ಅಪಾರ್ಟ್‌ಮೆಂಟ್‌ ಈಜು ಕೊಳದಲ್ಲಿ ಮಗು ಸಾವು: 7 ಮಂದಿಯ ಬಂಧನ

| Published : Feb 11 2024, 01:48 AM IST / Updated: Feb 12 2024, 05:01 PM IST

Swimming Pool
ಅಪಾರ್ಟ್‌ಮೆಂಟ್‌ ಈಜು ಕೊಳದಲ್ಲಿ ಮಗು ಸಾವು: 7 ಮಂದಿಯ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಮಗು ಅಪಾರ್ಟ್‌ಮೆಂಟ್‌ನ ಈಜುಕೊಳದಲ್ಲಿ ಬಿದ್ದು ಮೃತಪಟ್ಟಿದ್ದ ಘಟನೆ ಸಂಬಂಧ ಸಂಘದ ಅಧ್ಯಕ್ಷ ಸೇರಿ 7 ಮಂದಿಯನ್ನು ಬಂಧಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇತ್ತೀಚೆಗೆ ವರ್ತೂರು ಸಮೀಪದ ಪ್ರೆಸ್ಟೀಜ್‌ ಲೇಕ್ ಸೈಡ್ ಹೆಬಿಬಾಬ್ ಅಪಾರ್ಟ್‌ಮೆಂಟ್‌ನ ಈಜು ಕೊಳದಲ್ಲಿ ವಿದ್ಯುತ್ ಸ್ಪರ್ಶಿಸಿ 9 ವರ್ಷದ ಬಾಲಕಿ ಸಾವು ಪ್ರಕರಣ ಸಂಬಂಧ ಅಪಾರ್ಟ್‌ಮೆಂಟ್‌ನ ನಿವಾಸಿಗಳ ಸಂಘದ ಅಧ್ಯಕ್ಷ ಸೇರಿದಂತೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹೆಬಿಬಾಬ್‌ ಅಪಾರ್ಟ್‌ಮೆಂಟ್‌ ನಿವಾಸಿಗಳ ಸಂಘದ ಅಧ್ಯಕ್ಷ ದೇಬಶಿಸ್‌ ಸಿನ್ಹಾ, ಜಾವೇದ್‌ ಸಫೀಕ್ ರಾಂ, ಸಂತೋಷ್ ಮಹಾರಾಣ, ಬಿಕಾಸ್‌ ಕುಮಾರ್‌ ಫೋರಿಡಾ, ಭಕ್ತ ಚರಣ್‌ ಪ್ರಧಾನ್‌, ಸುರೇಶ್ ಹಾಗೂ ಗೋವಿಂದ್ ಮಂಡಲ್‌ ಬಂಧಿತರಾಗಿದ್ದಾರೆ.

2023ರ ಡಿ.28ರಂದು ಅಪಾರ್ಟ್‌ಮೆಂಟ್ ಆವರಣದ ಈಜುಕೊಳದಲ್ಲಿ ಆಟವಾಡುವಾಗ ರಾಜೇಶ್ ಕುಮಾರ್ ಧಮೆರ್ಲಾ ದಂಪತಿ ಪುತ್ರಿ 9 ವರ್ಷದ ಮಾನ್ಯಾ ಮೃತಪಟ್ಟಿದ್ದಳು. ಈಜು ಕೊಳದಲ್ಲಿ ವಿದ್ಯುತ್ ಪ್ರವಹಿಸಿರುವ ಬಗ್ಗೆ ಅಪಾರ್ಟ್‌ಮೆಂಟ್ ನಿರ್ವಹಣೆ ಹೊತ್ತಿರುವ ಸಂಘದ ಹಾಗೂ ಎಲೆಕ್ಟ್ರಿಶಿಯನ್‌ ಅವರಿಗೆ ಮಾಹಿತಿ ನೀಡಿದರೂ ಸುರಕ್ಷತಾ ಕ್ರಮ ಜರುಗಿಸಲಿಲ್ಲ. ಇದರಿಂದ ತಮ್ಮ ಮಗಳ ಸಾವಾಗಿದೆ. ತಮ್ಮ ಮಗಳ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಮೃತ ಬಾಲಕಿ ತಂದೆ ರಾಜೇಶ್ ಆಗ್ರಹಿಸಿದ್ದರು.

ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಘಟನಾ ಸ್ಥಳ ಪರಿಶೀಲಿಸಿದಾಗ ಅಪಾರ್ಟ್‌ಮೆಂಟ್‌ ನಿವಾಸಿಗಳ ಸಂಘದ ನಿರ್ಲಕ್ಷ್ಯತನಕ್ಕೆ ಪುರಾವೆ ಸಿಕ್ಕಿತು. ಈ ಮಾಹಿತಿ ಆಧರಿಸಿ ಸಂಘದ ಅಧ್ಯಕ್ಷ ಸೇರಿದಂತೆ 7 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.