ಮಕ್ಕಳಲ್ಲಿ ಪುಸ್ತಕ ಓದುವ ಆಸಕ್ತಿ ಬೆಳೆಸಬೇಕು: ಶೇಷಶಾಸ್ತ್ರಿ

| Published : Jan 27 2024, 01:23 AM IST

ಸಾರಾಂಶ

ಮನೆಯಲ್ಲಿ ಗ್ರಂಥಾಲಯ ಇರಬೇಕು: ನಿವೃತ್ತ ಪ್ರಾಧ್ಯಾಪಕ. ಸಪ್ನ ಬುಕ್‌ಹೌಸ್ಸಲ್ಲಿ ಪುಸ್ತಕ ಸುಗ್ಗಿ ಸಂವಾದ

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸವನ್ನು ಪಾಲಕರು ಮತ್ತು ಗುರುಗಳು ಬೆಳೆಸಬೇಕು. ಮನೆಯಲ್ಲೇ ಒಂದು ಗ್ರಂಥಾಲಯ ಸೃಷ್ಟಿಯಾಗಬೇಕು ಎಂದು ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ। ಆರ್.ಶೇಷಶಾಸ್ತ್ರಿ ಹೇಳಿದರು.

ಶುಕ್ರವಾರ ನಗರದಲ್ಲಿ ಸಪ್ನ ಬುಕ್ ಹೌಸ್ ಆಯೋಜಿಸಿದ್ದ ಪುಸ್ತಕ ಸುಗ್ಗಿ ‘ಅಕ್ಷರ ಸುಗ್ಗಿ ಮಾತಿನ ಹುಗ್ಗಿ’ ಸಂವಾದದಲ್ಲಿ ಮಾತನಾಡಿ, ಪುಸ್ತಕಗಳನ್ನು ಕೊಂಡು ಓದಬೇಕು. ಪುಸ್ತಕಗಳನ್ನು ಪ್ರೀತಿಸಬೇಕು. ಶಾಲೆಯಲ್ಲಿ ಗುರುಗಳಿಂದ ಓದುವ ಪ್ರೇರಣೆ ಆಗಬೇಕು. ಹೊಸ ಮನೆ ಕಟ್ಟಿಸಿದವರು ಗೃಹ ಪ್ರವೇಶಕ್ಕೆ ಬಂದವರಿಗೆ ಎಲ್ಲ ಕೊಠಡಿಗಳನ್ನು ತೋರಿಸುತ್ತಾರೆ. ಆದರೆ, ಓದುವ ಕೊಠಡಿ, ಗ್ರಂಥಾಲಯದ ಬಗ್ಗೆ ಮಾತನಾಡುವುದಿಲ್ಲ. ಜ್ಞಾನ ನೀಡುವ ಓದಿನ ಆಸಕ್ತಿಗೆ ಮನೆಯಲ್ಲೇ ಗ್ರಂಥಾಲಯ ಸೃಷ್ಟಿಸಬೇಕು ಎಂದು ಹೇಳಿದರು.

ಪತ್ರಕರ್ತ ಜೋಗಿ ಮಾತನಾಡಿ, ಕನ್ನಡ ಭಾಷೆಯನ್ನು ಜೀವಂತವಾಗಿರಿಸುವ, ಸ್ಪೂರ್ತಿ ನೀಡುವ ಕತೆ, ಕವನ ಸ್ಪರ್ಧೆಗಳು ನಿತ್ಯ ನಡೆಯಬೇಕು. ಹೊಸ ಬರಹಗಾರರು, ಲೇಖಕರಿಗೆ ಪ್ರಶಸ್ತಿಗಳು ಸಿಗಬೇಕು. ಅದರಿಂದ ಸ್ಪೂರ್ತಿ ಸಿಗುತ್ತದೆ. ಲೇಖಕರನ್ನು ಪರಿಚಯಿಸುವ, ಮರು ಓದಿಗೆ ಪ್ರಶಸ್ತಿಗಳು ಪ್ರೇರೇಪಿಸುತ್ತವೆ. ಕನ್ನಡದಲ್ಲಿ ಸುಮಾರು 5 ಸಾವಿರ ಪ್ರಶಸ್ತಿಗಳಿವೆ. ಕನ್ನಡ ಕತೆ, ಕವನ ಸ್ಪರ್ಧೆಗಳು ಹೆಚ್ಚು ಹೆಚ್ಚು ಆಯೋಜನೆಯಾಗುತ್ತಿವೆ. ವಿದ್ಯಾರ್ಥಿಗಳು, ಯುವ ಜನತೆ ಸೇರಿದಂತೆ ಹೊಸ ಬರಹಗಾರರ ಸಂಖ್ಯೆ ಹೆಚ್ಚುತ್ತಿದೆ. ಬರೆಯುವ ಕಲೆ ಹಬ್ಬುತ್ತಿರುವುದು ಸಂತೋಷದ ವಿಚಾರ ಎಂದರು.

ರಾ.ನಂ.ಚಂದ್ರಶೇಖರ್ ಮಾತನಾಡಿ, ಕನ್ನಡ ನಾಡಿನಲ್ಲಿ ಕನ್ನಡಕ್ಕಾಗಿ ಕನ್ನಡಿಗರು ಹೋರಾಡಬೇಕಾದ ಪರಿಸ್ಥಿತಿ ಬಂದಿರುವುದು ದುರಂತ. ವಾಣಿಜ್ಯ ಮಳಿಗೆಗಳಿಗೆ ಕನ್ನಡ ನಾಮಫಲಕಗಳನ್ನು ಕನ್ನಡದಲ್ಲಿ ಅಳವಡಿಸಿದ್ದರೆ ಹೋರಾಟ ಮಾಡುವ ಪರಿಸ್ಥಿತಿಯೇ ಬರುತ್ತಿರಲಿಲ್ಲ. ಕನ್ನಡ ಹೋರಾಟಗಾರರನ್ನು ಸರಕಾರಗಳು ಕೆಟ್ಟದಾಗಿ ನಡೆಸಿಕೊಳ್ಳುತ್ತಿವೆ. ಹೋರಾಟ ಮಾಡಬಾರದು ಎನ್ನುವಂತಹ ಪರಿಸ್ಥಿತಿ ಸೃಷ್ಟಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಪತ್ರಕರ್ತೆ ವಿದ್ಯಾರಶ್ಮಿ ಪೆಲತ್ತಡ್ಕ, ಗಾಣದಾಳು ಶ್ರೀಕಂಠ, ಶಶಿಧರ ಹಾಲಾಡಿ, ಸಪ್ನ ಬುಕ್ ಹೌಸ್‌ನ ನಿತಿನ್ ಷಾ ಉಪಸ್ಥಿತರಿದ್ದರು.