ್ಲಿ ಮೇ ಫೇರ್ ಸ್ಪಾ ರೆಸಾರ್ಟ್‌ನಿಂದ ಆರೋಪಿಗೆ ನಿರಂತರವಾಗಿ ಕರೆಗಳು ಬರುತ್ತಿದ್ದವು. ಈತನ ವರ್ತನೆ ಬಗ್ಗೆ ಅನುಮಾನಗೊಂಡ ಹೋಟೆಲ್ ಸಿಬ್ಬಂದಿ, ಆನ್‌ಲೈನ್‌ನಲ್ಲಿ ಈತನ ಬಗ್ಗೆ ಶೋಧಿಸಿದಾಗ ಈತನ ವಂಚನೆಗಳು ಬಯಲಾಗಿವೆ. ಬಳಿಕ ಹೋಟೆಲ್ ಸಿಬ್ಬಂದಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರ್ಮಿ ಆಫೀಸರ್ ಸೋಗಲ್ಲಿ ವಂಚನೆ:
ಆರೋಪಿ ಸುಧೀರ್ ಈ ಹಿಂದೆ ಕೊಲ್ಕತ್ತದಲ್ಲಿ ಆರ್ಮಿ ಆಫೀಸರ್ ಇಂಚಾರ್ಜ್ ಎಂದು ಹೇಳಿಕೊಂಡು ಪೋರ್ಟ್ ವಿಲಿಯಂ ಅಕ್ರಮವಾಗಿ ಪ್ರವೇಶಿಸಿದ್ದ. ಈ ಸಂಬಂಧ ಪ್ರಗತಿ ಮೈದಾನ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿಯು ವಂಚನೆಯನ್ನೇ ರೂಢಿ ಮಾಡಿಕೊಂಡಿದ್ದೇನೆ. ಮೇ ಫೇರ್ ಸ್ಪಾ ರೆಸಾರ್ಟ್ ಮತ್ತು ಸಿಕ್ಕಿಂನಲ್ಲಿ ಬಿಸ್ವಜಿತ್ ಬಿಸ್ವಾಸ್ ಹೆಸರಿನಲ್ಲಿ ನಕಲಿ ಪಾಸ್‌ಪೋರ್ಟ್ ಹಾಗೂ ಇತರೆ ನಕಲಿ ದಾಖಲೆಗಳನ್ನು ಬಳಸಿ ನಕಲಿ ಇ-ಪೇಮೆಂಟ್ ರಶೀದಿ ತೋರಿಸಿ ಹೋಟೆಲ್‌ಗಳಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ.